ಕಲ್ಪ ಮೀಡಿಯಾ ಹೌಸ್ | ಸೊರಬ |
ಪ್ರತಿ ಕಾರ್ಖಾನೆಯ ಆಸ್ತಿ ಕಾರ್ಮಿಕರೇ ಆಗಿದ್ದು, ಇದನ್ನು ಅರಿತು ಅವರುಗಳು ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಾಗ ಯಾವುದೇ ಸಂಸ್ಥೆಯನ್ನು ಉನ್ನತಿಗೆ ತೆಗೆದುಕೊಂಡು ಹೋಗಬಹುದು ಎಂದು ಜನಸಂಗ್ರಾಮ ಪರಿಷತ್ ಅಧ್ಯಕ್ಷ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಶಂಕರ್ ಶೇಟ್ ಅಭಿಪ್ರಾಯಪಟ್ಟರು.
20 ಸ್ಟಿಚಸ್ ಗಾರ್ಮೆಂಟ್ಸ್’ನಲ್ಲಿ ನಡೆದ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಕಾರ್ಖಾನೆಯ ಹಾಗೂ ಮಾಲೀಕರ ಬೆನ್ನೆಲುಬು ಅಲ್ಲಿನ ಕಾರ್ಮಿಕರೇ ಆಗಿರುತ್ತಾರೆ. ಇದನ್ನು ಅರಿತು ಪ್ರತಿ ಕಾರ್ಮಿಕರೂ ಪ್ರಾಮಾಣಿಕವಾಗಿ ದುಡಿಯಬೇಕು. ಮುಖ್ಯವಾಗಿ ಯಾರಿಗಾಗಿಯೋ ನೀವುಗಳು ದುಡಿಯಬಾರದು. ನಿಮಗಾಗಿ, ನಿಮ್ಮನ್ನು ಸಲಹುತ್ತಿರುವ ಕಾರ್ಖಾನೆಗಾಗಿ ಪ್ರಾಮಾಣಿಕವಾಗಿ, ಸಮಯ ಪ್ರಜ್ಞೆಯಿಂದ ದುಡಿಯಬೇಕು. ಅಲ್ಲದೇ, ಮಾಲೀಕರು ಹಾಗೂ ಕಾರ್ಮಿಕರ ನಡುವೆ ತಂದೆ ಮಕ್ಕಳ ರೀತಿಯಲ್ಲಿ ಸಂಬಂಧವಿರಬೇಕು. ಆಗ ಹೆಚ್ಚಿನ ಉತ್ಸಾಹದಿಂದ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
Also Read: ದಾವಣಗೆರೆ ವಿವಿ ಮೂವರು ಪ್ರಾಧ್ಯಾಪಕರುಗಳಿಗೆ ರಾಜ್ಯ ಸರ್ಕಾರದ ಶ್ರೇಷ್ಠ ಸಂಶೋಧನಾ ಪ್ರಶಸ್ತಿ
ಯಾವುದೇ ಸಂಸ್ಥೆಯಲ್ಲಿ ಯಾರೂ ಮೇಲೆಲ್ಲ, ಯಾರೂ ಕೀಳಲ್ಲ. ಸಂಸ್ಥೆಯ ಅಭ್ಯುದಯಕ್ಕೆ ಕಾರ್ಮಿಕರು ಒಂದು ಹೆಜ್ಜೆ ಮುಂದೆ ಇಟ್ಟರೆ, ಮಾಲೀಕರು ಹತ್ತು ಹೆಜ್ಜೆ ಮುಂದೆ ಇಡುತ್ತಾರೆ. ಹೀಗಾಗಿ, ನೀವುಗಳೇ ಕಾರ್ಖಾನೆಯ ಜೀವಾಳ ಎಂದನ್ನು ಸದಾ ನೆನಪಿನಲ್ಲಿಡಿ ಎಂದು ಕಿವಿ ಮಾತು ಹೇಳಿದರು.
ಹಿಂದುಳಿದ ತಾಲೂಕುಗಳ ಪಟ್ಟಿಯಲ್ಲಿ ಮೂರನೆಯ ಸ್ಥಾನದಲ್ಲಿರುವ ಸೊರಬದಂತಹ ಪಟ್ಟಣದಲ್ಲಿ ಒಂದು ಕಾರ್ಖಾನೆಯನ್ನು ಕಟ್ಟಿ ಬೆಳೆಸುವುದು ಸುಲಭದ ಮಾತಲ್ಲ. ಹೀಗಿದ್ದರೂ, ಇದರ ಮಾಲೀಕ ಸುರೇಶ್ ಅವರು ಸವಾಲುಗಳನ್ನು ಮಟ್ಟಿ ನಿಂತು ಈ ಸಂಸ್ಥೆಯನ್ನು ಬೆಳೆಸಿ ಇಂದು ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ನೀಡಿದ್ದಾರೆ ಎನ್ನುವುದು ಒಂದು ಸಾಧನೆಯೇ ಸರಿ ಎಂದು ಪ್ರಶಂಸಿಸಿದರು.
ಪುರಸಭೆ ಅಧ್ಯಕ್ಷ ವೀರೇಶ್ ಮೇಸ್ತ್ರಿ ಮಾತನಾಡಿ, ನಮ್ಮ ಊರಿನಲ್ಲಿ ಬಂಡವಾಳಶಾಹಿಗಳು ಮಾಡದ ಕೆಲಸವನ್ನು ಸುರೇಶ್ ಅವರು ಮಾಡಿ ಇಂದು ಯಶಸ್ವಿಯಾಗಿದ್ದಾರೆ. ಸೊರಬದಂತಹ ಊರಿನಲ್ಲಿ ಉದ್ಯೋಗ ಸೃಷ್ಠಿ ಮಾಡಿ, ಹಲವು ಮಂದಿಗೆ ಆಸರೆಯಾಗಿದ್ದಾರೆ. ಇದು ಹಲವರಿಗೆ ಮಾದರಿಯಾಗಿ ಇನ್ನೂ ಹೆಚ್ಚಿನ ಸಂಸ್ಥೆಗಳು ಉದಯಿಸಲಿ ಎಂದರು.
ನಾನೂ ಸಹ ಕಷ್ಟ ಪಟ್ಟು ಈಗ ಈ ಹಂತಕ್ಕೆ ಬಂದು ತಲುಪಿದ್ದೇನೆ. ನನ್ನ ಶ್ರಮದಿಂದ ನಾನು ಮೇಲೆ ಬಂದಿದ್ದೇನೆ. ಹೀಗೆಯೇ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಕಷ್ಟಪಟ್ಟು ಉತ್ತಮ ಜೀವನ ಕಟ್ಟಿಕೊಳ್ಳಬೇಕು. ಇದಕ್ಕಾಗಿ ಸರ್ಕಾರದ ಇ-ಶ್ರಮ್ ಕಾರ್ಡ್/ಕಾರ್ಮಿಕರ ಕಾರ್ಡ್ ಮಾಡಿಸಿಕೊಳ್ಳಿ. ಇದರಿಂದ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ, ಸಮಾಜ ಸೇವಕ ಚಂದ್ರಪ್ಪ ಮಾತನಾಡಿ, ಕುಗ್ರಾಮದಲ್ಲಿ ಬೆಳೆದು ಕೇವಲ ಕಷ್ಟವನ್ನೇ ಉಂಡು ಬೆಳೆದ ಸುರೇಶ್ ಅವರು ತಮ್ಮ ಪ್ರಾಮಾಣಿಕ ಶ್ರಮ ಹಾಗೂ ಪ್ರಯತ್ನದಿಂದ ಇಂದು ಈ ಹಂತಕ್ಕೆ ಬೆಳೆದಿದ್ದಾರೆ. ಇಂದು ಹಲವು ಮಂದಿಗೆ ಕೆಲಸ ನೀಡುವ ಮೂಲಕ ಅವರ ಹಾಗೂ ಅವರ ಕುಟುಂಬಗಳಿಗೆ ಆಸರೆಯಾಗಿದ್ದಾರೆ. ನಿಜಕ್ಕೂ ಇವರ ಸಾಧನೆ ಮಾದರಿಯಾಗಿದ್ದು, ಇವರಂತೆ ಪ್ರತಿಯೊಬ್ಬರೂ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಸೊರಬದ ಜನಸಂಗ್ರಾಮ ಪರಿಷತ್, ಯುವಾ ಬ್ರಿಗೇಡ್ ಹಾಗೂ 20 ಸ್ಟಿಚಸ್ ಗಾರ್ಮೆಂಟ್ಸ್ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಖಾನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದವರನ್ನು ಗುರುತಿಸಿ ಅಭಿನಂದಿಸಲಾಯಿತು.Also Read: ಕಣಿವೆ ರಾಜ್ಯದಲ್ಲಿ ಮತಾಂಧರ ರಾಕ್ಷಸತ್ವದ ಕಠೋರ ಸತ್ಯ ಒಪ್ಪಿಕೊಳ್ಳಲು 3 ದಶಕ ಬೇಕಾಯಿತು
ಕಾರ್ಖಾನೆಯ ಮಾಲೀಕ ಸುರೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಯುವ ಬ್ರಿಗೇಡ್’ನ ಮಹೇಶ್ ಖಾರ್ವಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ಗಾರ್ಮೆಂಟ್ಸ್ ಮುಖ್ಯಸ್ಥೆ ಲತಾ ಸುರೇಶ್, ಯುವಾ ಬ್ರಿಗೇಡ್’ನ ವಿನೋದ್ ವಾಲ್ಮೀಕಿ, ಮಂಜು, ಕೃಷ್ಣ, ಜನಸಂಗ್ರಾಮ ಪರಿಷತ್ ಕೆ.ಎಂ. ರಾಜೇಂದ್ರ, ಗಂಧರ್ವ, ನಿವೃತ್ತ ಶಿಕ್ಷಕರಾದ ಡಿ. ಸದಾನಂದ, ಸಂಪತ್ ಕುಮಾರ್, ಗಾರ್ಮೆಂಟ್ಸ್ ಸಿಬ್ಬಂದಿ ವರ್ಗದವರು, ಕಾರ್ಮಿಕರು ಉಪಸ್ಥಿತರಿದ್ದರು. ಕುಮಾರಿ ದಾನೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಅನಿತಾ ರಾಜೇಂದ್ರ ಪ್ರಾರ್ಥಿಸಿ, ಕೆ.ಎನ್. ರಾಜೇಂದ್ರ ಸ್ವಾಗತಿಸಿದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post