ಕಲ್ಪ ಮೀಡಿಯಾ ಹೌಸ್ | ಸೊರಬ |
ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್‍ನಲ್ಲಿ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಶ್ರೀ ಸುರಭಿ ಮಹಿಳಾ ಯಕ್ಷ ಬಳಗದವರು ಪ್ರದರ್ಶಿಸಿದ ಚಂದ್ರಾವತಿ ವಿಲಾಸ ಯಕ್ಷಗಾನ ಪ್ರದರ್ಶನ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಯಿತು.
ಮುಮ್ಮೇಳದಲ್ಲಿ ಕೃಷ್ಣನಾಗಿ ವೈಷ್ಣವಿ ಮುರಳಿಧರ್ ಹಾಗೂ ಶ್ವೇತಾ ರಾಮಚಂದ್ರ, ಗೋಪಾಲಕರಾಗಿ ವೀಣಾ ಶ್ರೀಧರ್, ಶೋಭಾ ಸತ್ಯಾ, ಹರ್ಷಿತಾ ಹೆಗಡೆ ಹಾಗೂ ಸುಮಿತ್ ಚಂದ್ರಾವಳಿಯಾಗಿ ಶ್ರೀಮತಿ ಬೆನ್ನೂರ್, ರಾಧೆಯಾಗಿ ಅನುಷಾ ನಾವುಡ, ಚಂದಗೋಪನಾಗಿ ಲಕ್ಷ್ಮೀ ಮುರಳಿಧರ್ ನಿರ್ವಹಿಸಿದ ಪಾತ್ರಗಳು ಗಮನ ಸೆಳೆದವು.
ಝಗಮಗಿಸುವ ವೇಷಭೂಷಣ, ಚುರುಕುನಡೆಯ ನಾಟ್ಯಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ಅಜ್ಜಿಯಾಗಿ ಜೈ ಕುಮಾರ್ ಅವರ ಹಾಸ್ಯ ಸಕಾಲಿಕವಾಗಿತ್ತು. ಪ್ರೇಕ್ಷಕರನ್ನು ನಕ್ಕು ನಗಿಸುವಲ್ಲಿ ಯಶಸ್ವಿಯಾಯಿತು. ಹಿಮ್ಮೇಳದಲ್ಲಿ ಸೃಜನ್ ಹೆಗಡೆ ಮಾರುತಿಪುರ ಅವರ ಭಾಗವತಿಕೆ, ಮಂಜುನಾಥ್ ಭಟ್ ಗುಡ್ಡೆದಿಂಬ ಅವರ ಮದ್ದಳೆವಾದನ, ಗಣೇಶ್ ಹೆಗಡೆ ಕೆರೆಕೈ ಅವರ ಚೆಂಡೆವಾದನ ಸಭಿಕರನ್ನು ಮೈನವಿರೇಳಿಸಿತು.
Also read: ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಎಷ್ಟು ಮಳೆಯಾಯ್ತು? ಡ್ಯಾಂಗಳಲ್ಲಿ ಎಷ್ಟು ನೀರಿದೆ?
ಯಕ್ಷಗಾನ ಪ್ರದರ್ಶನವನ್ನು ಉದ್ಘಾಟಿಸಿದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಗಂಡು ಕಲೆ ಎಂದು ಕರೆಸಿಕೊಳ್ಳುವ ಯಕ್ಷಗಾನವನ್ನು ಮಹಿಳೆಯರು ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯವಾಗಿದೆ. ಮಹಿಳೆಯರು ಕೇವಲ ಒಂದು ತಿಂಗಳಲ್ಲಿ ಯಕ್ಷಗಾನ ಕಲೆಯನ್ನು ಕಲಿತು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವಲ್ಲಿ ಶ್ರಮಿಸುತ್ತಿರುವವರ ಕಾರ್ಯ ಪ್ರಶಂಸನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಡಾ. ಆರ್. ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, ಮಲೆನಾಡು ಭಾಗದ ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿಶೇಷವಾಗಿ ನಾಡಿನ ಪ್ರಮುಖ ಕಲೆಯಾದ ಯಕ್ಷಗಾನಕ್ಕೆ ಸಾಕಷ್ಟು ಮಹತ್ವವಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸಿನ ಸಾಧನೆ ಮಾಡುತ್ತಿದ್ದಾರೆ. ಇದೇ ಸಾಲಿನಲ್ಲಿ ಇದೀಗ ಮಹಿಳೆಯರು ಯಕ್ಷ ಬಳಗವನ್ನು ಸ್ಥಾಪಿಸಿಕೊಂಡು ಯಕ್ಷಗಾನ ಪ್ರದರ್ಶನ ನೀಡುತ್ತಿರುವುದು ಮೆಚ್ಚುವಂತಹದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆಯುಷ್ ವೈದ್ಯಾಧಿಕಾರಿ ಡಾ. ಮುರುಳೀಧರ್, ಬಯಲಾಟ ಹಿರಿಯ ಕಲಾವಿದ ಎಚ್.ಕೆ. ಯಶವಂತಪ್ಪ ಚಂದ್ರಗುತ್ತಿ, ಹಿರಿಯ ನಾಗರೀಕ ಕೆ. ಪ್ರಭಾಕರ್ ರಾಯ್ಕರ್, ಕಲಾ ಪೋಷಕ ದಿವಾಕರ್ ಭಾವೆ, ದಿನಕರ ಭಟ್ ಭಾವೆ, ಶ್ರೀಧರ್ ನೆಮ್ಮದಿ, ಹನುಮಂತಪ್ಪ ಮಾಸ್ತರ್, ನಾಗರಾಜ ಗುತ್ತಿ, ಹರ್ಷಾ ಹೆಗಡೆ, ಜೆ.ಎಸ್. ಚಿದಾನಂದಗೌಡ ಸೇರಿದಂತೆ ಇತರರಿದ್ದರು. ಶ್ರೀವತ್ಸ ಎಸ್. ಆಚಾರ್ ಮತ್ತು ಆದ್ಯಾ ಪ್ರಾರ್ಥಿಸಿದರು. ಪ್ರಜ್ವಲ್ ಚಂದ್ರಗುತ್ತಿ ಸ್ವಾಗತಿಸಿ, ವಂದಿಸಿದರು. ಶಿಲ್ಪಾ ನಿರೂಪಿಸಿದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post