ಸೊರಬ: ತಾಲೂಕು ಪಂಚಾಯ್ತಿಯ ಸಾಮಾನ್ಯ ಸಭೆಗೆ ನಿರಂತರವಾಗಿ ಗೈರಾಗುತ್ತಿರುವ ಅಧಿಕಾರಿಗಳಿಗೆ ಈ ಹಿಂದಿನ ಸಭೆಯಲ್ಲಿ ನೋಟೀಸ್ ನೀಡುವಂತೆ ನಿರ್ಣಯ ಕೈಗೊಳ್ಳಲಾಗಿತ್ತು. ಎಷ್ಟು ಅಧಿಕಾರಿಗಳಿಗೆ ನೋಟೀಸ್ ನೀಡಲಾಗಿದೆ. ಸಮರ್ಪಕವಾಗಿ ಉತ್ತರ ನೀಡದ, ಉದ್ದಟತನ ಪ್ರದರ್ಶಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ನಿರ್ಣಯ ಕೈಗೊಂಡು ಮೇಲಧಿಕಾರಿಗಳಿಗೆ ಪತ್ರ ಬರೆಯುವಂತೆ ತಾಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಗ್ರಹಿಸಿದ ಘಟನೆ ನಡೆಯಿತು.
ತಾಪಂ ಕಾರ್ಯನಿರ್ವಹಣಾಧಿಕಾರಿಗೆ ತುರ್ತು ಕೆಲಸದ ನಿಮಿತ್ತ ದಾಖಲೆಯನ್ನು ಇಲಾಖಾ ನೌಕರರ ಮುಖಾಂತರ ತಲುಪಿಸುವಂತೆ ಕಳುಹಿಸಿದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲ ಸಂದರ್ಭಗಳಲ್ಲಿ ಬಳಸುವ ರೀತಿಯಲ್ಲಿ ಇವರು ನನಗೆ ಏಕವಚನ ಬಳಸಿದ್ದು ಸರಿಯೇ ಎಂದು ನಾಗರಾಜ್ ಚಿಕ್ಕಸವಿ ಸಭೆಯ ಗಮನಕ್ಕೆ ತಂದು ಅಧಿಕಾರಿಯ ವಿರುದ್ಧ ಗರಂ ಆದರು. ಕೂಡಲೇ ಮಧ್ಯ ಪ್ರವೇಶಿಸಿದ ತಾಪಂ ಅಧ್ಯೆಕ್ಷೆ ನಯನ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್ ಮತ್ತು ಕೆಲವು ಸದಸ್ಯರು ಈ ತರಹದ ಬೆಳವಣಿಗೆ ಒಳ್ಳೆಯದಲ್ಲ. ಹೊಸದಾಗಿ ಇಲಾಖೆಗೆ ಬಂದಿರುವ ಅಧಿಕಾರಿಯಾಗಿರುವುದರಿಂದ ಈ ರೀತಿಯ ಬೆಳವಣಿಗೆ ನಡೆದಿರಬಹುದು ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಎಚ್ಚರವಹಿಸಬೇಕೆಂದರು.
ತಾಪಂ ಅಧ್ಯಕ್ಷೆ ನಯನ ಶ್ರೀಪಾದ ಹೆಗಡೆ ಅವರ ಅಧ್ಯಕ್ಷೆತೆಯಲ್ಲಿ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸಭೆ ಪ್ರಾರಂಭವಾಗುತ್ತಿದ್ದಂತೆ, ಸ್ಥಾಯಿ ಸಮಿತಿ ಅಧ್ಯಕ್ಷ ನರೇಂದ್ರ ಒಡೆಯರ್ ಹಾಗು ಸದಸ್ಯ ನಾಗರಾಜ್ ಚಿಕ್ಕಸವಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಅಧಿಕಾರಿಗಳು ಹಾಜರಾಗಬೇಕಿತ್ತು. ಇಲಾಖಾವಾರು ಕೆಲಸ ಮಾಡಬೇಕಾದ ಅಧಿಕಾರಿಗಳನ್ನೇ ಜನಪ್ರತಿನಿಧಿಗಳಾದ ನಾವುಗಳು ಕಾಯುವಂತಾಗಿದೆ. ಕೆಲ ಸದಸ್ಯರು ಸುಮಾರು 40 ಕಿಲೋ ಮೀಟರ್‌ಗಳಿಂದ ತಡ ಮಾಡದೆ ಓಡಿ ಬರುವ ನಮಗೆ ಇಷ್ಟು ಕಾಳಜಿ ಇರುವಾಗ ಸಭೆ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಬೇಕಿದ್ದ ಅಧಿಕಾರಿಗಳಿಗೇಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸ್ತಾಯಿ ಸಮಿತಿ ಅವಧಿ ಪೂರ್ಣಗೊಡಿದ್ದು, ಹೊಸದಾಗಿ ಅಧ್ಯಕ್ಷರು ಹಾಗೂ ಸಮಿತಿಯನ್ನು ರಚಿಸುವ ಕುರಿತು ಸಭೆಯಲ್ಲಿ ಪ್ರಸ್ತಾವನೆ ಬಂದಾಗ ಅಧ್ಯಕ್ಷೆ ನಯನ, ಈಗ ಹಾಲಿ ಇರುವ ಸಮಿತಿಯನ್ನೆ ಮುಂದುವರೆಸಬಹುದು ಎಂದು ಸಭೆಯ ಗಮನಕ್ಕೆ ತಂದಾಗ ಕೆಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಧ್ಯಕ್ಷರ ಹೊರತು ಪಡಿಸಿ ಸಮಿತಿಯಲ್ಲಿನ ಕೆಲ ಸದಸ್ಯರನ್ನು ಬದಲಾಯಿಸುವಂತೆ ವತ್ತಾಯಿಸಿದಾಗ ಪರಸ್ಪರ ಚರ್ಚೆ ನಡೆದು ಅಂತಿಮವಾಗಿ ಆದೇ ಸಮಿತಿಯನ್ನೇ ಮುಂದುವರೆಸಲು ತೀರ್ಮಾನಿಸಲಾಯಿತು.
ತಾಪಂ ನೂತನ ಕಟ್ಟಡ ಕಾಮಗಾರಿಯು ಅನುದಾನದ ಕೊರತೆಯಿಂದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಅನುದಾನ ಬಿಡುಗಡೆಗಾಗಿ ಸಂಬಂಧಿಸಿದ ಮಂತ್ರಿಗಳಿಗೆ ಬೇಡಿಕೆ ಸಲ್ಲಿಸುವಂತೆ ತೀರ್ಮಾನಿಸಲಾಯಿತು.
ಕುಪ್ಪಗಡ್ಡೆ ಸೇರಿದಂತೆ ಸುತ್ತ ಮುತ್ತಲಿನ ಕೆಲ ಗ್ರಾಮಗಳಲ್ಲಿ ಪ್ರತಿ ಮನೆ ಮನೆಗಳಲ್ಲಿಯೂ ಜ್ವರ ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಕೂಡಲೆ ಕ್ರಮ ಕೈಗೊಳ್ಳುವ ಜೊತೆಗೆ ಸ್ಥಳಕ್ಕೆ ಭೇಟಿ ನೀಡಿ, ಜಾಗೃತಿ ಮೂಡಿಸಬೇಕು. ಇದರಿಂದ ಕನಿಷ್ಟ ಜನರಿಗಾದರೂ ಮಾನಸಿಕ ನೆಮ್ಮದಿ ಸಿಗುವಂತಾಗಬೇಕು. ಕುಪ್ಪಗಡ್ಡೆ ಗ್ರಾಮದ ಸರ್ಕಾರಿ ಶಾಲಾ ಕಟ್ಟಡ ಸೇರಿದಂತೆ ತಾಲೂಕಿನ ಬಹುತೇಕ ಶಾಲಾ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದ್ದು, ಶಾಲಾ ಮಕ್ಕಳು ಭಯದ ವಾತವರಣದಲ್ಲಿ ಪಾಠ ಕಲಿಯುವಂತಾಗಿದೆ. ಕೂಡಲೇ ಶಾಲೆಗಳ ದುರಸ್ಥಿಗಾಗಿ ಕ್ರಮ ಕೈಗೊಳ್ಳಬೇಕು. ಆನವಟ್ಟಿಯಲ್ಲಿ ನಕಲಿ ವೈದ್ಯರ ಹಾವಳಿ ತಡೆಯುವಂತೆ ಕೆಡಿಪಿ ಸಭೆಯಲ್ಲಿ ಶಾಸಕರ ಸಮ್ಮುಖದಲ್ಲಿ ಚರ್ಚಿಸಲಾಗಿತ್ತಾದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ಕೇವಲ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಸಭೆಗಳಲ್ಲಿ ಅಧಿಕಾರಿಗಳು ಉತ್ತರಿಸುತ್ತಾರೆ. ಸಭೆಯಲ್ಲಿ ನಡೆಸಿದ ಚರ್ಚೆಗಳ ಸಂದರ್ಭದಲ್ಲಿ ನ್ಯೂನ್ಯತೆಗಳ ಕುರಿತು ತಾಲೂಕು ಅಧಿಕಾರಿಗಳು ಮೇಲಧಿಕಾರಿಗಳಿಗೆ ಕೇವಲ ಪತ್ರಗಳು ಬರೆದು ಕೈ ತೊಳದುಕೊಂಡರೆ ಸಾಲದು. ಮೇಲಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಉತ್ತರಗಳನ್ನು ಪಡೆಯುವಲ್ಲಿ ಅಧಿಕಾರಿಗಳ ನಿರ್ಲಕ್ಷತನ ಎದ್ದು ಕಾಣುತ್ತಿದೆ ಎಂದು ಸದಸ್ಯ ಪುರುಶೋತ್ತಮ ಕುಪ್ಪಗಡ್ಡೆ ಸಭೆಯ ಗಮನಕ್ಕೆ ತರುತ್ತಿದ್ದಂತೆ ಅಂಜಲಿ, ವಿಜಯ ಕುಮಾರ್ ಹೊಸಕೊಪ್ಪ, ನಾಗರಾಜ್ ಚಂದ್ರಗುತ್ತಿ, ಸುನೀಲ್ ಗೌಡ ಸೇರಿದಂತೆ ಮತ್ತಿತರ ಸದಸ್ಯರು ದನಿಗೂಡಿಸಿದರು.
ಸಭೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಬಸವರಾಜ್ ಹೆಗ್ಗನಾಯಕ್, ಬಿಇಒ ಕೆ. ಮಂಜುನಾಥ, ತಾಲೂಕು ವೈದ್ಯಾಧಿಕಾರಿ ಡಾ.ಗಾಯತ್ರಿ, ಪಶುವೈದ್ಯಾಧಕಾರಿ ಡಾ.ರಂಗಸ್ವಾಮಿ, ಸಮಾಜ ಕಲ್ಯಾಣಾಧಿಕಾರಿ ರವಿಕುಮಾರ್, ಬಿಸಿಎಂ ಇಲಾಖಾಧಿಕಾರಿ ವಿಜಯಲಕ್ಷ್ಮೀ ಬದ್ನೂರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ತಾಪಂ ಸದಸ್ಯರು, ನಾಮ ನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.
(ವರದಿ: ಮಧುರಾಮ್, ಸೊರಬ)
Discussion about this post