ಕಲ್ಪ ಮೀಡಿಯಾ ಹೌಸ್ | ಸೊರಬ |
ತಾಲೂಕಿನ ಲಕ್ಕವಳ್ಳಿಯ ಶ್ರೀ ಮೋಕ್ಷ ಮಂದಿರ ಜೈನ ಮಠ ವರದಾ ನದಿ ಪ್ರವಾಹಕ್ಕೆ ಸಿಲುಕಿ ಹಾನಿಗೀಡಾಗುತ್ತಿದ್ದು, ನದಿಗೆ ತಡೆಗೋಡೆ ನಿರ್ಮಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ. 15ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಶ್ರೀ ಮಠದ ವೃಷಭಸೇನ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ವರದಾ ನದಿಗೆ ಮೂಗೂರು ಸಮೀಪ ಬ್ಯಾರೆಜ್ ನಿರ್ಮಿಸಿದ ತರುವಾಯ ಪ್ರತಿ ವರ್ಷ ಮಳೆಗಾಲದಲ್ಲಿ ಹಾಗೂ ಅತೀವೃಷ್ಠಿಯಾದ ಸಂದರ್ಭದಲ್ಲಿ ಮಠ ಮತ್ತು ಬಸದಿಗಳು ಮುಳುಗುತ್ತವೆ. ಪರಿಣಾಮ ಕಟ್ಟಡಗಳು ಸಂಪೂರ್ಣವಾಗಿ ನೆರೆಹಾವಳಿಗೆ ತುತ್ತಾಗಿದೆ. ಜಲ ಸಂಪನ್ಮೂಲ ಇಲಾಖೆಗೆ ಈ ಬಗ್ಗೆ ಮನವಿದರೂ ಪ್ರಯೋಜವಾಗಿಲ್ಲ. ಬಜೆಟ್‍ನಲ್ಲಿ ಅನುದಾನ ನೀಡುವುದಾಗಿ ತಿಳಿಸುತ್ತಾರೆ. ಆದರೆ, ಈವರೆಗೂ ಅನುದಾನ ನೀಡದಿರುವುದು ನೋವಿನ ಸಂಗತಿಯಾಗಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಿಸಿದ ಡ್ರಾಮೆಟರಿ ಸಹ 2019 ರಿಂದ 2021ರವರೆಗಿನ ನದಿ ಪ್ರವಾಹಕ್ಕೆ ಸಿಲುಕಿ ನಾಶವಾಗಿದೆ. 2010ರಲ್ಲಿ ರಾಜ್ಯ ಸರ್ಕಾರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅಪೂರ್ಣವಾದ ಸಮುದಾಯ ಭವನ ನಿರ್ಮಾಣಕ್ಕೆ 1.17 ಕೋಟಿ ರೂ., ಅಂದಾಜು ಪಟ್ಟಿ ಸಲ್ಲಿಸಲಾಗಿತ್ತು. ಆದರೆ, ಕೇವಲ 1 ಲಕ್ಷ ರೂ., ಮಂಜೂರು ನೀಡಿ, ನಿಯಮಾವಳಿಯಂತೆ ನೀಡಲಾಗುವುದು ಎಂದು ತಿಳಿಸಿರುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜೈನ ಮಠಗಳ ಅಭಿವೃದ್ಧಿಗೆ ಅನುದಾನ ನೀಡುವುದಾಗಿ ತಿಳಿಸಿದ್ದರು. ನುಡಿದಂತೆ 50 ಕೋಟಿ ರೂ., ಅನುದಾನವನ್ನು ಅಲ್ಪಸಂಖ್ಯಾತರ ಇಲಾಖೆಗೆ ನೀಡಿದ್ದರು. ಈ ಪೈಕಿ ಬೇರೆ ಜೈನ ಮಠಗಳಿಗೆ ಅನುದಾನ ನೀಡಲಾಗಿದೆ ವಿನಃ, ಸಂಬಂಧಪಟ್ಟ ಇಲಾಖೆ ಲಕ್ಕವಳ್ಳಿಯ ಜೈನ ಮಠವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ನ.15ರಂದು ಆನವಟ್ಟಿಯಲ್ಲಿ ನಡೆಯಲಿರುವ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು ಭಾಗವಹಿಸಲಿದ್ದಾರೆ. ಸಮೀಪದಲ್ಲಿಯೇ ಇರುವ ಲಕ್ಕವಳ್ಳಿಯ ಜೈನಮಠದ ದುಸ್ಥಿತಿಯ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ಶ್ರೀ ಮಠದ ಭಕ್ತರ ಸಹಯೋಗದಲ್ಲಿ ಮನವಿ ಸಲ್ಲಿಸಲಾಗುವುದು ಹಾಗೂ ಮಠದ ಅಭಿವೃದ್ಧಿಗೆ ಅನುದಾನ ಕೋರಲಾಗುವುದು ಎಂದು ಮಾಹಿತಿ ನೀಡಿದರು.
ಶ್ರೀ ಮಠದ ರಾಜರಾಜೇಶ್ವರಿ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post