ಬಳ್ಳಾರಿ ಎಂದು ಕೇಳಿದೊಡನೆ ನಮಗೆ ನೆನಪಿಗೆ ಬರುವುದು ಅಲ್ಲಿನ ಸುಡುವ ಬಿಸಿಲು, ಗಣಿಗಾರಿಕೆ, ಕಾಣುವುದು ಭೂ ಗರ್ಭ ಬಗೆದು ಮಣ್ಣು ಸಾಗಿಸುವ ವಾಹನಗಳು, ಇದರ ದುಷ್ಪರಿಣಾಮ ಎಂಬಂತೆ ಸದಾ ಅನಾರೋಗ್ಯದಿಂದ ಬಳಲುವ ಜನ.
ಇದೇನು ಉತ್ತೇಜ್ ಅಂತ ಶೀರ್ಷಿಕೆ ಕೊಟ್ಟು ಬಳ್ಳಾರಿ ಬಗ್ಗೆ ಕಥೆ ಹೊಡಿತಿದ್ದೇನೆ ಅಂದುಕೊಂಡರಾ? ಗೊಂದಲಕ್ಕೊಳಗಾಗಬೇಡಿ. ಪೂರ್ಣ ಓದಿ ಅರ್ಥವಾಗುತ್ತದೆ.
ಬಳ್ಳಾರಿಯ ಗಣಿ ಧೂಳಿನಡಿ ಅದೆಷ್ಟೋ ಪ್ರತಿಭೆಗಳು ಅನಾರೋಗ್ಯ ಸಮಸ್ಯೆಯಿಂದ ಮುದುಡಿ ಹೋಗಿದ್ದಾವೋ ಗೊತ್ತಿಲ್ಲ. ಆದರೆ ಉತ್ತೇಜ್ ಎನ್ನುವ ಚೇತನ ಆ ಮಣ್ಣಿನಿಂದ ಎದ್ದು ಇತರ ಸಾಧಕರಿಗೊಂದು ಉದಾಹರಣೆ ರೂಪದಲ್ಲಿ ನಿಂತಿದ್ದಾನೆ.
ಈತನ ಈಜು ಕೌಶಲ್ಯ ಕಂಡರೆ ಮೀನು ಸಹ ಅರೆಕ್ಷಣ ನಾಚುವಂತಿದೆ. ಮೂಲತಃ ಬಳ್ಳಾರಿಯವನಾದ ಈ ಉತ್ತೇಜ್ ನಿಜಕ್ಕೂ ಇನ್ನೊಬ್ಬರಿಗೆ ಸ್ಪೂರ್ತಿ. ಏಕೆಂದರೆ ತನ್ನ ದೈಹಿಕ ನ್ಯೂನತೆಯ ನಡುವೆಯೇ ಇಡೀ ದೇಶ ತನ್ನತ್ತ ತಿರುಗಿ ನೋಡುವ ರೀತಿ ಸಾಧನೆ ಮಾಡುತ್ತಿದ್ದಾನೆ.
,
ವಿಕಲಾಂಗ ಚೇತನ ಎನ್ನುವ ಪದ ಈತನಿಗಾಗಿಯೇ ಮಾಡಿರಬೇಕು ಎಂದೆನಿಸುತ್ತೆ. ಕಾರಣ ತನ್ನ ವೈಕಲ್ಯತೆಗೆ ಸೆಡ್ಡು ಹೊಡೆದು ಸಾಧನೆ ಮಾಡುತ್ತಾ ಸಾಗುತ್ತಿದ್ದಾನೆ. ಶ್ರವಣ ಮತ್ತು ವಾಕ್ ಶಕ್ತಿಯನ್ನು ಈತ ಹೊಂದಿಲ್ಲವಾದರೂ ಈತನ ಸಾಧನೆಗಳೆ ಈತನ ಪರವಾಗಿ ಮಾತನಾಡುತ್ತಿವೆ ಎಂದರೆ ತಪ್ಪಲ್ಲ.
ಈತ ಅದ್ಭುತ ಈಜುಪಟುವಾಗಿದ್ದು ವಿಕಲಚೇತನರ ವಿಭಾಗದಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಸಾಮರ್ಥ್ಯ ಏನು ಎಂದು ತೋರಿಸಿದ್ದಾನೆ.
ಇದುವರೆಗೆ ಈಜಿನಲ್ಲಿ ತಲಾ ಎರಡು ಬಾರಿ ರಾಷ್ಟ್ರ ಮಟ್ಟದಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನ ಗೆದ್ದ ಈತ ರಾಜ್ಯ ಮಟ್ಟದಲ್ಲಿ 6 ಪದಕಗಳಿಗೆ ಮುತ್ತಿಕ್ಕಿದ್ದಾನೆ.
ಸಾಲದೆಂಬಂತೆ ಇತ್ತೀಚೆಗೆ ಶ್ರೀಲಂಕಾ ದೇಶದಲ್ಲಿ ಮುಕ್ತಾಯಗೊಂಡ ಮೂರನೆಯ ಅಂತಾರಾಷ್ಟ್ರೀಯ ವಿಕಲಚೇತನರ ಕ್ರೀಡಾಕೂಟದ ಜ್ಯೂನಿಯರ್ ಈಜು ವಿಭಾಗದಲ್ಲಿ 100 ಮೀ ಪ್ರೀ ಸ್ಟೈಲ್ ಮತ್ತು 100 ಮೀ ಬ್ಯಾಕ್ ಸ್ಟ್ರೋಕ್ ನಲ್ಲಿ ಹೀಗೆ 2 ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾನೆ. ಜೊತೆಗೆ ಮುಂಬರುವ ಆಗಸ್ಟ್ ತಿಂಗಳಲ್ಲಿ ಬ್ರೆಜಿಲ್ ದೇಶದಲ್ಲಿ ನಡೆಯಲಿರುವ ಕ್ರೀಡಾಕೂಟದ ಜ್ಯೂನಿಯರ್ ವಿಭಾಗದಲ್ಲಿ ಭಾರತವನ್ನು ಈಜು ಸ್ಪರ್ಧೆಯಲ್ಲಿ ಪ್ರತಿನಿಧಿಸಲಿದ್ದಾನೆ.
ಇಷ್ಟೊಂದು ಸಾಧನೆ ಮಾಡಿರುವಾತನ ವಯಸ್ಸು ಎಷ್ಟಿರಬಹುದು? ಈತನ ವಯಸ್ಸು ಕೇವಲ 15 ವರ್ಷ, ಕಲಿಯುತ್ತಿರುವುದು 10 ನೆಯ ತರಗತಿ. ಇದನ್ನು ತಿಳಿದು ನಾನು ಸಹ ಎರಡು ನಿಮಿಷ ನಿರುತ್ತರನಾಗಿದ್ದು ಮಾತ್ರ ಸುಳ್ಳಲ್ಲ.
ಈತನ ಈ ಸಾಧನೆ ಕಂಡು ಶಾಲಾ ಆಡಳಿತ, ತಾಲೂಕು ಮಟ್ಟದಲ್ಲಿ ಮತ್ತು ಬಳ್ಳಾರಿ ಜಿಲ್ಲಾಡಳಿತ, ರಾಜ್ಯ ಸರ್ಕಾರದ ವಿವಿಧ ಅಂಗ ಸಂಸ್ಥೆಗಳು, ಮತ್ತು ಇತರ ಪ್ರತಿಷ್ಠಿತ ಸಂಘ ಸಂಸ್ಥೆಗಳು ಈತನನ್ನು ಸನ್ಮಾನ ಮಾಡಿ ಗೌರವಿಸಿವೆ.
ಈತನ ಈ ಸಾಧನೆಯ ಹಾದಿ ಹೀಗೇ ಮುಂದುವರೆಯಲಿ. ತನ್ನಿಂದ ಏನೂ ಸಾಧಿಸಲಾಗದು ಎಂಬ ಭಾವನೆ ಇರುವಂತಹವರ ಪಾಲಿಗೆ ಸ್ಪೂರ್ತಿಯಂತಿರುವ ಮತ್ತು ವಿಕಲಚೇತನರನ್ನು ಕಂಡರೆ. ಅಸಡ್ಡೆ ಮಾಡುವವರಿಗೆ ಪ್ರತ್ಯುತ್ತರದಂತಿರುವ ಈತ ಇನ್ನಷ್ಟು ಪದಕಗಳನ್ನು ಗೆದ್ದು ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತರಲಿ, ವಿದ್ಯಾಭ್ಯಾಸದಲ್ಲಿಯೂ ಈತನ ಸಾಧನೆ ಸಾಗಲಿ. ಬಹು ಮುಖ್ಯವಾಗಿ ಬ್ರೆಜಿಲ್ ಕ್ರೀಡಾಕೂಟದಲ್ಲಿ ಇನ್ನಷ್ಟು ಪದಕಗಳಿಗೆ ಮುತ್ತಿಕ್ಕುವಂತಾಗಲಿ ಎನ್ನುವ ಆಶಯ ನಮ್ಮದು.
ಲೇಖನ: ರೋಹನ್ ಪಿಂಟೋ ಗೇರುಸೊಪ್ಪ
ಸಹಕಾರ ಮತ್ತು ಚಿತ್ರಕೃಪೆ: ಆರ್. ರಶ್ಮಿತಾ
Discussion about this post