ಕಲ್ಪ ಮೀಡಿಯಾ ಹೌಸ್ | ಸೊರಬ |
ಯೋಜನಬದ್ದವಾಗಿ ಪ್ರತಿ 20 ಮತದಾರರ ವಿಶ್ವಾಸ ಪಡೆಯಲು ಪಕ್ಷದ ವತಿಯಿಂದ ಒಬ್ಬ ಘಟನಾಯಕನನ್ನು ನೇಮಿಸಿದ್ದರಿಂದ ಶಿಕ್ಷಕರು ಹಾಗೂ ಪದವೀಧರ ಮತದಾರರು ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ, #Dr. Dhananjaya Sarji ಮೈತ್ರಿ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರನ್ನು ನಿರೀಕ್ಷೆಯಂತೆ ಗೆಲ್ಲಿಸಿರುವುದು ಸಂತೋಷ ತಂದಿದೆ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, 30 ವಿಧಾನಸಭೆ ವ್ಯಾಪ್ತಿವುಳ್ಳ ಕ್ಷೇತ್ರದಲ್ಲಿ ಪ್ರಚಾರದ ಅವಧಿ ಕಡಿಮೆ ಇದ್ದರೂ ಶಿಕ್ಷಕರು ಹಾಗೂ ಪದವೀಧರರು ನಿರೀಕ್ಷೆಗೂ ಮೀರಿ ಬೆಂಬಲಿಸಿದ್ದಾರೆ. ಇದರಿಂದ ಬಿಜೆಪಿಯ ಶಕ್ತಿ ಮತ್ತಷ್ಟು ಬಲಗೊಂಡಿದೆ. ಕಳೆದ ಒಂದು ವರ್ಷದಿಂದ ಅಭಿವೃದ್ಧಿ ಚಟುವಟಿಕೆಗಳು ನಡೆಯದ ಕಾರಣ ತಾಲೂಕಿನಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಆಯ್ಕೆ ಮಾಡಿದ ಜನರಿಗೆ ಕ್ಷೇತ್ರದ ಶಾಸಕರು ನಂಬಿಕೆ ದ್ರೋಹವೆಸಗಿದ್ದಾರೆ ಎಂದರು.

ಈಗಾಗಲೇ ಮಳೆಗಾಲ ಪ್ರಾರಂಭಗೊಂಡಿದೆ ರಸಗೊಬ್ಬರ, ಬಿತ್ತನೆ ಬೀಜ ಸಾಕಷ್ಟು ದಾಸ್ತಾನು ಇಲ್ಲದ ಕಾರಣ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಅಲ್ಲದೇ ರೈತ ಪರಿಕರಗಳ ದರ ದುಪ್ಪಟ್ಟಾಗಿದೆ. ಈ ಬಗ್ಗೆ ಯಾವುದೇ ಸಭೆ ನಡೆದಿಲ್ಲ. ಬರಿಯ ಚುನಾವಣೆಗಷ್ಟೇ ಸೀಮತವಾಗಿರುವ ಸಚಿವರು ವರ್ಷ ಕಳೆದರೂ ಒಂದೇ ಒಂದು ಅಧಿಕಾರಿಗಳ ಸಭೆ ನಡೆಸಿಲ್ಲ. ರೈತರು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅವರಿಂದ ಹೇಗೆ ಸಾಧ್ಯವಾಗುತ್ತದೆ ಎಂದು ಆರೋಪಿಸಿ ಕೂಡಲೇ ಸಚಿವರು ಅಧಿಕಾರಿಗಳ ಸಭೆ ನಡೆಸಬೇಕು ಮತ್ತು ತಾಲೂಕಿನ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿ, ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಚಿವರು ವರ್ಷದಿಂದ ಅಭಿವೃದ್ಧಿ ಅನುದಾನದ ಹಣವನ್ನು ತರದೇ ಕಾಲಾಹರಣ ಮಾಡಿದ್ದಾರೆ. ಕುಮಾರ್ ಬಂಗಾರಪ್ಪ ಅವರ ಅವಧಿಯಲ್ಲಿ ಬಿಡುಗಡೆಯಾದ ಅನುದಾನದ ಹಣದಲ್ಲಿ ನಿರ್ಮಾಣವಾಗುತ್ತಿರುವ ಈಡಿಗ ಸಮುದಾಯ ಭವನ, ನೌಕರರ ಭವನ, ಕನ್ನಡ ಸಾಹಿತ್ಯ ಪರಿಷತ್ ಭವನ ಸೇರಿದಂತೆ ವಿವಿಧ ಸಮುದಾಯಗಳ ಭವನಗಳಿಗೆ ಹಣದ ಕೊರತೆಯಿಂದಾಗಿ ಕುಂಠಿತಗೊಂಡಿವೆ. ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆಗೊಳಿಸಿ ತಕ್ಷಣ ಪೂರ್ಣಗೊಳಿಸಿ ಸಾರ್ವನಿಕರ ಸೇವೆಗೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು.

(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post