ಕಲ್ಪ ಮೀಡಿಯಾ ಹೌಸ್ | ಸೊರಬ |
ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಮತಗಳ ನಡುವೆ ಕಂದಕ ಸೃಷ್ಠಿಸದೇ ಎಲ್ಲರೂ ಒಂದೇ ಎಂಬ ಸಮಷ್ಠಿ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಮೆರೆಯಬೇಕು ಎಂದು ಮಾಜಿ ಶಾಸಕ, ಕೆಪಿಸಿಸಿ ಉಪಾಧ್ಯಕ್ಷ ಎಸ್. ಮಧು ಬಂಗಾರಪ್ಪ ಕರೆ ನೀಡಿದರು.
75ನೆಯ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಅಂಗವಾಗಿ ತಾಲೂಕಿನ ಬಿಳವಾಣಿ ಗ್ರಾಮದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ರಾಷ್ಟ್ರ ಧ್ವಜದೊಂದಿಗೆ ಸ್ವಾತಂತ್ರ ನಡಿಗೆ ಪಾದಯಾತ್ರೆ ಕಾರ್ಯಕ್ರಮದ ನಂತರ, ಪಟ್ಟಣದ ಶ್ರೀ ರಂಗನಾಥ ದೇವಸ್ಥಾನ ಮುಂಭಾಗ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಇಡಿಯ ಜಗತ್ತಿನಲ್ಲೇ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದ ನಮ್ಮದು. ಇಂತಹ ಸಮಾಜದಲ್ಲಿ ಜಾತಿ ಹಾಗೂ ಮತಗಳ ನಡುವೆ ಕಂದಕ ಸೃಷ್ಠಿಸುವುದು ಸರಿಯಾದುದಲ್ಲ. ಪ್ರಸುತ ದೇಶದಲ್ಲಿ ನೆರೆಯ ಶತ್ರು ರಾಷ್ಟ್ರಗಳೊಂದಿಗೆ ಸೆಣಸಾಡುವುದಕ್ಕಿಂತ ದೇಶದಲ್ಲಿ ಆಂತರಿಕವಾಗಿ ಏಕತೆ ಸಾಧಿಸಲು ಹೋರಾಟ ಮಾಡುವ ಅನಿವಾರ್ಯತೆ ಎದುರಾಗಿರುವುದು ದುರ್ದೈವದ ಸಂಗತಿಯಾಗಿದೆ. ಜಗತ್ತಿನಲ್ಲಿ ಪ್ರೀತಿ, ವಿಶ್ವಾಸಕ್ಕೆ ಹೆಚ್ಚು ಮಹತ್ವ ನೀಡುವ ದೇಶ ಭಾರತ ಮಾತ್ರ. ಮತ್ತೊಂದು ಜನ್ಮದಲ್ಲೂ ತಾಯಿ ಭಾರತಾಂಬೆಯ ಪುತ್ರನಾಗಿ, ಸೊರಬದಲ್ಲಿಯೇ ಜನಿಸಬೇಕು ಎಂದು ಬೇಡಿಕೊಳ್ಳುತ್ತೇನೆ ಎಂದರು.
ದೇಶದ ಸ್ವಾತಂತ್ರಕ್ಕಾಗಿ ಅನೇಕ ಮಹನೀಯರ ತ್ಯಾಗ ಬಲಿದಾನವಿದ್ದು, ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುವ ಸನ್ನಿವೇಶ ಸೃಷ್ಠಿಯಾದಲ್ಲಿ ಪ್ರತಿಯೊಬ್ಬ ಭಾರತೀಯ ಪ್ರಜೆಗಳು ಜಾತಿ, ಧರ್ಮಗಳ ಭೇದವಿಲ್ಲದೆ ಒಗ್ಗಟ್ಟಾಗಬೇಕು ಎಂದರು.
ಅನೇಕ ಪಾದಯಾತ್ರೆಗಳು, ಉಪವಾಸ ಸತ್ಯಾಗ್ರಹಗಳು ಸೇರಿದಂತೆ ಹಲವಾರು ಹೋರಾಟದ ಪ್ರತಿಫಲವಾಗಿ ದೇಶಕ್ಕೆ ಸ್ವಾತಂತ್ರ ಲಭಿಸಿದೆ. ರಾಷ್ಟç ಧ್ವಜ ಹಾಗೂ ಸಂವಿಧಾನಕ್ಕೆ ಅಗೌರವ ತೋರುವವರಿಗೆ ಬದಲಾವಣೆ ಮಾಡುವ ಶಕ್ತಿ ಸಾಮಾನ್ಯ ಜನತೆಗಿದೆ. ದೇಶದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವರು ಪ್ರಸ್ತುತ ಮನೆ ಮನೆಗಳಿಗೆ ರಾಷ್ಟ್ರ ಧ್ವಜ ನೀಡುತ್ತಿದ್ದಾರೆ. ದೇಶ, ಸ್ವಾತಂತ್ರ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಗೌರವ ತೋರದವರ ವಿರುದ್ಧ ಮಹಾತ್ಮ ಗಾಂಧಿಯವಂತೆ ಶಾಂತಿಯುತ ಹೋರಾಟ ಮಾಡುವುದು ತಿಳಿದಿದೆ ಹಾಗೂ ಸುಭಾಷ್ ಚಂದ್ರ ಬೋಸ್ ಅವರಂತೆ ಹೋರಾಟ ಮಾಡುವುದು ತಿಳಿದಿದೆ ಎಂದು ಎಚ್ಚರಿಸಿದರು.ಪಾದಯಾತ್ರೆಯಲ್ಲಿ ಎಸ್. ಮಧು ಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಮತ್ತು ಪುತ್ರ ಸೂರ್ಯ ಮಧು ಬಂಗಾರಪ್ಪ ಹೆಜ್ಜೆ ಹಾಕಿದರು. ಪಾದಯಾತ್ರೆ ಬರುವ ಮಾರ್ಗದ ಗ್ರಾಮಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಆರತಿ ಎತ್ತಿ ಶುಭ ಹಾರೈಸಿದರು.
ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜು ಸಮೀಪದಲ್ಲಿ ವಿದ್ಯಾರ್ಥಿಗಳು ಮಧು ಬಂಗಾರಪ್ಪ ಅವರಿಗೆ ರಾಖಿ ಕಟ್ಟಿದ್ದು ವಿಶೇಷವಾಗಿತ್ತು.
ಮಳೆ-ಗಾಳಿಯ ನಡುವೆಯು ರಾಷ್ಟ್ರ ಧ್ವಜದೊಂದಿಗೆ ಸುಮಾರು 15 ಕಿಮೀ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು. ಪೊಲೀಸ್ ಇಲಾಖೆಯಿಂದ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಸೂಕ್ತ ಕ್ರಮ ಕೈಗೊಂಡು, ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕ ಅಧ್ಯಕ್ಷೆ ಸುಜಾತಾ ಜೋತಾಡಿ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಮಾಜಿ ಸಚಿವ ಶಿವಮೂರ್ತಿ ನಾಯಕ್, ಮಾಜಿ ಶಾಸಕ ಮಹಾಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಜಿಪಂ ಮಾಜಿ ಸದಸ್ಯರಾದ ತಾರಾ ಶಿವಾನಂದ, ರಾಜೇಶ್ವರಿ ಗಣಪತಿ, ಶಿವಲಿಂಗೇಗೌಡ, ವೀರೇಶ್ ಕೊಟಗಿ, ಪ್ರಮುಖರಾದ ಪಿ.ಎಸ್. ಮಂಜುನಾಥ್, ಕೆ. ಮಂಜುನಾಥ ಹಳೇಸೊರಬ, ಎಚ್. ಗಣಪತಿ, ಗೋಣಿ ಮಾಲತೇಶ್, ಕೆ.ಪಿ. ರುದ್ರಗೌಡ, ಪರಶುರಾಮ ಸಣ್ಣಬೈಲ್, ರಾಮಪ್ಪ ಸಣ್ಣಬೈಲ್, ರವಿ ಬರಗಿ, ಸಂಜೀವ ನೇರಲಗಿ, ಕಿರಣ್, ಪಾಂಡು ಕೊಡಕಣಿ, ಗಿರೀಶ್ ಮಂಚಿ, ಶ್ರೀಕಾಂತ ಚಿಕ್ಕಶಕುನ, ಪ್ರವೀಣ್ ಶಾಂತಗೇರಿ, ಸಂಜಯ್ ಸೇರಿದಂತೆ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post