ಕಲ್ಪ ಮೀಡಿಯಾ ಹೌಸ್
ಸೊರಬ: ಯುಗಾದಿ ಧಾರ್ಮಿಕ ಆಚರಣೆಯಷ್ಟೆ ಅಲ್ಲ, ಪ್ರಕೃತಿ ತನ್ನ ಇರುವನ್ನು ತೋರಿಸುವ, ಪ್ರಾಕೃತಿಕ ಬದಲಾವಣೆಯ ದಿನವೆ ಯುಗಾದಿ, ಜನಪದೀಯವಾಗಿ, ವೈಜ್ಞಾನಿಕವಾಗಿ ವೈದ್ಯ ಶಾಸ್ತ್ರಕ್ಕನುಗುಣವಾಗಿ, ಪೌರಾಣಿಕವಾಗಿ ಈ ದಿನ ಭಾರತೀಯರಿಗೆ ಅತ್ಯಂತ ಪ್ರಮುಖ ದಿನ ಎಂದು ಸಂಸ್ಕೃತ ಉಪನ್ಯಾಸಕ ನಾಗೇಂದ್ರ ಕೆರೆಕೊಪ್ಪ ಹೇಳಿದರು.
ತಾಲ್ಲೂಕು ನಿಸರಾಣಿ ಗ್ರಾಮದ ಲಕ್ಷ್ಮೀನಾರಾಯಣ ಭಜನ ಮಂದಿರದಲ್ಲಿ ನಡೆದ ಭಾರತೀಯ ನೂತನ ವರ್ಷದ ಸಂಭ್ರಮ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.
ಮುಟಗುಪ್ಪೆ ಹೇಮಂತ ಇವರ ಕನ್ನಡ ಭಾರತಂ ಶೀರ್ಷಿಕೆಯ ಮಹಾಭಾರತ ಕಥೆಯ ಒಂದು ಸನ್ನಿವೇಶದ ರಗಳೆ ರೂಪದ ಕಾವ್ಯ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಸಾಗರ ತಾಲ್ಲೂಕು ಕಜಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಪ್ರೇಮ ಪ್ರೀತಿಯ ಕತೆ, ಕವನ ರಚಿಸುವ ವಯಸ್ಸಿನಲ್ಲಿ ಕನ್ನಡ ಭಾಷೆಯ ಛಂದಸ್ಸನ್ನು ಅರಿತು ಮೌಲ್ಯಯುತವಾಗಿ ಕಾವ್ಯ ರಚಿಸಿರುವುದು ಹೆಮ್ಮೆಯ ಸಂಗತಿ. ಮುಂದೊಮ್ಮೆ ಇವರದೆ ಹೇಮಂತ ಭಾರತ ಕೃತಿಯಾದರೆ ಅಚ್ಚರಿ ಪಡುವಂತಿಲ್ಲ, ಅಷ್ಟು ಮನೋಜ್ಞವಾಗಿ ರಚಿಸಿ ಪ್ರೌಢಿಮೆ ಮೆರೆದಿದ್ದಾರೆ ಎಂದರು.
ಬಿದರಗೆರೆ ರೇವಣಪ್ಪ ಇವರ ರಂಗಭೂಮಿ ಮತ್ತು ದಲಿತ ಸಂವೇದನೆ ಅಧ್ಯಯನ ಕೃತಿಯನ್ನು ಚಿಂತಕ ಭಾರ್ಗವ ನಾಡಿಗ್ ಬಿಡುಗಡೆಗೊಳಿಸಿ, ಅಧ್ಯಯನ ಶೀಲತೆ, ಬದ್ಧತೆ, ವಸ್ತುನಿಷ್ಟ ಮೌಲ್ಯ ಈ ಕೃತಿಯಲ್ಲಿದೆ. ಸಾಮಾಜಿಕ ನ್ಯಾಯದಿಂದ ವಂಚಿತರಾದವರಿಗೆ ಸಾಮಾಜಿಕ ನ್ಯಾಯ ಒದಗಿಸಿ ಕೊಡುವ ದನಿ ದಟ್ಟವಾಗಿದೆ. ಸೃಜನಶೀಲತೆಯ ಮುಖಾಂತರ ಸಾಮಾಜಿಕ ಅಂತರವನ್ನು ಹತ್ತಿರವಾಗಿಸುವ ಒಬ್ಬ ಅಧ್ಯಯನಕಾರರಾಗಿಯೂ ಈ ಕೃತಿಕಾರ ಹೊರಹಮ್ಮಿದ್ದಾನೆ ಎಂಬುದು ಸಂತಸದ ಸಂಗತಿ ಎಂದರು.ಗೀತಗಾಯನದಲ್ಲಿ ಶಿಶಿರಾ ವಿಘ್ನೇಶ್, ಶಾರದ, ರಾಜಪ್ಪ ಸಾಗರ ಪಾಲ್ಗೊಂಡರು.
ಇದೇ ಸಂದರ್ಭದಲ್ಲಿ ಗಮನಾರ್ಹ ಸಾಧನೆ ಮಾಡಿದ ಕತೆಗಾರ ರೇವಣಪ್ಪ ಬಿದರಗೆರೆ, ಹೇಮಂತ ಮುಟುಗುಪ್ಪೆ ಹಾಗೂ ಪೋಷಕರಿಗೆ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸುಮಿತ್ರಾಹೆಗಡೆ, ಶ್ರೀಮತಿ ಜೋಷಿ ಮತ್ತು ಶ್ರೀಪಾದ ಬಿಚ್ಚುಗತ್ತಿ ಅವರನ್ನು ಗ್ರಾಮದ ವತಿಯಿಂದ ಗೌರವಿಸಲಾಯಿತು.
ವೇದಿಕೆಯ ಅಧ್ಯಕ್ಷತೆಯನ್ನು ಕಸಾಸಾಂವೇ ಅಧ್ಯಕ್ಷ ಷಣ್ಮುಖಾಚಾರ್ ವಹಿಸಿದ್ದರು. ಗ್ರಾಮದ ಹಿರಿಯ ಸಾಹಿತ್ಯಾಸಕ್ತ ಭವಾನಮ್ಮ ಕಾರ್ಯಕ್ರಮ ಉದ್ಘಾಟಿಸಿದರು.
ಅಕ್ಕನ ಬಳಗದ ರೇಣುಕಮ್ಮ ಗೌಳಿ, ಕಜಾಪ ಮಹಿಳಾಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಕಸಾಪ ನಿಕಟಪೂರ್ವ ಅಧ್ಯಕ್ಷ ಹಾಲೇಶನವುಲೆ, ಸಾಗರದ ಹಿರಿಯ ಸಾಹಿತಿ ಉಮೇಶಹಿರೆನೆಲ್ಲೂರು, ರಾಜಪ್ಪ, ಕೆಳದಿ ವಸ್ತು ಸಂಗ್ರಹಾಲಯದ ಕ್ಯುರೇಟರ್ ಡಾ.ವೆಂಕಟೇಶಜೊಯ್ಸ್, ಮುಟಗುಪ್ಪೆ ಸಂತೋಷ್, ಸುಮಂತ್, ರಾಮಚಂದ್ರ ಜೋಷಿ, ಪ್ರಕಾಶ್ ಬರಿಗೆ, ಮತ್ತಿತರರು ಇದ್ದರು.
ವಿಘ್ನೇಶ್ ನಿರೂಪಿಸಿ, ಮಂಜಪ್ಪ ಸ್ವಾಗತಿಸಿದರು. ಶಿಶಿರ ವಿಘ್ನೇಶ್ ಪ್ರಾರ್ಥಿಸಿದರು. ಶ್ರೀಮತಿ ಜೋಷಿ ನಿರ್ವಹಿಸಿ, ಶ್ರೀಪಾದ ಬಿಚ್ಚುಗತ್ತಿ ದಿಕ್ಸೂಚಿ ಮಾತನ್ನಾಡಿದರು. ಶಾರದ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post