ಕಲ್ಪ ಮೀಡಿಯಾ ಹೌಸ್ | ಸೊರಬ |
ಕನ್ನಡ ರಥವ ಜಿಲ್ಲೆಯ ಎಲ್ಲೆಡೆ ಸರಾಗವಾಗಿ ಸಾಗಿಸಿಕೊಂಡು ಹೋಗಲು ಸಮಯ ಇದ್ದವರು ನನ್ನೊಡನೆ ಬನ್ನಿ, ಹೊಸ ಚಿಂತನೆ ಅನುಷ್ಠಾನ, ಸಕಾರಾತ್ಮಕ ಮನೋಭಾವದ ಪದಾಧಿಕಾರಿಗಳು ಪರಿಷತ್ತಿಗೆ ಅವಶ್ಯವಿದೆ ಎಂದು ನೂತನ ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್, ವಿವಿಧ ಕನ್ನಡಪರ ಸಂಘಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ, ಹಿರಿಯ ಸದಸ್ಯರಿಗೆ ಗೌರವಾರ್ಪಣೆ ಮತ್ತು ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.
ಬೇರೆ ಜಿಲ್ಲೆಯವರಿಗೆ ಮಾದರಿಯಾಗುವಂತ ಚಿಂತನೆ, ನಿಸ್ವಾರ್ಥತೆ, ಬದ್ಧತೆಯ ಮೂಲಕ ನಾವು ಕನ್ನಡ ತೇರನ್ನು ಎಳೆಯೋಣ, ಈ ನಿಟ್ಟಿನಲ್ಲಿ ರೂಪರೇಷೆ ಸಿದ್ದಪಡಿಸಿಕೊಂಡು ಸಾಹಿತ್ಯಾಸಕ್ತರ ಅಭಿಪ್ರಾಯ ಪಡೆದು ಮುನ್ನಡೆಸೋಣ. ಪರಿಷತ್ ಕೆಲಸ ಹೇಗೆ ಮಾಡಬೇಕೆಂಬುದನ್ನು ತಾವು ಮನನ ಮಾಡಿಕೊಂಡಿದ್ದು, ಬದ್ಧತೆಯಿಂದ ಮುನ್ನಡೆಯುವ ಜೊತೆಗೆ ಪರಿಷತ್‌ಗೆ 100 ವರ್ಷ ಆಗುತ್ತಿರುವ ಹಿನ್ನೆಲೆಯಲ್ಲಿ 106 ಗಾಯಕರನ್ನು ಜಿಲ್ಲೆಯಲ್ಲಿ ಗುರುತಿಸಿ ಗಾಯನ ಸಂಯೋಜನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಜಿಲ್ಲಾ ಸಾಹಿತ್ಯ ಪರಿಷತ್ ಆರ್ಥಿಕವಾಗಿ ಬಲಾಢ್ಯವಾಗಿರದೇ ಇದ್ದರೂ ಸಾಹಿತ್ಯಾಸಕ್ತರ ಹಾಗೂ ಪ್ರಾಯೋಜಕರ ನೆರವಿನಿಂದ ಈ ಹಿಂದಿನ ಕಾರ್ಯಕ್ರಮಗಳ ಜೊತೆ ವಿನೂತನ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಈ ವೇಳೆ ಸಾಹಿತ್ಯಾಸಕ್ತರನೇಕರು, ವಿವಿಧ ಸಂಘಸಂಸ್ಥೆಯವರು ಜಿಲ್ಲಾಧ್ಯಕ್ಷರನ್ನು ಗೌರವಿಸಿ ಅಭಿನಂದಿಸಿದರು. ತಾಲ್ಲೂಕು ಕಸಾಪ ಹಿರಿಯ ಸದಸ್ಯರಿಗೆ ಸನ್ಮಾನಿಸಲಾಯಿತು.
ಜಿಲ್ಲಾ ಕಸಾಪ ಮಾಜಿಉಪಾಧ್ಯಕ್ಷ ಡಾ. ಎಂ.ಕೆ.ಭಟ್, ತಾಲೂಕಿನಲ್ಲಿ ಹಮ್ಮಿಕೊಳ್ಳುವ ಮೂರು ಸಾಹಿತ್ಯಾಸಕ್ತರ ಸಮಾರಂಭಗಳನ್ನು ತಾವು ನಡೆಸಿಕೊಡುವ ಜೊತೆಗೆ ಎರಡು ದತ್ತಿನಿಧಿಗಳನ್ನು ನೀಡುವುದಾಗಿ ತಿಳಿಸಿದರು.
ಮುಂದಿನ ಪರಿಷತ್ ಕಾರ್ಯಚಟುವಟಿಕೆಗಳ ರೂಪರೇಷೆ ಬಗ್ಗೆ ಅನೇಕರು ಸಲಹೆ ನೀಡಿದರು. ಕಸಾಪ ಹಿರಿಯ ಸದಸ್ಯ ಅ.ಕೋ. ವಿರೂಪಾಕ್ಷಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ಡಾ.ಎಂ.ಕೆ.ಭಟ್, ಕೆ.ಮಂಜುನಾಥ್ ಹಳೇಸೊರಬ, ಸಂಜಯಡೋಂಗ್ರೆ ಇದ್ದರು.
ಕಸಾಸಾಂವೇದಿಕೆ, ಕರ್ನಾಟಕ ಜಾನಪದ ಪರಿಷತ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಪದಾಧಿಕಾರಿಗಳು, ಕಸಾಪ ಸದಸ್ಯರು, ವಿವಿಧ ಸಂಘಸಂಸ್ಥೆಯವರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post