ಸೊರಬ: ತಾಲೂಕು ಪಂಚಾಯ್ತಿಗೆ ಸರ್ಕಾರ ವಾರ್ಷಿಕವಾಗಿ ಒಂದು ಕೋಟಿ ರೂ. ಸಂಯುಕ್ತ ಅನುದಾನ ನೀಡುತ್ತದೆ. ಇದರಿಂದ ಅಭಿವೃದ್ಧಿ ನಿರೀಕ್ಷಿಸುವುದು ಕಷ್ಟಕರವಾಗಿದೆ. ಹೆಚ್ಚಿನ ಅನುದಾನ ನೀಡಬೇಕು. ಇಲ್ಲವೇ ತಾಲೂಕು ಪಂಚಾಯ್ತಿಯ ವ್ಯವಸ್ಥೆಯನ್ನೇ ಕೈಬಿಡಬೇಕು ಎಂದು ತಾಪಂ ಅಧ್ಯಕ್ಷೆ ನಯನ ಹೆಗಡೆ, ಉಪಾಧ್ಯಕ್ಷ ಸುರೇಶ ಹಾವಣ್ಣನವರ್ ತಿಳಿಸಿದರು.
ತಾಪಂ ಕಚೇರಿಯಲ್ಲಿ ನಡೆದ ಸ್ಥಾಯಿ ಸಮಿತಿ ಸಭೆಯ ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ತಾಲೂಕು ಪಂಚಾಯ್ತಿಗೆ 10 ರಿಂದ 12 ಇಲಾಖೆಗಳನ್ನು ಜೋಡಣೆ ಮಾಡಿದ್ದು, ಇಲಾಖಾವಾರು ಬೇಡಿಕೆಗೆ ತಕ್ಕಂತೆ ಅನುದಾನವನ್ನು ನೀಡಲು ಸಾಧ್ಯವಿಲ್ಲ ಎಂದರು. ಅಲ್ಲದೇ ಒಂದೊಂದು ತಾಪಂ ಯಲ್ಲಿ 20-30 ಸದಸ್ಯರಿರುತ್ತಾರೆ. ಅವರ ವ್ಯಾಪ್ತಿಗೆ 30 ರಿಂದ 40 ಹಳ್ಳಿಗಳು ಬರುತ್ತವೆ. ಪ್ರತಿ ಹಳ್ಳಿಗಳಲ್ಲಿಯೂ ತಾಪಂ ಅನುದಾನವನ್ನು ನಿರೀಕ್ಷಿಸುತ್ತಾರೆ. ಇದರಿಂದ ತಾಲೂಕು ಪಂಚಾಯ್ತಿ ಸದಸ್ಯರು ಸಾರ್ವಜನಿಕರ ಮಟ್ಟಿಗೆ ಇದ್ದೂ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಹೆಚ್ಚಿನ ಹಣ ನೀಡಬೇಕು ಎಂದು ತಿಳಿಸಿದರು.
ಹಾಗೂ ಅನುದಾನಕ್ಕಾಗಿ ಹೋರಾಟ ಮಾಡಲು ಹಾಗೂ ಒತ್ತಡ ಹೇರಲು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ರಾಜ್ಯ ಒಕ್ಕೂಟವನ್ನು ರಚಿಸಲಾಗುತ್ತಿದೆ. ಸರ್ಕಾರ ತಾಲ್ಲೂಕು ಪಂಚಾಯ್ತಿಯ ಮೂಲ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡಬೇಕಿದೆ. ಹಾಗೂ ಒಂದೇ ವಾಹನವಿದ್ದು, ಕಾರ್ಯನಿರ್ವಹಣಾಧಿಕಾರಿ ಮತ್ತು ಅಧ್ಯಕ್ಷರು ಓಡಾಡಲು ಕಷ್ಟಕರವಾಗಿದೆ. ಅಲ್ಲದೇ ಕಾರ್ಯನಿರ್ವಹಣಾ ಕಛೇರಿಯನ್ನು ಕೂಡಾ ಸುಸಜ್ಜಿತವಾಗಿ ನೀಡಬೇಕಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಹೋರಾಟ ಅನಿವಾರ್ಯ ಎಂದು ತಿಳಿದು ಒಕ್ಕೂಟ ರಚಿಸಲು ಮುಂದಾಗಿರುವುದಾಗಿ ತಿಳಿಸಿದರು. ಈ ಬಗ್ಗೆ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿದರು.
ತಾಪಂ ಸದಸ್ಯರಾದ ವಿಜಯ ಕೆರಿಯಪ್ಪ, ಬಂಗಾರಪ್ಪಗೌಡ್ರು, ಸುನಿಲಗೌಡ, ನಾಗರಾಜ, ರೇಣುಕಾ, ಲತಾ, ಜ್ಯೋತಿ ನಾರಾಯಣಪ್ಪ ಉಪಸ್ಥಿತರಿದ್ದರು.
Discussion about this post