ಕಲ್ಪ ಮೀಡಿಯಾ ಹೌಸ್ | ಸೊರಬ |
ನಾಡಿನ ಸಂಸ್ಕೃತಿಯ ಉಳಿವು ಭಾಷೆಯೊಂದಿಗೆ ಬೆರೆತಿದ್ದು, ಕನ್ನಡ ಭಾಷೆಯ ಬೆಳವಣಿಗೆ ಹಲವಾರು ಮಂದಿಯ ಕೊಡುಗೆಗಳಿವೆ. ಆದರೆ, ಬಸ್ ನಿರ್ವಾಹಕರೊಬ್ಬರು ರಾಜ್ಯೋತ್ಸವದ ತಿಂಗಳಿನಲ್ಲಿ ಕನ್ನಡಾಂಬೆಯ ಸೇವೆಯನ್ನು ವಿಶಿಷ್ಟವಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಹೇಳಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಬುಧವಾರ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆ, ಶ್ರೀ ಭೋತೇಶ್ವರ ಆಟೋ ಮಾಲೀಕರ ಮತ್ತು ಚಾಲಕರ ಸಂಘ ಹಾಗೂ ಶ್ರೀ ಭೂತೇಶ್ವರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡ ಕನ್ನಡ ಪ್ರೇಮಿ ಬಸ್ ನಿರ್ವಾಹಕ ನಟರಾಜ್ ಕುಂದೂರು ಅವರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡ ನಾಡನ್ನು ಕಟ್ಟುವಲ್ಲಿ ಅನೇಕ ಸಾಹಿತಿಗಳ, ಕಲಾವಿದರ, ಹೋರಾಟಗಾರರ ಶ್ರಮವಿದೆ. ಕರ್ನಾಟಕವೆಂದು ಮರುನಾಮಕರಣಗೊಂಡು ಐವತ್ತು ವರ್ಷಗಳು ಗತಿಸಿದ್ದು, ಸುವರ್ಣ ವರ್ಷಾಚರಣೆಯ ಸಂಭ್ರಮದಲ್ಲಿದ್ದೇವೆ. ಕೆಎಸ್‍ಆರ್‍ಟಿಸಿ ಬಸ್‍ನ ನಿರ್ವಾಹಕ ನಟರಾಜ ಕುಂದೂರು ಕಳೆದ ಇಪ್ಪತ್ತು ವರ್ಷಗಳಿಂದ ಕನ್ನಡ ರಾಜ್ಯೋತ್ಸವವನ್ನು ಕನ್ನಡ ಹಬ್ಬದಂತೆ ಆಚರಿಸುತ್ತಿದ್ದಾರೆ. ಅವರ ವೇತನದಲ್ಲಿ ಮಾಸಿಕ ಎರಡು ಸಾವಿರ ರೂ., ಕೂಡಿಟ್ಟು, ಬಸ್‍ನ್ನು ಕನ್ನಡ ರಥದಂತೆ ಸಿಂಗರಿಸಿ, ಬಸ್‍ನಲ್ಲಿ ಸಾಹಿತಿಗಳು, ಕಲಾವಿದರು, ಚಿತ್ರನಟರು ಹಾಗೂ ಜಿಲ್ಲೆಯ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪ್ರಯಾಣಿಕರಿಗೆ ತಲುಪಿಸುತ್ತಿದ್ದಾರೆ. ಇವರ ಸೇವೆ ಮಾದರಿಯಾಗಿದೆ. ಇಂತಹ ಬಸ್‍ಗಳು ರಾಜ್ಯದ ಮೂಲೆ ಮೂಲೆಯಲ್ಲಿಯೂ ಸಂಚರಿಸುವಂತಾಗಬೇಕು ಎಂದರು.
Also read: ಅಬಕಾರಿ ಇಲಾಖೆ ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಮಕ್ಕಳ ಹಸ್ತಕ್ಷೇಪ: ಸಂಸದ ರಾಘವೇಂದ್ರ ಆಕ್ಷೇಪ
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಮಾತನಾಡಿ, ಕನ್ನಡ ಭಾಷಾಭಿಮಾನ ನಿತ್ಯೋತ್ಸವವಾಗಬೇಕು. ಅನ್ಯ ಭಾಷಿಕರಿಗೂ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಬಸ್ ನಿರ್ವಾಹಕನಾಗಿ ನಟರಾಜ್ ಅವರು ಕನ್ನಡದ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿದ್ದಾರೆ. ಪ್ರಯಾಣಿಕರಿಗೆ ರಸಪ್ರಶ್ನೆಗಳಿಗೆ ಕೇಳಿ ಸರಿ ಉತ್ತರ ನೀಡಿದವರಿಗೆ ಸಾಹಿತ್ಯ ಪುಸ್ತಕಗಳನ್ನು ನೀಡುತ್ತಿದ್ದಾರೆ. ದೇಶದ ಎಲ್ಲಾ ಭಾಷೆಗಳಿಗಿಂತ ಕನ್ನಡ ಅತ್ಯಂತ ಸುಂದರ ಮತ್ತು ಸರಳ ಭಾಷೆಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಬಸ್ ನಿರ್ವಾಹಕ ನಟರಾಜ ಕುಂದೂರು ಮಾತನಾಡಿ, ತಾವು ಸೇವೆಗೆ ಸೇರಿದ ವರ್ಷದಿಂದಲೂ ಕನ್ನಡ ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದೇನೆ. ಇದಕ್ಕೆ ಬಸ್‍ನ ಚಾಲಕರು, ಘಟಕದ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಸಹಕಾರ ನೀಡಿದ್ದಾರೆ. ಸುರಭಿಪುರದಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ಸಂತಸವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಬಸ್‍ನ ಚಾಲಕ ಮಾರುತಿ ನಾಯಕ್ ಅವರಿಗೂ ಸನ್ಮಾನಿಸಲಾಯಿತು. ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರೇಂದ್ರಗೌಡ ಜೇಡಗೇರಿ, ಉಪಾಧ್ಯಕ್ಷ ದತ್ತಾ ಸೊರಬ, ಹೆಲ್ಪಿಂಗ್ ಹ್ಯಾಂಡ್ ಸಂಸ್ಥೆಯ ಮಧುಕೇಶ್ವರ, ರಾಜೇಂದ್ರ ಜೈನ್, ಶ್ರೀ ಭೋತೇಶ್ವರ ಆಟೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಟಿ.ಬಿ. ಹಾಲೇಶ್, ಮಾರುತಿ, ತಾತಪ್ಪ, ಮನೋಜ್, ಚಂದ್ರಪ್ಪ, ಸಂತೋಷ್, ಅಣ್ಣಪ್ಪ, ಶ್ರೀ ಭೂತೇಶ್ವರ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಸಂತೋಷ್, ಜೆ.ಎಂ. ಅಜಯ್, ಸಚಿನ್, ಗಣೇಶ್, ದಾನಶೇಖರ ಕುದುರೆಗಣಿ, ಖುಷಿ ವಿ. ಗೌಡ, ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post