ಕಲ್ಪ ಮೀಡಿಯಾ ಹೌಸ್
ಭಾರತ ಮಾತ್ರವಲ್ಲಿ ಇಡಿಯ ವಿಶ್ವದ ಬಹುತೇಕ ರಾಷ್ಟ್ರಗಳನ್ನು ಕೊರೋನಾ ವೈರಸ್ ಹಿಂಡಿ ಹಿಪ್ಪೆ ಮಾಡಿದ್ದು, ಇದರಿಂದ ಸುಧಾರಿಸಿಕೊಂಡು ಹೊರಕ್ಕೆ ಬರಲು ಎಲ್ಲರೂ ಅಕ್ಷರಶಃ ನಲುಗುವಂತೆ ಮಾಡಿದೆ. ಇದರ ನಡುವೆಯೇ ಈಗ ಹೊಸತೊಂದು ಕಾಯಿಲೆ ಕಾಣಿಸಿಕೊಳ್ಳಲು ಆರಂಭವಾಗಿದೆ. ಅದೇ ಕವಾಸಕಿ ಕಾಯಿಲೆ!
ಏನಿದು ಕವಾಸಕಿ ಕಾಯಿಲೆ?
ಮಕ್ಕಳಲ್ಲಿ ಕಂಡು ಬರುವ ಕೆಲವು ಹೃದಯ ಸಂಬಂಧಿ ಕಾಯಿಲೆಗಳಿಗೆ ಮುಖ್ಯ ಕಾರಣ ಈ ಕವಾಸಕಿ ಜಾಡ್ಯ. ಅಮೆರಿಕಾದಲ್ಲಿ ಇಂತಹ 4000ಕ್ಕೂ ಹೆಚ್ಚು ಪ್ರಕರಣಗಳು ಪ್ರತಿ ವರ್ಷ ವರದಿಯಾಗುತ್ತಿವೆ. ಸಾಮಾನ್ಯವಾಗಿ ಇದು ಮಕ್ಕಳಲ್ಲಿ ರಕ್ತನಾಳಗಳ ಊರಿಯುತ ಉಂಟು ಮಾಡಿ ದೇಹದಲ್ಲಿ ಅನೇಕ ರೀತಿಯ ತೊಂದರೆಗಳನ್ನು ತಂದೊಡ್ಡುತ್ತದೆ. ಅದರಲ್ಲಿ ಚರ್ಮದಲ್ಲಿ ದದ್ದು, ಕತ್ತಿಗೆಯಲ್ಲಿನ ಲೀಂಫ್ ಗ್ರಂಥಿಗಳ ಊತ, ಕೈ ಕಾಲು ಊದಿಕೊಳ್ಳುವುದು, ಕೆಂಗಣ್ಣು ಇವೇ ಇತ್ಯಾದಿ ಪ್ರಮುಖ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ನಂತರ ಇದರ ಪರಿಣಾಮವಾಗಿ ಹೃದಯದ ಸ್ನಾಯು ಹಾಗೂ ಕವಾಟಗಳ ಮೇಲೆಯೂ ತೊಂದರೆ ಉಂಟಾಗುತ್ತದೆ. ಇದೊಂದು ಅಂಟು ಜಾಡ್ಯವಲ್ಲ. ಇತರರಿಗೆ ಹರಡುವುದಿಲ್ಲ. ಏಷ್ಯಾ ಪೆಸಿಪಿಕ್ ರಾಷ್ಟ್ರಗಳ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಈ ಕಾಯಿಲೆಗೆ ನಿರ್ಧಿಷ್ಠವಾದ ಕಾರಣಗಳಿಲ್ಲ. ಇದು ದೇಹದ ರೋಗ ನಿರೋಧಕ ಶಕ್ತಿಯ ಪ್ರತಿಕ್ರಿಯೆಯಿಂದ ಉಂಟಾಗುವ ಸಮಸ್ಯೆ ಎಂದು ಹೇಳಲಾಗಿದೆ.
ಕವಾಸಕಿ ಕಾಯಿಲೆಯ ಲಕ್ಷಣಗಳೇನು?
1.ಕುತ್ತಿಗೆಯ ಲೀಂಫ್ ಗ್ರಂಥಿಗಳ ಊತ
2.ಕೈ-ಕಾಲು ಊದಿಕೊಳ್ಳುತ್ತದೆ
3.ತೊಡೆಯ ಸಂದುಗಳಲ್ಲಿ ಚರ್ಮದ ದದ್ದು
4.ಬಾಯಿ ನಾಲಿಗೆಗಳು ಕೆಂಪಾಗಿ ಊದಿಕೊಳ್ಳುವಿಕೆ
5.ಯಾತನೆಯಿಂದ ಅಳುತ್ತಿರುವ ಮಕ್ಕಳು ನಿದ್ರಾಹೀನತೆ
6.ಸುಮಾರು 102 ಡಿಗ್ರಿ ಫೆರನೈಟ್‌ಕ್ಕಿಂತಲೂ ಹೆಚ್ಚಿನ ಜ್ವರ
7.ವಾಂತಿ-ಬೇಧಿ ಆಗುವುದು ಸಾಮಾನ್ಯ
8.ಹೊಟ್ಟೆ ನೋವು ಕೆಮ್ಮು ತಲೆ ನೋವು ಹಾಗೂ ಗಂಟು ನೋವು
ರೋಗ ಪತ್ತೆ ಹಚ್ಚುವ ಕ್ರಮವೇನು?
ಶಿಶು ರೋಗ ತಜ್ಞರಿಂದ ಸಲಹೆ ಪಡೆದು ಹೃದಯ ಸಂಬಂಧಿ ರೋಗ ತಪಾಸಣೆ ಮಾಡಿಸಲಾಗುವುದು. ಹೃದಯದ ಇಸಿಜಿ ಅಥವಾ ಎಕೋ ಕಾರ್ಡಿಯೋಗ್ರಾಮ್‌ಗೆ ಒಳಪಡಿಸಿ ಹೃದಯ ಸಮಸ್ಯೆಗಳನ್ನು ಕಂಡುಹಿಡಿಯಬಹುದು. ಹೃದಯದಲ್ಲಿನ ರಕ್ತನಾಳಗಳು ಶಿಥಿಲಗೊಂಡು ಅಲ್ಲಲ್ಲಿ ಬಲೂನಿನಂತೆ ಊದಿಕೊಳ್ಳುವುದನ್ನು ಪತ್ತೆ ಹಚ್ಚಬಹುದು. ಈ ಕಾಯಿಲೆಯನ್ನು ಗುರುತಿಸಿದ ಹತ್ತು ದಿನಗಳ ಒಳಗೆ ಚಿಕಿತ್ಸೆ ಮಾಡಿದರೆ ಮುಂದೆ ಹೃದಯ ಸಮಸ್ಯೆ ಉಂಟಾಗುವುದಿಲ್ಲ.
ಚಿಕಿತ್ಸಾ ಕ್ರಮಗಳು:
ಈ ಮೇಲ್ಕಂಡ ಲಕ್ಷಣಗಳು ಕಾಣಿಕೊಂಡ ತಕ್ಷಣ ಮಗುವನ್ನು ವೈದ್ಯರ ಬಳಿ ಚಿಕಿತ್ಸೆ ಕರೆದೊಯ್ಯಬೇಕು. ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು.
ಇಂಟ್ರಾವೀನಸ್ ಇಮ್ಯೂನೋಗ್ಲೋಬುಲಿನ್ ಎನ್ನುವ ಔಷಧವನ್ನು ಕಾಯಿಲೆಯ ಲಕ್ಷಣಗಳು ಗೋಚರಿಸಿದ 8-12 ಗಂಟೆ ಒಳಗೆ ನೀಡಬೇಕು. ಈ ಚಿಕಿತ್ಸೆಯ ನಂತರ ಕನಿಷ್ಠ24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿದ್ದು ರೋಗಿಯ ಸ್ಥಿತಿ ಸುಧಾರಿಸಿದ ನಂತರ ವೈದ್ಯರ ಸಲಹೆಯಂತೆ ಮನೆಗೆ ತೆರಳಬಹುದು. ಹೃದಯ ಸಮಸ್ಯೆ ತಡೆಗಟ್ಟಲು ಆಸ್ಫಿರಿನ್ ಔಷಧವನ್ನು ವೈದ್ಯರ ಶಿಫಾರಸ್ಸಿನಂತೆ ನೀಡಬಹುದು. ದೀರ್ಘಾವಧಿಯಿಂದ ರೋಗಿಯು ಈ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ ಸ್ಟೀರಾಯ್ಡ್, ಇನ್ಫಿಕ್ಸಿಮೆಬ್ ನಂತಹ ಔಷಧಿಯನ್ನು ವೈದ್ಯರು ನೀಡುತ್ತಾರೆ. ಆದರೆ ಶಿಶು ವೈದ್ಯರು ಹಾಗೂ ಹೃದ್ರೋಗ ತಜ್ಞರ ಸಲಹೆ ಈ ಕಾಯಿಲೆಗೆ ಅತಿ ಮುಖ್ಯ.
ಅನ್ಯ ರೋಗ ಸಮಸ್ಯೆ ಹೊಂದಿರುವ 16 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಸೋಂಕು ತಗುಲಿ 4-5 ವಾರದ ಬಳಿಕ ಊರಿಯೂತ ಕಾಣಿಸಿಕೊಳ್ಳುತ್ತಿದೆ. ಇದು ಈ ಕೊರೋನಾ ಕಾಲದಲ್ಲಿ ಕಾಣೀಸಿಕೊಂಡು ಪೋಷಕರಲ್ಲಿ ಆತಂಕ ಮೂಡಿಸಿದೆ. ಕೊರೋನಾ ಮೂರನೆಯ ಅಲೆಯಲ್ಲಿ ಬಹುತೇಕ ಮಕ್ಕಳು ಈ ರೋಗಕ್ಕೆ ತುತ್ತಾಗುವ ಸಂಭವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಲ್ಲಿ ಹಾಗೂ ಕೊರೋನಾ ಸೋಂಕು ತಗಲಿ, ಚೇತರಿಸಿಕೊಂಡ ಮಕ್ಕಳಲ್ಲಿ ಈ ರೋಗ ಕಂಡುಬರುವ ಸಾಧ್ಯತೆ ಹೆಚ್ಚಿದೆ. ಹಾಗೆಯೇ ನಮ್ಮ ರಾಜ್ಯದ ಹಲವೆಡೆ ಈ ಕಾಯಿಲೆ ಕಾಣಿಸಿಕೊಂಡಿದೆ.
ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಮಕ್ಕಳಲ್ಲಿ ಕವಾಸಕಿ ಕಾಯಿಲೆಯ ರೋಗ ಲಕ್ಷಣಗಳು ಕಂಡುಬಂದಿದೆ. ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಕಾಯಿಲೆ ಸುಮಾರು ಹತ್ತಕ್ಕೂ ಹೆಚ್ಚು ಮಕ್ಕಳಲ್ಲಿ ಕಂಡುಬಂದಿದ್ದು, ಈ ಮಕ್ಕಳು ಮಲ್ಟಿ ಸಿಸ್ಟಮ್ ಇಂಫ್ಲಮೆಟರಿ ಸಿಂಡ್ರೋಮ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕಾಯಿಲೆ ಕಾಣಿಕೊಂಡವರಲ್ಲಿ 15 ವರ್ಷದೊಳಗಿನ ಇಬ್ಬರು ಮಕ್ಕಳು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಕೆಲವು ನವಜಾತ ಶಿಶುಗಳಲ್ಲೂ ಈ ರೋಗಲಕ್ಷಣಗಳು ಕಂಡು ಬಂದಿವೆ. ಹಾಗಾಗಿ ಬೆಂಗಳೂರಿನ ಸುತ್ತಮುತ್ತಲ ಜಿಲ್ಲೆಗಳಲ್ಲಿ ಇದು ಅತಂಕ ಮೂಡಿಸಿದೆ.
ಕೊನೆ ಮಾತು
ಕವಾಸಕಿ ರೋಗ ಅಂತಿಮವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ದೃಡಪಟ್ಟಿದೆ. ಆದ್ದರಿಂದ ಪೋಷಕರು ಈ ಕೊರೋನಾ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಇರುವ ಮಕ್ಕಳನ್ನು ಇನಷ್ಟು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಭವಿಷ್ಯದಲ್ಲಿ ಕೊರಗುವ ಬದಲು ಪೋಷಕರು ಸಾಧ್ಯವಾದಷ್ಟು ಪೂರ್ವಸಿದ್ಧತೆಯೊಂದಿಗೆ ಮಕ್ಕಳ ಯೋಗಕ್ಷೇಮದ ಕಡೆ ಕಾಳಜಿವಹಿಸಬೇಕು.
ಲೇಖಕರು: ಸಿಎಂಒ, ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ, ಪುರಲೆ, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post