ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ ಜಿ¯್ಲೆಯಲ್ಲಿ ಕಳೆದ ಬಾರಿಗಿಂತ ಉತ್ತಮ ಮಳೆ ಆಗುತ್ತಿದ್ದು, ರೈತರು ಕೃಷಿ ಚಟುವಟಿಕೆಗಳು ನಡೆಸಲು ಅನುಕೂಲವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #B Y Raghavendra ಹೇಳಿದರು.
ಗುರುವಾರ ತಾಲೂಕಿನ ವರದಾ ನದಿ ಪ್ರವಾಹದಿಂದ ಉಂಟಾಗಿರುವ ನೆರೆ ಪೀಡಿತ ಪ್ರದೇಶಗಳಾದ ಹೊಳೆ ಜೋಳದಗುಡ್ಡೆ, ಕಡಸೂರು, ಬಾಡದಬೈಲು, ತಟ್ಟಿಕೆರೆ, ಶುಂಠಿಕೊಪ್ಪ ಗ್ರಾಮಗಳಲ್ಲಿ ಕೃಷಿ ಜಮೀನು ಮುಳುಗಡೆ ಪ್ರದೇಶಗಳನ್ನು ವೀಕ್ಷಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 70ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಈಗಾಗಲೇ ಸೊರಬದಲ್ಲಿ 6ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಶೇ. 80ರಷ್ಟು ಜೋಳ ಬಿತ್ತನೆ ಆಗಿದೆ ಎಂದು ಮಾಹಿತಿ ನೀಡಿದರು.
ರೈತರಿಗೆ ನೆರವು
ರೈತರಿಗೆ ಬೆಳೆ ಬೆಳೆಯಲು ಅಗತ್ಯವಿರುವ ಬೀಜ, ಗೊಬ್ಬರ ಮತ್ತು ಔಷಧಿಗಳಿಗೆ ಕೊರತೆ ಆಗದಂತೆ ಪೂರೈಕೆ ಮಾಡಲಾಗಿದೆ ಎಂದು ರಾಘವೇಂದ್ರ ಹೇಳಿದರು.
ತೋಟಗಾರಿಕಾ ಇಲಾಖೆಯಲ್ಲಿ ರೈತರಿಗೆ ಅವಶ್ಯವಿರುವ ಬೆಳೆ ವಿಮೆ ತುಂಬಲು ಜುಲೈ ತಿಂಗಳವರೆಗೆ ಅವಕಾಶ ನೀಡಿದೆ. ಗ್ರಾಮ ಪಂಚಾಯಿತಿ ಮತ್ತು ಸಹಕಾರ ಸಂಘಗಳಲ್ಲಿ ಈ ಬಗ್ಗೆ ರೈತರಿಗೆ ಸಮರ್ಪಕವಾಗಿ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆ ಹಾನಿ
ತಾಲೂಕಿನಲ್ಲಿ ಬಿರುಸುಗೊಂಡ ಮಳೆಗೆ 21 ಮನೆಗಳು ಹಾನಿಗೀಡಾಗಿದ್ದು, 3 ಜಾನುವಾರುಗಳು ಮೃತಪಟ್ಟ ಬಗ್ಗೆ ವರದಿ ಆಗಿದೆ. ಅಧಿಕಾರಿಗಳು ಸರ್ಕಾರದಿಂದ ದೊರೆಯುವ ಪರಿಹಾರ ಮೊತ್ತವನ್ನು ನಿಗದಿತ ಸಮಯಕ್ಕೆ ಫಲಾನುಭವಿಗಳಿಗೆ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ಸಂಪರ್ಕ ರಸ್ತೆಗಳ ಹಾನಿ
ಅಧಿಕ ಮಳೆಯಿಂದ ಸೊರಬ ಶಿರಾಳಕೊಪ್ಪ, ತವನಂದಿ, ಹೊಸೂರು, ಇಂಡುವಳ್ಳಿ ಮೂಲಕ ಶಿರಾಳಕೊಪ್ಪ ಸಂಪರ್ಕಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆ ಆರಂಭದ ಪೂರ್ವದಲ್ಲಿ ಅಧಿಕಾರಿಗಳು ದುರಸ್ತಿ ಕಾರ್ಯ ಕೈಗೊಂಡಿದ್ದರೆ ವಾಹನ ಸವಾರರು ಅನುಭವಿಸುವ ಕಿರಿಕಿರಿ ತಪ್ಪಿಸಬಹುದಿತ್ತು. ಕೂಡಲೇ ಸಂಬAಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗುವಂತೆ ತಿಳಿಸಿದರು.
ಮಾಜಿ ಸಚಿವ ಕುಮಾರ್ ಬಂಗಾರಪ್ಪ, ತಹಶೀಲ್ದಾರ್ ಮಂಜುಳಾ ಹೆಗಡಾಳ್, ಕೃಷಿ ಅಧಿಕಾರಿ ಕೆ.ಜಿ. ಕುಮಾರ್, ಸಾಗರ ಉಪ ಕೃಷಿ ನಿರ್ದೇಶಕ ಬಸವರಾಜ್, ಶಿರಸ್ತೇದಾರ್ ನಾಗರಾಜ್, ಎಂಜಿನಿಯರ್’ಗಳಾದ ಗಣಪತಿ ನಾಯ್ಕ್, ಸೌಮ್ಯಾ, ಮನೋಜ್ ಹಾಗೂ ಪ್ರಮುಖ ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
(ವರದಿ: ಮಧುರಾಮ್, ಸೊರಬ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















