ಕೊಪ್ಪ: ತಮ್ಮ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳು ಹಾಗೂ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮೂವರು ಸೋಲುವ ಭೀತಿಯಿಂದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬಸ್ಥರು ಮಲೆನಾಡಿನ ಸಣ್ಣದೇಗುಲವೊಂದರಲ್ಲಿ ರಹಸ್ಯ ಯಾಗ ನಡೆಸಿದ್ದಾರೆ.
ಹೌದು.. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡಿನಲ್ಲಿ ದೇಗುಲದಲ್ಲಿ ಎಚ್.ಡಿ. ದೇವೇಗೌಡ ಕುಟುಂಬಸ್ಥರು ಬೀಡುಬಿಟ್ಟಿದ್ದು, ಮೂರು ದಿನಗಳ ಕಾಲ ವಿಶೇಷ ಹೋಮ, ಹವನವನ್ನು ನಡೆಸಿದ್ದಾರೆ.
ಮಲೆನಾಡಿನ ದುರ್ಗಮ ಕಾಡಿನ ನಡುವೆಯಿರುವ ಸಣ್ಣ ಹಳ್ಳಿ ಕುಡಿನಲ್ಲಿಯಲ್ಲಿರುವ ಶ್ರೀ ಉಮಾಮಹೇಶ್ವರಿ ದೇವಾಲಯದಲ್ಲಿ ಸಿಎಂ ಕುಟುಂಬ ವಿಶೇಷ ಪೂಜೆ, ಹೋಮ ನಡೆಸುತ್ತಿದೆ. ಈ ದೇಗುಲಕ್ಕೆ ನಿನ್ನೆಯೇ ಆಗಮಿಸಿರುವ ಸಿಎಂ ಕುಟುಂಬಸ್ಥರು ಮಹಾರುದ್ರ ಯಾಗ, ಗಣಪತಿ ಯಾಗದ ಸಂಕಲ್ಪ ಮಾಡಿದ್ದಾರೆ ಎಂದು ಹೇಳಲಾಗಿದ್ದು, ಇದರೊಂದಿಗೆ ಇನ್ನೂ ಹಲವು ವಿಶೇಷ ಹೋಮಗಳು ನಡೆಯುತ್ತಿವೆ ಎನ್ನಲಾಗಿದೆ. ಮೇ 4ರ ಇಂದು ರಾತ್ರಿಯವರೆಗೂ ಇದು ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ಉಮಾ ಮಹೇಶ್ವರಿ ದೇಗುಲದಲ್ಲಿ ಸಿಎಂ ಮತ್ತು ಕುಟುಂಬ ಸದಸ್ಯರ, ತಮ್ಮ ಕುಟುಂಬಕ್ಕೆ ಅಂಟಿದ ಕಂಟಕ ಹಾಗೂ ಶತ್ರು ನಿವಾರಣೆ, ಯಶಸ್ಸಿಗಾಗಿ ವಿಶೇಷ ಪೂಜೆ ಹಾಗೂ ಹೋಮಗಳನ್ನು ರಹಸ್ಯವಾಗಿ ಮಾಡುತ್ತಿದ್ದು, ಇದು ತೀರಾ ಖಾಸಗಿ ವ್ಯಕ್ತಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ ಎನ್ನಲಾಗಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಫಲಿತಾಂಶಕ್ಕಾಗಿ ಹವನ:
ದೇವೇಗೌಡ ದಂಪತಿಗಳ ಆರೋಗ್ಯದ ದೃಷ್ಠಿಯಿಂದ ಹೋಮ ಹವನ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದರೂ, ಲೋಕಸಭಾ ಚುಣಾವಣೆಯಲ್ಲಿ ಕುಟುಂಬದ ದೇವೇಗೌಡ, ಪ್ರಜ್ವಲ್ ಹಾಗೂ ನಿಖಿಲ್ ಸ್ಪರ್ಧೆ ಮಾಡಿರುವುದರಿಂದ ಅವರ ಗೆಲುವಿಗೆ ಯಾವುದೇ ತೊಂದರೆಯಾಗದಿರಲಿ ಹಾಗೂ ರಾಜ್ಯ ಸರ್ಕಾರಕ್ಕೆ ಯಾವುದೇ ಕಂಟಕ ಬಾರದಿರಲಿ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಸಿಎಂ ಕುಟುಂಬ ನಡೆಸುತ್ತಿರುವ ಈ ಹೋಮ-ಹವನದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಅವರ ಪತ್ನಿ ಚನ್ನಮ್ಮ, ಸಿಎಂ ಕುಮಾರಸ್ವಾಮಿ, ಸಚಿವ ರೇವಣ್ಣ ಹಾಗೂ ಕುಟುಂಬಸ್ಥರಲ್ಲದೇ, ಈ ಕುಟುಂಬದ ಆಪ್ತರಾದ ಭೋಜೇಗೌಡ, ಶಿವರಾಮೇಗೌಡ ಇದ್ದಾರೆ.
ಸಾರ್ವಜನಿಕರಿಗೂ-ಮಾಧ್ಯಮದವರಿಗೂ ಪ್ರವೇಶವಿಲ್ಲ:
ಸಿಎಂ ಕುಟುಂಬ ನಡೆಸುತ್ತಿರುವ ಈ ರಹಸ್ಯ ಯಾಗದ ಹಿನ್ನೆಲೆಯಲ್ಲಿ ಉಮಾಮಹೇಶ್ವರಿ ದೇವಾಲಯಕ್ಕೆ ಸಾರ್ವಜನಿಕರು ಹಾಗೂ ಮಾಧ್ಯಮದವರಿಗೂ ಸಹ ನಿರ್ಬಂಧ ಹೇರಲಾಗಿದೆ.
ಅಲ್ಲದೇ, ದೇವಾಲಯದ ಸುಮಾರು 1 ಕಿಮೀ ದೂರದಿಂದಲೇ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಎಲ್ಲಿದೆ ಈ ದೇಗುಲ?
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡಿನಲ್ಲಿ ಎಂಬ ಗ್ರಾಮ ತುಂಗಾ ನದಿಯ ತಟದಲ್ಲಿದೆ. ಇಲ್ಲಿ ಶ್ರೀ ಉಮಾ ಮಹೇಶ್ವರಿಯ ದೇಗುಲವಿದೆ. ಇದು ಸಣ್ಣ ದೇವಾಲಯವಾದರೂ ತಾಯಿ ಶಕ್ತಿ ಅಪಾರವಾಗಿದೆ. ಇಲ್ಲಿಗೆ ನಡೆದುಕೊಂಡ ಬಹಳಷ್ಟು ಮಂದಿಗೆ ಅನುಗ್ರಹವಾಗಿದ್ದು, ಶಕ್ತಿಶಾಲಿ ದೇಗುಲ ಎಂದು ಮಲೆನಾಡಿನಲ್ಲಿ ಪ್ರಸಿದ್ಧಿಯಾಗಿದೆ.
Discussion about this post