ಸೊರಬ: ಯಾವುದೇ ರೀತಿ ಸಾಂವಿಧಾನಿಕ ಹುದ್ದೆಯಲ್ಲಿ ಇಲ್ಲದೇ ಇದ್ದರೂ ಸಹ ನಿಯಮಾವಳಿಗಳನ್ನು ಗಾಳಿಗೆ ತೂರಿ ಸರ್ಕಾರ ಕಾಮಗಾರಿಯ ಗುದ್ದಲಿ ಪೂಜೆಯನ್ನು ಶಾಸಕ ಕುಮಾರ್ ಬಂಗಾರಪ್ಪ ಅವರ ಆಪ್ತರೊಬ್ಬರು ನೆರವೇರಿಸಿರುವುದು ತಾಲೂಕಿನಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕಿನ ಬೆದವಟ್ಟಿ ಗ್ರಾಮದಲ್ಲಿ ಬಂಗಾರ ಒಡ್ಡು ಕೆರೆಯ ಹೂಳೆತ್ತುವ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಗಿದ್ದು, ಇದಕ್ಕಾಗಿ ಶಾಸಕರ ಅನುದಾನದಿಂದ 4 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿತ್ತು.
ಆದರೆ, ಯಾವುದೇ ರೀತಿಯ ಹುದ್ದೆಯಲ್ಲಿರದ, ಜನಪ್ರತಿನಿಧಿಯೂ ಅಲ್ಲದೇ, ಯಾವುದೇ ಇಲಾಖೆಗೆ ಸೇರಿರದ ಶಾಸಕರ ಆಪ್ತ ಬೋಗೇಶ್ ಎನ್ನುವವರು ಗುದ್ದಲಿ ಪೂಜೆ ನೆರವೇರಿಸಿದ್ದಾರೆ.
ಇದು ನಿಯಮಾವಳಿಗಳನ್ನು ಗಾಳಿಗೆ ತೂರುವ ಕೆಲಸವಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ, ಅಧಿಕಾರದ ದುರುಪಯೋಗ ಎಂಬ ಆರೋಪವೂ ಸಹ ಕೇಳಿಬಂದಿದ್ದು, ಇವರು ವಿರುದ್ಧ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಒತ್ತಡ ಕೇಳಿಬರುತ್ತಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಮೈಸೂರು ಜಿಲ್ಲೆಯಲ್ಲಿ ಒಂದು ಕಾರ್ಯಕ್ರಮ ಉದ್ಘಾಟಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
Discussion about this post