ಕಲ್ಪ ಮೀಡಿಯಾ ಹೌಸ್
ಮಲೆನಾಡೆಂಬುದು ಪಶ್ಚಿಮ ಘಟ್ಟ, ನಿತ್ಯ ಹರಿದ್ವರ್ಣ ಕಾಡು, ಬೆಟ್ಟ-ಗುಡ್ಡ, ಕೆರೆ, ಝರಿ, ಹಳ್ಳ ಕೊಳ್ಳಗಳಿಂದ ದೇಶದಲ್ಲೆ ವಿಶಿಷ್ಟ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿನ ವಿಶಿಷ್ಟ ಪರಿಸರ ವ್ಯವಸ್ಥೆಯ ಅತ್ಯಂತ ಮೂರ್ತಸ್ವರೂಪವೇ ಜೀವ ವೈವಿಧ್ಯವಾಗಿದೆ. ಈ ಪಶ್ಚಿಮ ಘಟ್ಟ ಪ್ರದೇಶ ಜಗತ್ತಿನ ಹತ್ತು ದಟ್ಟ ಜೀವ ವೈವಿಧ್ಯ ತಾಣಗಳಲ್ಲೊಂದು ಎಂಬ ಖ್ಯಾತಿ ಪಡೆದಿದೆ. ಇದಕ್ಕೆ ಕಾರಣ ಜಗತ್ತಿನ ಬೇರೆ ಭಾಗಗಳಲ್ಲಿ ಕಾಣಸಿಗದ ಸಾಕಷ್ಟು ವಿಶೇಷ ಪ್ರಾಣಿ ಪಕ್ಷಿಗಳು ಹಾಗೂ ಸಸ್ಯಗಳು ಈ ಭಾಗದಲ್ಲಿ ಕಾಣಸಿಗುತ್ತವೆ. ಉದಾಹರಣೆಗೆ ಬೆಂಗಾಲ್ ಟೈಗರ್, ಕಾಳಿಂಗ ಸರ್ಪ, ಕಾಡುಪಾಪ, ಸಿಂಹ ಬಾಲದ ಕೋತಿಗಳು ಮುಂತಾದ ಅಪರೂಪದ ಜೀವಿಗಳನ್ನು ತನ್ನ ತೆಕ್ಕೆಯೊಳಗೆ ಅವಿತಿಟ್ಟುಕೊಂಡಿದೆ. ಅಂತಹ ಜೀವಿಗಳಲ್ಲಿ ಕೆಲವು ಮಾನವನ ಕಣ್ಣಿಗೆ ಬಿದ್ದು, ಅವನ ದುರಾಸೆಯಿಂದ ಈಗಾಗಲೇ ಅಳಿವಿನಂಚಿನಲ್ಲಿವೆ. ಅಂತಹ ವೈವಿಧ್ಯ ಜೀವಿಯಲ್ಲಿ ಒಂದು, ಆಕರ್ಷಕ ಮೈಬಣ್ಣದ ಮಲಬಾರ್ ದೈತ್ಯ ಅಳಿಲು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಅಳಿವಿನ ಅಂಚಿನಲ್ಲಿರುವ ಇಂಡಿಯನ್ ಗೈಂಟ್ ಸ್ಕ್ವೀರಲ್ ಎಂದು ಕರೆಸಿಕೊಳ್ಳುವ ಈ ಮಲಬಾರ್ ದೈತ್ಯ ಅಳಿಲನ್ನು ಕನ್ನಡಿಗರು ಕೆಂಪು ಅಳಿಲು, ಕೆಂಜಳಿಲು, ಕೆಂದಳಿಲು ಹಾಗೂ ನೀಳ ಬಾಲದ ಬಣ್ಣದ ಅಳಿಲು ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಗಂಡು ಅಳಿಲನ್ನು ಬಕ್ ಎಂದು, ಹೆಣ್ಣು ಅಳಿಲನ್ನು ಡೋ ಎಂದು ಗುರುತಿಸುತ್ತಾರೆ. ಇದರ ಮರಿಗಳನ್ನು ಪಪ್, ಕಿಟ್, ಕಿಟನ್ ಎಂದು ಕರೆಯುತ್ತಾರೆ. ಪರಿಸರ ಮತ್ತು ಪ್ರದೇಶಕ್ಕೆ ಅನುಗುಣವಾಗಿ ಇವುಗಳ ಬಣ್ಣದಲ್ಲಿ ವ್ಯತ್ಯಾಸವಿದೆ. ಕೆಲವು ಪ್ರದೇಶಗಳಲ್ಲಿ ಅತಿ ಕೆಂಪು ಮತ್ತು ಕಂದು ಬಣ್ಣದ ಅಳಿಲು ಕಂಡುಬಂದರೆ, ಒಣ ಹವೆ ಇರುವಂತಹ ಅರಣ್ಯಗಳಲ್ಲಿ ತಿಳಿಗೆಂಪು ಹಾಗೂ ಕಂದು ಬಿಳುಪಿನ ಬಣ್ಣದ ಅಳಿಲುಗಳಿವೆ.
ತನ್ನ ವಿಶಿಷ್ಟ ಬಣ್ಣ, ಗಾತ್ರ ಹಾಗೂ ಚಟುವಟಿಕೆಗಳಿಂದ ಕೂಡಿದ ಈ ವಿಶೇಷ ಅಳಿಲು ದಕ್ಷಿಣ ಏಷ್ಯಾದಲ್ಲಿ ಮಾತ್ರ ಕಾಣಸಿಗುವಂತದ್ದು. ದಟ್ಟ ಮರಗಳಿಂದ ಕೂಡಿದ ಅತೀ ಎತ್ತರದ ಮರಗಳಿರುವ ಕಾಡು ಪ್ರದೇಶ ಇದರ ನೆಚ್ಚಿನ ವಾಸಸ್ಥಾನ. ಭಾರತದಲ್ಲಿ ಮಧ್ಯಪ್ರದೇಶ, ಮಹರಾಷ್ಟ್ರದಲ್ಲಿ ಹರಡಿರುವ ಸತ್ಪುರ ಪರ್ವತ ಕಾಡುಗಳಲ್ಲಿ, ತಮಿಳುನಾಡಿನ ಮಧುಮಲೈ ಅರಣ್ಯ, ಆಂಧ್ರಪ್ರದೇಶದ ತಿರುಪತಿ ಪರ್ವತ ಭಾಗದಲ್ಲಿ ಇವುಗಳ ಸಂತತಿ ಹೆಚ್ಚಾಗಿದೆ. ಕರ್ನಾಟಕದಲ್ಲಿ ಬಿಳಿಗಿರಿ ರಂಗನಬೆಟ್ಟ, ಮುತ್ತೋಡಿ ಅರಣ್ಯ ಪ್ರದೇಶ, ಬಿಸಿಲೆ ಅರಣ್ಯ ಭಾಗ, ಲಿಂಗನಮಕ್ಕಿ ಹಿನ್ನೀರಿನ ಅರಣ್ಯ ಪ್ರದೇಶ, ಭದ್ರಾ ಅಭಯಾರಣ್ಯ, ನಾಗರಹೊಳೆ ಹಾಗೂ ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಕಾಡುಗಳಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ.
ಕಂದು. ಕೆಂಪು, ಕಪ್ಪು ಬಣ್ಣಗಳಿಂದ ಕೂಡಿದ, ಮಿನುಗು ಕಣ್ಣುಗಳು, ನುಣುಪು ತುಪ್ಪಳದ, ತನ್ನ ದೇಹಕ್ಕಿಂತ ಎರಡು ಪಟ್ಟು ಉದ್ದನೆಯ ಬಾಲವುಳ್ಳ ಈ ಅಳಿಲು ನೋಡಲು ಬಹಳ ಆಕರ್ಷಣೀಯವಾಗಿರುತ್ತದೆ. ಇವುಗಳ ಎದೆ, ಹೊಟ್ಟೆಯ ಭಾಗ, ಮುಂಗಾಲುಗಳು ಮತ್ತು ಹಿಂಗಾಲುಗಳ ಒಳಭಾಗ ತಿಳಿ ಕಂದು ಬಣ್ಣದಲ್ಲಿದ್ದರೆ, ಮೂತಿ ಗಾಢ ಕಂದು ಬಣ್ಣದಲ್ಲಿರುತ್ತದೆ. ಮೂತಿಯ ಮೇಲೆ ಅಲ್ಲಲ್ಲಿ ಕೆಂಪು ಮತ್ತು ಕಂದು ಬಣ್ಣದ ಕೂದಲು ಬೆಳೆದಿರುತ್ತವೆ. ಮುಂಗಾಲುಗಳ ಮೇಲ್ಭಾಗ ಹಾಗೂ ಬೆನ್ನು ಕಪ್ಪು ಬಣ್ಣದಲ್ಲಿದ್ದರೆ, ಸೊಂಟ ಮತ್ತು ಬೆನ್ನಿನ ಮಧ್ಯಭಾಗ ಕೆಂಪು ಬಣ್ಣದಲ್ಲಿರುತ್ತದೆ. ಬೆನ್ನಿನ ಕೆಳಭಾಗ, ಹಿಂಗಾಲುಗಳು ಮತ್ತು ಬಾಲದ ಆರಂಭ ಕಪ್ಪು ಬಣ್ಣದಲ್ಲಿರುತ್ತದೆ. ಬಾಲದ ತುದಿ ಭಾಗ ಕಂದು ಬಣ್ಣದಲ್ಲಿರುತ್ತದೆ. ಕಾಲುಗಳಲ್ಲಿ ನಾಲ್ಕು ಪುಟ್ಟ ಬೆರಳುಗಳಿದ್ದು, ನೀಳವಾದ ಉಗುರುಗಳು ಕಪ್ಪು ಬಣ್ಣದಲ್ಲಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ತಲೆ ಮತ್ತು ಶರೀರ 35ರಿಂದ 45 ಸೆಂಟೀ ಮೀಟರ್ ಇದ್ದರೆ, ಬಾಲ ಮಾತ್ರ 2 ಅಡಿಯಷ್ಟು ಉದ್ದವಿರುತ್ತದೆ. ಸುಮಾರು 3-4 ಕೆಜಿ ತೂಕವಿರುವ ಈ ಮಲಬಾರ್ ಅಳಿಲುಗಳಿಗೆ ಹಿಂಭಾಗದಲ್ಲಿರುವ ಕಾಲುಗಳು ಮುಂಭಾಗದಲ್ಲಿರುವ ಕಾಲುಗಳಿಗಿಂತ ಉದ್ದವಾಗಿರುತ್ತವೆ.
ಕೆಂದಳಿಲುಗಳ ಕೂಗು ಕಾಡನ್ನು ನಡುಗಿಸುವಂತೆ ಇರುತ್ತದೆ. ಸದಾ ಒಂಟಿಯಾಗಿರಲು ಇಷ್ಟ ಪಡುವ ಈ ಅಳಿಲು ಅಪರೂಪಕ್ಕೊಮ್ಮೆ ಅಥವಾ ಸಂತಾನೊತ್ಪತ್ತಿಯ ಸಮಯದಲ್ಲಿ ಮಾತ್ರ ಸಂಗಾತಿಯೊಂದಿಗೆ ಸುತ್ತುತದೆ. ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿರುತ್ತದೆ. ತಾಪಮಾನ ಹೆಚ್ಚಾದ ಅವಧಿಯಲ್ಲಿ ಸುರಕ್ಷಿತ ಪ್ರದೇಶದಲ್ಲಿ ವಿರಮಿಸುತ್ತದೆ. ಚುರುಕು ಬುದ್ದಿಯ ಪ್ರಾಣಿಯಾಗಿದ್ದು, ಆಹಾರಕ್ಕಾಗಿ ಇತರೆ ಸಸ್ಯಹಾರಿ ಪ್ರಾಣಿಗಳೊಂದಿಗೆ ಜಗಳ ಕೂಡ ಆಡುತ್ತದೆ. ಸದಾ ಮರದ ರೆಂಬೆಗಳ ಮೇಲೆ ಅಲೆಯುತ್ತಿರುತ್ತದೆ. ನೀರು ಕುಡಿಯಬೇಕು ಅನಿಸಿದಾಗ ಮಾತ್ರ ನೆಲದೆ ಮೇಲೆ ಸಂಚರಿಸುತ್ತದೆ. ವಿಶಿಷ್ಟ ಶಬ್ಧಗಳು ಹಾಗೂ ದೇಹದ ಭಂಗಿಗಳ ಮೂಲಕ ಸಂಗಾತಿಯೊಂದಿಗೆ ಸಂವಹನ ನಡೆಸುತ್ತದೆ. ಪರಭಕ್ಷ ಪ್ರಾಣಿಗಳು ಎದುರಾದಾಗ ಮಾತ್ರ ಒಂದಿಂಚೂ ಅಲುಗಾಡದಂತೆ ಸ್ತಬ್ಧವಾಗುತ್ತದೆ. ನೆಲದ ಮೆಲೆ ಸಂಚರಿಸುವಾಗ ಅಪಾಯ ಎದುರಾದರೆ. ಕ್ಷಣಾರ್ಧದಲ್ಲಿ ಮರ ಏರಿ ತಪ್ಪಿಸಿಕೊಳ್ಳುವ ಈ ಪ್ರಾಣಿ, ಮರದ ಮೆಲೆ ಅಪಾಯ ಎದುರಾದರೆ ಮರದ ಕಾಂಡವನ್ನು ಬಿಡಿಸಲಾಗದಂತೆ ಗಟ್ಟಿಯಾಗಿ ಬಿಗಿದಪ್ಪಿಕೊಳ್ಳುತ್ತದೆ. ಕೆಲವೊಮ್ಮೆ ಅಂಕು ಡೊಂಕಾಗಿ ಓಡುತ್ತಾ ಇತರ ಪ್ರಾಣಿಗಳಲ್ಲಿ ಗೊಂದಲ ಸೃಷ್ಟಿಸುತ್ತದೆ. ತೆಂಗು ಕಾಯಿಯಾಗುವುದಕ್ಕೆ ಬಿಡದೆ ಕೃಷಿಕರಿಗೆ ಕಾಟಕೊಡುವ ಈ ಅಳಿಲುಗಳಿಗೆ ಶಿವಮೊಗ್ಗ ಭಾಗದಲ್ಲಿ ಕ್ಯಾಸಾಳ ಎನ್ನುತ್ತಾರೆ.
ಕಾಡಿನ ಮರಗಳ ಹಣ್ಣುಗಳು, ಎಲೆಗಳು, ಎಲೆಗಳ ಚಿಗುರು, ಮೊಗ್ಗು, ಹೂವು ಹಾಗೂ ನಾಯಿಕೊಡೆಗಳೇ ಇವುಗಳ ಪ್ರಮುಖ ಆಹಾರ. ಆದರೂ ಮರದ ಹಣ್ಣುಗಳನ್ನು ಅತಿಯಾಗಿ ತಿನ್ನುತ್ತವೆ. ಕೆಲವೊಮ್ಮೆ ಪಕ್ಷಿಗಳ ಮೊಟ್ಟೆಗಳನ್ನು, ಕೀಟಗಳನ್ನು ಸಹ ತಿನ್ನುತ್ತವೆ.
ಕೆಂದಳಿಲು ಎತ್ತರವಾದ ಮರಗಳ ಮೇಲೆ ಕವಲುಗಳ ನಡುವೆ ಪೊಟರೆ ಮಾಡಿಕೊಂಡು ಮರಿ ಹಾಕುತ್ತದೆ. ಕೆಲವೊಮ್ಮೆ ಮರದ ಕೊಂಬೆಗಳಲ್ಲಿ ಮರದ ಎಲೆಗಳು ಹಾಗೂ ತೊಗಟೆಗಳನ್ನು ಬಳಸಿ ಗೂಡು ಕಟ್ಟುತ್ತದೆ. ಈ ಅಳಿಲು 3-6 ತಿಂಗಳವರೆಗೆ ವರ್ಷಕ್ಕೆ ಎರಡು-ಮೂರು ಬಾರಿ ಮಾರ್ಚ್, ಏಪ್ರಿಲ್, ಸೆಪ್ಟೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಸಾಮಾನ್ಯವಾಗಿ ಒಂಟಿಯಾಗಿ ಅಲೆಯುವ ಈ ಅಳಿಲು ಒಂದಕ್ಕಿಂತ ಹೆಚ್ಚು ಗೂಡುಗಳನ್ನು ಕಟ್ಟುತ್ತದೆ. ಒಂದು ಗೂಡಿನಲ್ಲಿ ತನ್ನ ಮರಿಗಳ ಆರೈಕೆ ಮಾಡಿದರೆ, ಉಳಿದ ಗೂಡುಗಳಲ್ಲಿ ನಿದ್ರಿಸುತ್ತದೆ. ಪ್ರತಿ ಬಾರಿ ಗೂಡು ಕಟ್ಟುವಾಗಲೂ ಕಿಲೋಮೀಟರ್ ಗಟ್ಟಲೆ ಅಂತರ ಕಾಯ್ದುಕೊಳ್ಳುತ್ತದೆ. ಇವುಗಳು ಗುಂಪಾಗಿ ಕಾಣೀಸಿಕೊಳ್ಳುವುದು ಬಹಳ ವಿರಳ.
ಒಂದು ಮರದಿಂದ ಮತ್ತೊಂದು ಮರಕ್ಕೆ ಸುಮಾರು 20 ಅಡಿಗಳಷ್ಟು ದೂರದವರೆಗೆ ಜಿಗಿಯುವ ಸಾಮರ್ಥ್ಯವಿರುವ ವಿಶೇಷವಾದ ಅಳಿಲಿದು. ಮರದಿಂದ ಮರಕ್ಕೆ ವೇಗವಾಗಿ ಸಂಚರಿಸುವಾಗ ದೇಹದ ಸಮತೋಲನ ಕಾಪಾಡಿಕೊಳ್ಳಲು ತನ್ನ ನೀಳ ಬಾಲವನ್ನು ನೇರ ಮಾಡಿಕೊಳ್ಳುತ್ತದೆ. ಇದರ ಗೂಡು ಹದ್ದಿನ ಗೂಡಿನಷ್ಟೇ ವಿಶಾಲವಾಗಿರುತ್ತದೆ. ದೇಹದ ಗ್ರಂಥಿಗಳಿಂದ ಕೆಲವು ಬಗೆಯ ರಾಸಾಯನಿಕಗಳನ್ನು ಸ್ರವಿಸಿ ಪ್ರತಿ ಅಳಿಲು ತನ್ನ ಗಡಿ ಗುರುತಿಸಿಕೊಳ್ಳುತ್ತದೆ. ನೋಡಲು ಬಹಳ ಮುದ್ದಾದ ಇವುಗಳನ್ನು ಮನುಷ್ಯರು ಪಳಗಿಸಿ ಗಿಳಿ, ಬೆಕ್ಕು, ನಾಯಿಗಳಂತೆ ಮನೆಯೊಳಗೆ ಸಾಕುತ್ತಾರೆ. ಹೆಚ್ಚಾಗಿ ಸೋಲಿಗರ ಮನೆಗಳಲ್ಲಿ ಈಗಲೂ ಇವುಗಳನ್ನು ಸಾಕುವುದನ್ನು ಕಾಣಬಹುದು.
ಕೇಂದ್ರ ಸರ್ಕಾರವು ಕೆಂದಳಿಲನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಗೆ ಸೇರಿಸಿದೆ. ಅರಣ್ಯ ಇಲಾಖೆ ಕೂಡ ಈ ಅಳಿಲುಗಳ ಬೇಟೆಯನ್ನು ನಿಷೇಧಿಸಿದೆ. ಇಂತಹ ಬೇಟೆಗಳನ್ನು ಕೈಗೊಂಡವರಿಗೆ ಕಠಿಣ ಶಿಕ್ಷೆಯೂ ಇದೆ. ಆದರೂ ಕಾಡಿನ ಮೇಲೆ ಮನುಷ್ಯನ ಅತಿಯಾದ ಹಸ್ತಕ್ಷೇಪ, ಸ್ಥಳೀಯರ ಬಾಯಿ ಚಪಲ, ಬೇಟೆಗಾರರ ದುರಾಸೆ ಮತ್ತು ಶ್ರಿಮಂತರಿಗಾಗಿ ವಿಲಾಸೀ ಚರ್ಮ ಉತ್ಪನ್ನಗಳ ತಯಾರಿಕೆಯಲ್ಲಿ ಈ ಅಳಿಲುಗಳು ಬಲಿಯಾಗುತ್ತಿವೆ. ಸುಮಾರು ನಾಲ್ಕರಿಂದ ಐದು ಕೆಜಿ ತೂಗುವ ಇವುಗಳನ್ನು ಮಲೆನಾಡಿಗರು ಮತ್ತು ಗಿರಿಜನರು ತಿನ್ನುತ್ತಾರೆ. ರಾತ್ರಿಯ ವೇಳೆ ಮರದ ಟೊಂಗೆಗಳನ್ನು ಬಿಗಿದಪ್ಪಿ ಮಲಗುವ ಇವುಗಳ ಕಣ್ಣಿಗೆ ಬ್ಯಾಟರಿ ಬೆಳಕನ್ನು ಹಾಯಿಸಿ ಇವುಗಳು ಕದಲದಂತೆ ಮಾಡಿ ಬೇಟೆ ಆಡುತ್ತಾರೆ.
ಶಿವಮೊಗ್ಗ ಜಿಲ್ಲೆಯ ಹಲವು ಭಾಗಗಳಲ್ಲಿಯೂ ಕಂಡುಬರುವ ಅತೀ ಮುದ್ದಾದ ಹಾಗೂ ವಿಶಿಷ್ಟವಾದ ಈ ಅಳಿಲುಗಳು ಈಗಾಗಲೇ ಅಳಿವಿನಂಚಿನಲ್ಲಿದ್ದು ಬೆರಳೆಣಿಕೆಯಷ್ಟು ಮಾತ್ರ ನೋಡಲು ಸಿಗುತ್ತಿವೆ. ಮನುಷ್ಯನ ದುರಾಸೆ ಮುಂದೆಯೂ ಹೀಗೆಯೇ ಮಿತಿಮೀರಿದರೆ ಕೇವಲ ಕೆಂದಳಿಲು ಮಾತ್ರವಲ್ಲದೇ ಇಂತಹ ಸಾಕಷ್ಟು ವಿಶಿಷ್ಟ, ವಿಭಿನ್ನ ಪ್ರಾಣಿಗಳನ್ನು ಕೇವಲ ಫೋಟೋಗಳಲ್ಲಿ ನೋಡುವ ಸಮಯ ಶೀಘ್ರವೇ ಬರಬಹುದು…
ಅಮೃತ ಚಂದ್ರಶೇಖರ್, ವತ್ಸಲಾ ಲೋಕೇಶ್
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post