ಬೆಂಗಳೂರು: ವ್ಯಾಪಾರ, ವಹಿವಾಟು ವೃದ್ಧಿಸಿಕೊಳ್ಳಲು ರಾಜ್ಯದ 53 ಸಾವಿರ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಬಡವರ ಬಂಧು ಯೋಜನೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಚಾಲನೆ ನೀಡಿದ್ದಾರೆ.
ಬಡ ಜನತೆ ಸಾಲ ಸೌಲಭ್ಯಕ್ಕಾಗಿ ಲೇವಾದೇವಿಗಾರರ ಮೇಲೆ ಅವಲಂಭಿತರಾಗುವ ಹಾಗೂ ಅಧಿಕ ಬಡ್ಡಿ ವಿಧಿಸಿ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ಬಜೆಟ್ ನಲ್ಲಿ ಘೋಷಿಸಿದ್ದ ಈ ಕಾರ್ಯಕ್ರಮವನ್ನು ಇದೀಗ ಅನುಷ್ಠಾನಕ್ಕೆ ತರಲಾಗುತ್ತಿದೆ.
ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಸಮಾರಂಭಕ್ಕೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಚಾಲನೆ ನೀಡುತ್ತಿದ್ದು, ಸಣ್ಣಪುಟ್ಟ ವ್ಯಾಪಾರಿಗಳು ವ್ಯಾಪಾರ ಮಾಡುವ ಸಂಚಾರಿ ವಾಹನದ ಮೂಲಕ ಸಾಲ ಒದಗಿಸಲಾಗುತ್ತಿದೆ.
ರಾಜ್ಯದಲ್ಲಿ ಒಟ್ಟು 4.50 ಲಕ್ಷ ಬೀದಿ ಬದಿ ವ್ಯಾಪಾರಿಗಳಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ 80 ಸಾವಿರ ಮಂದಿ ಇದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಗುರುತಿನ ಚೀಟಿ ನೀಡಲಾಗುತ್ತಿದ್ದು, ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 1.80 ಲಕ್ಷ, ಬಿಬಿಎಂಪಿ ವ್ಯಾಪ್ತಿಯಲ್ಲಿ 24,650 ಮಂದಿ ಗುರುತಿನ ಚೀಟಿ ಪಡೆದುಕೊಂಡಿದ್ದಾರೆ.
ಈ ಯೋಜನೆಯಡಿ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಕಿರು ಸಾಲ ಸೌಲಭ್ಯ ಒದಗಿಸುವ ಬಡವರ ಬಂಧು ಯೋಜನೆಯನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್ ನಲ್ಲಿ ಘೋಷಿಸಿದ್ದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಸಾವಿರ, ಮಹಾನಗರ ಸಭೆಗಳ ವ್ಯಾಪ್ತಿಯಲ್ಲಿ 3 ಸಾವಿರ, ಜಿಲ್ಲಾ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ತಲಾ ಒಂದು ಸಾವಿರ ಫಲಾನುಭವಿಗಳಿಗೆ 2 ಸಾವಿರ ರೂ.ನಿಂದ 10 ಸಾವಿರ ರೂವರೆಗೆ ಸಾಲ ಒದಗಿಸಲು ಸರ್ಕಾರ ನಿರ್ಧರಿಸಿದೆ.
ರಸ್ತೆ ಬದಿಯಲ್ಲಿ ತಳ್ಳು ಬಂಡಿ ಅಥವಾ ಮೋಟಾರು ವಾಹನಗಳಲ್ಲಿ ಪಾನೀಯ, ತಿಂಡಿ, ಊಟ ಮತ್ತಿತರ ಹೋಟೆಲ್ ಸೇವೆ ಒದಗಿಸುವವರು, ಬೀದಿಗಳಲ್ಲಿ ಹಣ್ಣು, ತರಕಾರಿ, ಹೂವು, ಬುಟ್ಟಿ ಮತ್ತಿತರ ಪರಿಕರಗಳನ್ನು ಮಾರಾಟ ಮಾಡುವವರು ಸೇರುತ್ತಾರೆ. ಪಾದರಕ್ಷೆಗಳು, ಚರ್ಮ ಉತ್ಪನ್ನಗಳನ್ನು ರಿಪೇರಿ ಮಾಡುವ, ಮಾರಾಟ ಮಾಡುವ, ಆಟಿಕೆಗಳು, ಗೃಹೋಪಯೋಗಿ ಇತ್ಯಾದಿ ವ್ಯಾಪಾರದಲ್ಲಿ ತೊಡಗಿರುವವರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.
ರಸ್ತೆ ಬದಿಯಲ್ಲಿ ಸ್ವಚ್ಛತೆಯನ್ನು ಹಾಳು ಮಾಡುವ, ಪರಿಸರಕ್ಕೆ ಹಾನಿಯುಂಟು ಮಾಡುವ ವಸ್ತುಗಳನ್ನು ಮಾರಾಟ ಮಾಡುವವರಿಗೆ ಈ ಯೋಜನೆಯ ಸೌಲಭ್ಯ ದೊರೆಯುವುದಿಲ್ಲ. ಸಾಲ ಸೌಲಭ್ಯ ಪಡೆಯಲು ಬಿಪಿಎಲ್ ಕಾರ್ಡ್ ಹೊಂದಿರುವುದು ಕಡ್ಡಾಯವಾಗಿದೆ.
ಈ ಯೋಜನೆಯಡಿ ಸಹಕಾರಿ ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿನ ನಗರ ಪ್ರದೇಶಗಳಲ್ಲಿ ನಿಗದಿಪಡಿಸಿದ ಗುರಿಗೆ ತಕ್ಕಂತೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿ ಸಾಲ ವಿತರಿಸಲು ಕ್ರಮ ತೆಗೆದುಕೊಳ್ಳಲಿದೆ.
ಸಮಾರಂಭದಲ್ಲಿ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ, ಸಹಕಾರ ಬ್ಯಾಂಕಿನ ಮೂಲಕ ಮಾತ್ರ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಪ್ರತಿ ನಗರ ಪ್ರದೇಶಕ್ಕೆ ಇದಕ್ಕಾಗಿಯೇ ಪ್ರತ್ಯೇಕವಾಗಿ ಒಂದು ಸಹಕಾರ ಬ್ಯಾಂಕ್ ಮತ್ತು ಮೊಬೈಲ್ ಬ್ಯಾಂಕಿಂಗ್ ಘಟಕಕ್ಕಾಗಿ ಸ್ಥಳ ಗುರುತಿಸುವ ಜವಾಬ್ದಾರಿಯನ್ನು ಡಿಸಿಸಿ ಬ್ಯಾಂಕಿನ ಅಧ್ಯಕ್ಷರ ನೇತೃತ್ವದ ಸಮಿತಿಗೆ ವಹಿಸಲಾಗಿದೆ ಎಂದರು.
ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ತಾವು ವ್ಯಾಪಾರ ನಡೆಸುತ್ತಿರುವ ಸ್ಥಳದ ಫೋಟೋ, ಸ್ಥಳೀಯ ಸಂಸ್ಥೆಗಳ ಗುರುತಿನ ಚೀಟಿ ನೀಡಿ, ಶೂನ್ಯ ಬ್ಯಾಂಕ್ ಬ್ಯಾಲೆನ್ಸ್ ಉಳಿತಾಯ ಖಾತೆ ತೆರೆಯಬೇಕಾಗುತ್ತದೆ ಎಂದರು.
ಸಾಲದ ಮರು ಪಾವತಿಯ ಅವಧಿ ಮೂರು ತಿಂಗಳಾಗಿದ್ದು, ಅವಧಿಯೊಳಗೆ ಸಾಲ ಮರು ಪಾವತಿ ಮಾಡಿದರೆ ಮತ್ತೆ ಸಾಲ ದೊರೆಯಲಿದೆ. ಜತೆಗೆ ಶೇ. 10 ರಷ್ಟು ಹೆಚ್ಚು ಸಾಲ ಒದಗಿಸಿ ಸಾಲದ ಮೊತ್ತವನ್ನು 15 ಸಾವಿರಕ್ಕೆ ಹೆಚ್ಚಿಸಲು ಸಹ ಅವಕಾಶವಿದೆ ಎಂದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮೇಯರ್ ಗಂಗಾಂಬಿಕೆ ಮತ್ತಿತರರು ಉಪಸ್ಥಿತರಿದ್ದರು.
Discussion about this post