ಕಲ್ಪ ಮೀಡಿಯಾ ಹೌಸ್ | ಸೊರಬ | ವರದಿ: ಮಧುರಾಮ್ |
ಮಲೆನಾಡಿನ (Soraba) ಸೊರಬ–ಸಾಗರ ಭಾಗದ ದೀವರ ಸಮುದಾಯದ (Deevara Community) ಸಾಂಪ್ರದಾಯಿಕ ಚಿತ್ತಾರ ಕಲೆಗೆ ಅಂತರರಾಷ್ಟ್ರೀಯ ಶೈಕ್ಷಣಿಕ ವೇದಿಕೆಯಲ್ಲಿ ಮನ್ನಣೆ ದೊರೆಯುತ್ತಿದೆ. (USA) ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ (Texas University) ನ.17ರಂದು ಕರ್ನಾಟಕದ ಚಿತ್ತಾರ ಕಲೆಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಉಪನ್ಯಾಸ ಸರಣಿಯ ಅಂಗವಾಗಿ ‘ಚಿತ್ತಾರ: ಕರ್ನಾಟಕದ ಜನಪದ ಕಲಾ ಪ್ರಕಾರ’ ಎಂಬ ವಿಷಯದ ಕುರಿತು ನಡೆಯುವ ಕಾರ್ಯಕ್ರಮದಲ್ಲಿ ದೀವರು ಸಮುದಾಯದ ಕಲಾ ಪರಂಪರೆ, ಸಾಂಸ್ಕೃತಿಕ ಬದುಕು ಹಾಗೂ ಪ್ರಕೃತಿಯೊಂದಿಗಿನ ಸಂಬಂಧವನ್ನು ಪರಿಚಯಿಸಲಾಗುತ್ತದೆ.
ಅಮೆರಿಕದ ಪ್ರಮುಖ ಸಾರ್ವಜನಿಕ ಸಂಶೋಧನಾ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಟೆಕ್ಸಾಸ್ ವಿಶ್ವವಿದ್ಯಾಲಯವು ಜಾಗತಿಕ ಶೈಕ್ಷಣಿಕ ರಂಗದಲ್ಲಿಯೂ ಗಮನಾರ್ಹ ಸ್ಥಾನ ಹೊಂದಿದೆ. ಕ್ಯೂಎಸ್ (QS) ವಿಶ್ವ ವಿಶ್ವವಿದ್ಯಾಲಯಗಳ ಶ್ರೇಯಾಂಕ 2027ರಲ್ಲಿ ಜಾಗತಿಕವಾಗಿ 72ನೇ ಸ್ಥಾನ ಪಡೆದಿರುವ ಈ ವಿಶ್ವವಿದ್ಯಾಲಯದಲ್ಲಿ ಕರ್ನಾಟಕದ ಜನಪದ ಕಲೆಯ ಪರಿಚಯವಾಗುತ್ತಿರುವುದು ವಿಶೇಷವಾಗಿದೆ.
ಬೆಂಗಳೂರಿನ ಸೆಂಟರ್ ಫಾರ್ ರಿವೈವಲ್ ಆಫ್ ಇಂಡಿಜಿನಸ್ ಆರ್ಟ್ (CFRIA) ಸಂಸ್ಥೆಯು ಎರಡು ದಶಕಗಳಿಂದ ನಡೆಸಿಕೊಂಡು ಬಂದಿರುವ ಸಂಶೋಧನೆ, ಕ್ಷೇತ್ರಕಾರ್ಯ ಹಾಗೂ ಕಲಾ ದಾಖಲಾತಿಗಳ ಆಧಾರದಲ್ಲಿ ಈ ಕಲಾ ಪರಂಪರೆಯನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸುವ ಪ್ರಯತ್ನ ನಡೆಯುತ್ತಿದೆ.
ಸಂಸ್ಥೆಯು ‘ದೀವರ ಚಿತ್ತಾರ: ದಿ ಆರ್ಟ್‌ಫಾರ್ಮ್, ದಿ ಪೀಪಲ್, ದೇರ್ ಕಲ್ಚರ್’ ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವನ್ನು ಪ್ರಕಟಿಸಿದ್ದು, ಕರ್ನಾಟಕದ ಅಪರೂಪದ ಜನಪದ ಕಲೆಯಾದ ಚಿತ್ತಾರ ಹಾಗೂ ಅದನ್ನು ಉಳಿಸಿಕೊಂಡು ಬಂದಿರುವ ದೀವರು ಸಮುದಾಯದ ಸಂಸ್ಕೃತಿಯನ್ನು ದೃಶ್ಯರೂಪದಲ್ಲಿ ದಾಖಲಿಸಿದೆ.
CFRIA ಸಂಸ್ಥೆಯ ಸಂಸ್ಥಾಪಕಿ ಗೀತಾ ಭಟ್ ಹಾಗೂ ಸಾಕ್ಷ್ಯಚಿತ್ರ ಛಾಯಾಗ್ರಾಹಕಿ ಮತ್ತು ಲೇಖಕಿ ಸ್ಮಿತಾ ತುಮಲೂರು ಸಹಲೇಖಕರಾಗಿರುವ ಈ ಕೃತಿಯು ಚಿತ್ತಾರ ಕಲೆಯ ವಿನ್ಯಾಸಗಳು, ಸಾಂಪ್ರದಾಯಿಕ ಸಂಕೇತಗಳು, ಕಲಾವಿದರ ಬದುಕು, ಆಚರಣೆಗಳು ಮತ್ತು ಪರಿಸರಸ್ನೇಹಿ ಜೀವನ ಪದ್ಧತಿಗಳನ್ನು ಒಳಗೊಂಡಿದೆ.
Soraba : ಸೊರಬ–ಸಾಗರ ಭಾಗದ ಸಾಂಸ್ಕೃತಿಕ ಹೆಗ್ಗಳಿಕೆ
ಸ್ಥಳೀಯ ಸಮುದಾಯದ ಜ್ಞಾನ, ಮಹಿಳಾ ಕಲಾವಿದರ ಕೊಡುಗೆ ಮತ್ತು ತಲೆಮಾರುಗಳಿಂದ ಮುಂದುವರಿದಿರುವ ಕಲಾ ಪರಂಪರೆಯನ್ನು ಸಂಶೋಧನೆಯ ಮೂಲಕ ದಾಖಲಿಸಿ, ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಶ್ವವಿದ್ಯಾಲಯದ ವೇದಿಕೆಯಲ್ಲಿ ಪರಿಚಯಿಸುತ್ತಿರುವುದು ಸೊರಬ–ಸಾಗರ ಭಾಗದ ಸಾಂಸ್ಕೃತಿಕ ಹೆಗ್ಗಳಿಕೆಯಾಗಿದೆ.
Also Read>> ಶಿಕಾರಿಪುರ ಕುಮದ್ವತಿ ಶಾಲೆಯಲ್ಲಿ ಕ್ರೀಡಾ ಹಬ್ಬ: ವಿದ್ಯಾರ್ಥಿಗಳಿಂದ ಪಥಸಂಚಲನ
ಈ ಮಹತ್ವದ ಸಾಧನೆಗೆ ಸಹಕಾರ ನೀಡಿರುವ CFRIA ಸಂಸ್ಥೆಯ ಸಂಸ್ಥಾಪಕಿ ಗೀತಾ ಭಟ್ ಅವರಿಗೆ ಹೆಲ್ಪಿಂಗ್ ಹ್ಯಾಂಡ್ ಸೊರಬ ಹಾಗೂ ಕರ್ನಾಟಕ ರಾಜ್ಯ ದಿವರು ಅಧ್ಯಯನ ಸಂಸ್ಥೆ (ರಿ), ಬೆಂಗಳೂರು ಇದರ ರಾಜ್ಯ ಖಜಾಂಚಿ, ವಕೀಲ ಎಚ್.ವಿ. ಕುಮಾರಸ್ವಾಮಿ ಅವರು ಈ ಸಾಂಸ್ಕೃತಿಕ ಸಾಧನೆಗೆ ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








