ಕಲ್ಪ ಮೀಡಿಯಾ ಹೌಸ್
ಸೊರಬ: ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ನಡೆದ ದೇಶದ ವಿಭಜನೆಯಿಂದಾಗಿ ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದು, ಈಗಲೂ ಎದುರಿಸುತ್ತಿದ್ದೇವೆ. ದೇಶದಿಂದ ಇಬ್ಬಾಗವಾಗಿ ಉದಯವಾದ ರಾಷ್ಟ್ರಗಳೇ ಇಂದು ನಮ್ಮ ಶತ್ರು ರಾಷ್ಟ್ರಗಳಾಗಿವೆ. ಅಲ್ಲಿ ಬಹುಸಂಖ್ಯಾತರಾಗಿದ್ದ ಹಿಂದೂಗಳು ಇಂದು ಶೇಕಡಾ ಪ್ರಮಾಣದಲ್ಲಿ ಒಂದಂಕಿಗೆ ಇಳಿದಿದ್ದಾರೆ. ಅಲ್ಲಿನ ಹಿಂದೂಗಳ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಕಟಿಬದ್ಧರಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಸರಣ ಎಸ್.ಆರ್. ಧರಣೇಶ್ ಕರೆ ನೀಡಿದರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಪಟ್ಟಣದ ಮುಖ್ಯರಸ್ತೆಯ ಶ್ರೀ ವರದ ಹಸ್ತ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ವತಿಯಿಂದ ಹಮ್ಮಿಕೊಂಡ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು.
ತುಷ್ಠೀಕರಣ ನೀತಿಯಿಂದಾಗಿ ದೇಶದ ವಿಭಜನೆಯಾಗಿದ್ದು, ರಾಷ್ಟ್ರದ ಪುನರುತ್ಥಾನಕ್ಕೆ ತುಂಡಾದ ಭೂಮಿ ಮತ್ತೇ ಒಂದಾಗಬೇಕು ಎನ್ನುವ ಸಂಕಲ್ಪ ಎಲ್ಲರಲ್ಲೂ ಪ್ರೇರಣೆ ನೀಡಿದೆ. ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅರುಣಾಚಲ ಪ್ರದೇಶದ ಬಹುಭಾಗಗಳು ಕ್ರಮವಾಗಿ ಪಾಕಿಸ್ತಾನ ಹಾಗೂ ಚೀನಾ ದೇಶಗಳ ನಿಯಂತ್ರಣದಲ್ಲಿದೆ. ಇವುಗಳೆಲ್ಲವನ್ನು ಒಟ್ಟುಗೂಡಿಸಿ ಮತ್ತೆ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ನಿರ್ಮಿಸಿದ್ದ ಅಖಂಡ ಭಾರತವನ್ನು ಪಡೆಯುವುದೇ ನಮ್ಮ ಗುರಿ. ಸ್ವಾತಂತ್ರ್ಯ ಯೋಧರು ಅಖಂಡ ಭಾರತಕ್ಕಾಗಿ ಹೋರಾಟ ನಡೆಸಿದರೆ ವಿನಾ, ದೇಶ ವಿಭಜನೆಗಾಗಿ ಅಲ್ಲ. ಪ್ರಸ್ತುತ ವಿವಿಧ ದೇಶಗಳಾಗಿ ಇಬ್ಭಾಗವಾಗಿರುವ ಮಾತೃಭೂಮಿಯನ್ನು ಮತ್ತೆ ಅಖಂಡವನ್ನಾಗಿ ಮಾಡಬೇಕೆಂಬ ಸಂಕಲ್ಪ ಪ್ರತಿಯೊಬ್ಬ ಭಾರತೀಯರು ಹೊಂದಬೇಕು ಎಂದರು.
ಯುವ ವಾಗ್ಮಿ ಭರತ್ ಕಾರೇಕೊಪ್ಪ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ 300 ವರ್ಷಗಳಿಗೂ ಅಧಿಕ ಇತಿಹಾಸವಿದೆ. ದೇಶದ ಮೇಲೆ ಹಲವಾರು ಆಕ್ರಮಣಗಳಾಗಿದ್ದು, ಅದು ಕೇವಲ ರಾಜ್ಯಗಳ ವಿಸ್ತರಣೆ ಮಾತ್ರವಾಗಿರದೇ, ಇಲ್ಲಿನ ಸಂಸ್ಕೃತಿಯ ಮೇಲೆಯೂ ದಾಳಿ ನಡೆದಿದೆ. ಪ್ರಸ್ತುತ ದಿನಗಳಲ್ಲಿ ಲವ್ ಜಿಹಾದ್, ಬಲವಂತದ ಮತಾಂತರ, ಭಯೋತ್ಪಾದನೆ ಸೇರಿದಂತೆ ಅನೇಕ ದಾಳಿಗಳನ್ನು ಎದುರಿಸುತ್ತಿದ್ದೇವೆ. ಇವುಗಳಿಗೆ ಪ್ರತ್ಯುತ್ತರವನ್ನು ನೀಡಲೇಬೇಕಿದೆ. ಈ ನಿಟ್ಟಿನಲ್ಲಿ ಹಿಂದೂ ಸಮಾಜ ಸಂಘಟಿತವಾಗಿ ಎಲ್ಲವನ್ನು ಎದುರಿಸಬೇಕು ಎಂದರು.
ಪಟ್ಟಣದ ಶ್ರೀ ವರದಹಸ್ತ ಆಂಜನೇಯ ದೇವಸ್ಥಾನದಿಂದ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನವರೆಗೆ ಪಂಜಿನ ಮೆರವಣಿಗೆ ನಡೆಯಿತು. ಅಖಂಡ ಭಾರತ ಸಂಕಲ್ಪ ದಿನದ ಪ್ರತಿಜ್ಞೆಯನ್ನು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಧರ್ಮ ಪ್ರಸರಣ ಎಸ್.ಆರ್. ಧರಣೇಶ್ ಬೋಧಿಸಿದರು.
ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಎಂ.ಎಸ್. ಕಾಳಿಂಗರಾಜ್ ನೇತೃತ್ವ ವಹಿಸಿದ್ದರು. ಆರ್‌ಎಸ್‌ಎಸ್ ತಾಲೂಕು ಕಾರ್ಯವಾಹ ಸೋಮಪ್ಪ ಕಾರೆಕೊಪ್ಪ, ಕಾರ್ಯಕರ್ತ ಮಹೇಶ್ ಗೋಖಲೆ, ವಿಹಿಂಪ ಜಿಲ್ಲಾ ಸಹ ಕಾರ್ಯದರ್ಶಿ ಎಚ್.ಎಲ್. ಚಂದನ್, ತಾಲೂಕು ಉಪಾಧ್ಯಕ್ಷರಾದ ಹರೀಶ್ ಭಟ್, ವಾಸುದೇವ ಬೆನ್ನೂರು, ಕಾರ್ಯದರ್ಶಿ ಪ್ರಶಾಂತ್ ಶ್ಯಾಡಲಕೊಪ್ಪ, ನಗರ ಅಧ್ಯಕ್ಷ ರಾಜು ಹಿರಿಯಾವಲಿ, ಕಾರ್ಯದರ್ಶಿ ರವಿ ಗುಡಿಗಾರ್, ಉಪಾಧ್ಯಕ್ಷ ಅಶೋಕ ಚಲ್ಲೂರು, ಬಜರಂಗದಳ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ನಗರ ಸಹ ಸಂಚಾಲಕ ಎಸ್.ಎನ್. ಶರತ್, ಪುರಸಭೆ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಸದಸ್ಯ ವೀರೇಶ್ ಮೇಸ್ತ್ರಿ, ಮುಖಂಡರಾದ ಪಾಣಿ ರಾಜಪ್ಪ, ಯೋಗೇಶ್ ವಕೀಲ, ಸಂಜೀವ್ ಆಚಾರಿ ಸೇರಿದಂತೆ ಇತರರಿದ್ದರು. ಕೃತಿಕಾ ಪುರಾಣಿಕ್ ಮತ್ತು ಕೋಮಲಾ ಪುರಾಣಿಕ್ ವಂದೇ ಮಾತರಂ ಹಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post