ಕಲ್ಪ ಮೀಡಿಯಾ ಹೌಸ್ | ಸೊರಬ |
ಟಾಟಾಏಸ್ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಚಿತ್ರಟ್ಟಹಳ್ಳಿ ಗ್ರಾಮದ ಬಳಿ ಮಂಗಳವಾರ ತಡ ರಾತ್ರಿ ನಡೆದಿದೆ.
ತವನಂದಿ ಗ್ರಾಮದ ಯೋಗರಾಜಪ್ಪ ನಿಂಗಪ್ಪ (57), ತಿಮ್ಮಪ್ಪ ಈರಪ್ಪ (45) ಹಾಗೂ ಆಕಾಶ್ ಹನುಮಂತಪ್ಪ (13) ಮೃತ ದುರ್ಧೈವಿಗಳು. ಅಪಘಾತದಿಂದ ತೀವ್ರವಾಗಿ ಗಾಯಗೊಂಡಿರುವ ಬಸವರಾಜ್, ಹುಚ್ಚರಾಯಪ್ಪ, ಪರಶುರಾಮ, ಕೃಷ್ಣಪ್ಪ, ಜಗದೀಶ, ಚಂದ್ರಪ್ಪ, ಭೀಮಪ್ಪ, ಹನುಮಂತಪ್ಪ ಹಾಗೂ ಮಹಾದೇವಪ್ಪ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದು, ವಾಹನ ಚಾಲಕ ಹನುಮಂತಪ್ಪ ಮತ್ತು ನಿರಂಜನ ಅವರಿಗೆ ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾಗರ ಸಮೀಪದ ಗುತ್ತನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮಕ್ಕೆ ತೆರಳಿದ್ದವರು ಭೋಜನ ಸ್ವೀಕರಿಸಿ ತವನಂದಿ ಗ್ರಾಮಕ್ಕೆ ವಾಪಾಸ್ಸಾಗುವ ವೇಳೆ ಆನವಟ್ಟಿ-ಸೊರಬ ರಸ್ತೆಯ ಚಿತ್ರಟ್ಟಹಳ್ಳಿ ಗ್ರಾಮದ ಸಮೀಪ ಚಾಲಕನ ನಿಯಂತ್ರಣ ತಪ್ಪಿ ವಾಹನವು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ. ವಿಷಯ ತಿಳಿಯುತ್ತಿದ್ದಂತೆ 112 ಪೊಲೀಸ್ ಸಿಬ್ಬಂದಿ ತೆರಳಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Also read: ಸಚಿವ ಈಶ್ವರಪ್ಪ ಮೇಲಿನ ಆರೋಪ ರಾಜಕೀಯ ಪಿತೂರಿ: ಸಚಿವ ಗೋಪಾಲಯ್ಯ
ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಎಲ್. ರಾಜಶೇಖರ್ ಹಾಗೂ ಪಿಎಸ್‍ಐ ದೇವರಾಯಅವರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಅಪಘಾತದಲ್ಲಿ ಗಾಯಗೊಂಡವರು ಹಾಗೂ ಮೃತರು ತವನಂದಿ ಗ್ರಾಮದವರಾಗಿದ್ದು, ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post