ಕಲ್ಪ ಮೀಡಿಯಾ ಹೌಸ್
14 ವರ್ಷಕ್ಕೆ ಮದುವೆಯಾಗಿ, 18 ವರ್ಷಕ್ಕೆ ಎರಡು ಮಕ್ಕಳ ತಾಯಿಯಾಗಿ, ನಂತರ ಹಠದಿಂದ IPS ಅಧಿಕಾರಿಯಾದ ಮಹಾನ್ ಸಾಧಕಿಯೊಬ್ಬಳ ಯಶೋಗಾಥೆಯಿದು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಹೆಸರು ‘ಎನ್ ಅಂಬಿಕಾ’. ಹತ್ತನೇ ತರಗತಿ ಕೂಡಾ ಪಾಸಾಗದ ಆಕೆಯನ್ನು ಬಡತನದ ಕಾರಣದಿಂದ 14 ವಯಸ್ಸಿಗೆ ತಮಿಳುನಾಡಿನ ದಿಂಡಿಗಲ್ ನಲ್ಲಿ ಕಾನ್ಸ್ಟೇಬಲ್ ಒಬ್ಬರಿಗೆ ಮದುವೆ ಮಾಡಿಕೊಡಲಾಗಿತ್ತು. ಹದಿನೆಂಟು ತುಂಬುವುದರೊಳಗೆ ಐಗನ್ ಮತ್ತು ನಿಹಾರಿಕಾ ಎಂಬ ಎರಡು ಮಕ್ಕಳ ತಾಯಿಯಾಗಿದ್ದಳಾಕೆ.
ಒಮ್ಮೆ ಗಣರಾಜ್ಯೋತ್ಸವ ಪರೇಡನಲ್ಲಿ ಗಂಡನೊಂದಿಗೆ ತಾನೂ ಭಾಗವಹಿಸಿದ್ದಳು. ಅದು ಆಕೆಯ ಜೀವನಕ್ಕೆ ತಿರುವು ನೀಡಿದ ಮಹತ್ವದ ಘಟನೆಯಾಗಿ ಹೋಯಿತು. ಅಲ್ಲಿ ಗಂಡ ಭಾಗವಹಿಸಿದ್ದ ಪ್ರತಿಯೊಬ್ಬ ಹಿರಿಯ ಅಧಿಕಾರಿಗೂ ಸೆಲ್ಯೂಟ್ ಮಾಡುತ್ತಿದ್ದ. ಅದು ಆಕೆಯಲ್ಲಿ ಒಂದು ದೊಡ್ಡ ಸಂಗ್ರಾಮವನ್ನೆ ಹುಟ್ಟು ಹಾಕಿತು.
ಬಂದ ಮೇಲೆ ಗಂಡನನ್ನು ಕೇಳಿ ವಿಷದವಾಗಿ ಎಲ್ಲವನ್ನೂ ತಿಳಿದುಕೊಂಡಳು. ಅವರು IPS ಪಾಸು ಮಾಡಿದ ದೊಡ್ಡ ಅಧಿಕಾರಿಗಳೆಂದೂ, ಉಳಿದವರೂ ತನ್ನ ಮೇಲಾಧಿಕಾರಿಗಳೆಂದೂ, ಉನ್ನತ ಶಿಕ್ಷಣ ಪಡೆದು, ಪರೀಕ್ಷೆಗಳನ್ನು ಬರೆದು ಪಾಸಾದವರೆಂದೂ ಅವರಿಗೆ ಗೌರವ ಪೂರ್ವಕವಾಗಿ ಸೆಲ್ಯೂಟ್ ಮಾಡುವುದು ತನ್ನ ಕರ್ತವ್ಯವೆಂದೂ ತಿಳಿಸಿದ. ಆ ಕ್ಷಣವೇ ಆಕೆಯಲ್ಲೊಂದು ಆಸೆ ಹುಟ್ಟಿತು, ಬೆಳೆಯಿತು, ಹಠವಾಗಿ ಪರಿಣಮಿಸಿತು. ನೆನಪಿಡಿ ಆಗ ಆಕೆ ಹತ್ತನೆ ತರಗತಿ ಕೂಡಾ ಪಾಸಾಗಿರಲಿಲ್ಲ.
ತಾನೂ ಪೋಲಿಸ್ ಉನ್ನತಾಧಿಕಾರಿಯಾಗಬೇಕೆಂಬ ಮನದಿಂಗಿತವನ್ನು ತನ್ನ ಗಂಡನೊಂದಿಗೆ ಹೇಳಿಕೊಂಡಳು, ಸಾದ್ಯತೆಗಳನ್ನೆಲ್ಲ ಪರಿಶೀಲಿಸಿ ಆತ ಒಪ್ಪಿಗೆ ನೀಡಿದ. ಮೊದಲು ಖಾಸಗಿಯಾಗಿ ತರಬೇತಿ ಪಡೆದು ಹತ್ತನೇ ತರಗತಿ ಪರೀಕ್ಷೆಗೆ ಸಿದ್ಧಗೊಂಡಳು. ಅದು ಆಕೆಯ ಜೀವನದ ಕನಸು, ಹಠವಾದ್ದರಿಂದ ಓದಿ ಉನ್ನತ ಶ್ರೇಣಿಯಲ್ಲಿ ಪಾಸಾದಳು. ಪಟ್ಟು ಬಿಡದೇ ದೂರ ಶಿಕ್ಷಣದಿಂದ ಪದವಿಯನ್ನೂ ಪಡೆದಳು.
ಮುಂದೆ? UPSC ತರಬೇತಿಯೆಂದರೆ ಸಾಮಾನ್ಯವೆ? ಅದಾಗಲೆ ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಾರೆ. ಆದರೆ ಗಂಡ ತನ್ನ ಕೆಲಸದ ಜೊತೆ ಮನೆ, ಮಕ್ಕಳ ಜವಾಬ್ದಾರಿ ಹೊತ್ತು ಆಕೆಯ ಕನಸಿಗೆ ಬೆಂಗಾವಲಾಗಿ ನಿಂತ. ತರಬೇತಿಗಾಗಿ ಚೆನ್ನೈ ನಲ್ಲಿ ಆಕೆಗೆ ಬೇಕಾದ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟ.
ದೂರಶಿಕ್ಷಣದಲ್ಲಿಯೇ ವಿದ್ಯಾಬ್ಯಾಸ ಮುಗಿಸಿದ್ದ ಆಕೆಗೆ UPSC ಯ ಪರೀಕ್ಷೆ ಕಠಿಣವಾಯಿತು. ಮೂರು ಬಾರಿ ಪರೀಕ್ಷೆ ಕಟ್ಟಿದಳು, ಯಶಸ್ಸು ಸಿಗಲಿಲ್ಲ. ಗಂಡ, ಮಕ್ಕಳಿಂದ ದೂರವಿದ್ದು ಪಟ್ಟ ಶ್ರಮ ವ್ಯರ್ಥವಾದದ್ದಕ್ಕೆ ತುಂಬ ಬೇಸರವೂ ಆಯಿತು. ಗಂಡ ಇನ್ನು ಸಾಕು ಮನೆಗೆ ಬಂದು ಬಿಡು ಎಂದ. ಇನ್ನೊಂದು ಬಾರಿ ಪ್ರಯತ್ನಿಸಿ ಬಿಡೋಣ ಸಾದ್ಯವಾಗದಿದ್ದರೆ ಯಾವುದಾದರೂ ಶಾಲೆಯಲ್ಲಿ ಟೀಚರ್ ಆಗಿಬಿಡುವುದೆಂದೂ ನಿರ್ಧರಿಸಿದ್ದಳು.
ಆದರೆ ಕೊನೆಗೂ ಆ ದೇವರು ತಪಸ್ಸಿನಂತಹ ಆಕೆಯ ಶ್ರಮ ಮತ್ತು ಹಠಕ್ಕೆ ವರ ನೀಡಿಯೇ ಬಿಟ್ಟ. ನಾಲ್ಕನೆಯ ಪ್ರಯತ್ನದಲ್ಲಿ ಪ್ರಿಲಿಮ್ಸ್, ಮೇನ್ಸ್, ಇಂಟರ್ವ್ಯೂ ನಲ್ಲೂ ಆಕೆ ಪಾಸಾದಳು. “ಎನ್ ಅಂಬಿಕಾ IPS” ಆದಳು.
ಅಂಬಿಕಾ ಈಗ ಮುಂಬಯಿ ನಾರ್ಥ 4 ಜೋನ್ ನಲ್ಲಿ ಡಿಸಿಪಿ. ಹಲವಾರು ಕ್ಲಿಷ್ಟ ಕೇಸುಗಳನ್ನು ಸುಲಭವಾಗಿ ಪರಿಹರಿಸಿದ್ದರಿಂದ ಆಕೆಗೆ 2019 ರಲ್ಲಿ ‘ಲೋಕಮತ್’ (ಲೋಕಮತ್ ಮಹಾರಾಷ್ಟ್ರೀಯನ್ ಆಫ್ ದಿ ಇಯರ್) ಗೌರವ ನೀಡಲಾಯಿತು. ಈಗಾಕೆ ಲೇಡಿ ಸಿಂಗಮ್ ಎಂದು ಡಿಪಾರ್ಟ್ಮೆಂಟ್ ನಲ್ಲಿ ಖ್ಯಾತಳಾಗಿದ್ದಾಳೆ.
ನೆನಪಿನಲ್ಲಿರಲಿ,
ಯಶಸ್ಸು ಸಾಧಕರ ಸ್ವತ್ತೆ ಹೊರತು,
ಹೇಡಿಗಳು, ಸೋಮಾರಿಗಳದಲ್ಲ.
-ಅಮರೇಶ ದೇಸಾಯಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post