ಶಿಕಾರಿಪುರ: ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಸದೃಢ ಆರೋಗ್ಯದಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾದ್ಯವಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರೂ ದುಶ್ಚಟಗಳನ್ನು ತ್ಯಜಿಸಿ ಸಮಾಜದ ಜತೆಗೆ ಕುಟುಂಬದ ಆರೋಗ್ಯವನ್ನು ಕಾಪಾಡಬೇಕಾಗಿದೆ ಎಂದು ಮಾಜಿ ಶಾಸಕ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು.
ದಿಂಡದಹಳ್ಳಿ ಗ್ರಾಮದ ಹಿರೇಮಠದಲ್ಲಿ ನಡೆದ ಮದ್ಯವರ್ಜನ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಲಿಷ್ಠ ಸಮಾಜ ನಿರ್ಮಾಣಕ್ಕೆ ಮದ್ಯವ್ಯಸನ ಬಹು ದೊಡ್ಡ ಸಮಸ್ಯೆಯಾಗಿದ್ದು, ಮದ್ಯಪಾನದಿಂದ ಸಮಾಜ ಅಧೋಗತಿಯತ್ತ ಸಾಗುತ್ತಿದೆ ಎಂಬುದನ್ನು ಅರಿತು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮೂಲಕ ಸಂಪೂರ್ಣ ಮದ್ಯಪಾನ ಮತ್ತಿತರ ದುಶ್ಚಟಗಳನ್ನು ಹೋಗಲಾಡಿಸಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಕಲ್ಪವನ್ನು ಕೈಗೊಂಡಿದ್ದಾರೆ. ಮದ್ಯವರ್ಜನ ಶಿಬಿರದ ಮೂಲಕ ಸಹಸ್ರಾರು ಕುಟುಂಬದ ಕಣ್ಣೀರನ್ನು ತಡೆಗಟ್ಟಿದ ಹಿರಿಮೆಗೆ ಪಾತ್ರರಾಗಿದ್ದಾರೆ ಎಂದರು.
ಮದ್ಯವರ್ಜನ ಶಿಬಿರದ ಮೂಲಕ ವ್ಯಸನಿಗಳು ಕುಟುಂಬದ ಜತೆಗೆ ಸಮಾಜದ ಆರೋಗ್ಯವನ್ನು ಕಾಪಾಡಬೇಕಾಗಿದೆ. ಕಳೆದ ಕೆಲವು ವರ್ಷದಿಂದ ಯುವಪೀಳಿಗೆ ಮದ್ಯದ ದಾಸರಾಗಿ ದೇಶದ ಅಭಿವೃದ್ದಿಗೆ ಕಂಟಕಪ್ರಾಯರಾಗಿ ಹಲವು ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ. ಶಿಬಿರಾರ್ಥಿಗಳು ಸಂಪೂರ್ಣ ಮದ್ಯಪಾನ ಮತ್ತಿತರ ದುಶ್ಚಟಗಳಿಂದ ಹೊರಬಂದು ಸಮಾಜದಲ್ಲಿ ತಲೆ ಎತ್ತಿ ನಡೆದಾಡುವ ಪ್ರವೃತ್ತಿಯನ್ನು ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.
ಯೋಜನೆ ಸಮಾಜದ ಅಭಿವೃದ್ದಿಯಲ್ಲಿ ಬಹು ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿದ್ದು ಮಹಿಳಾ ಸಬಲೀಕರಣಕ್ಕಾಗಿ ಸ್ವಸಹಾಯ ಯೋಜನೆ ಮೂಲಕ ಹೊಸ ಕ್ರಾಂತಿಯನ್ನು ಹುಟ್ಟಿಹಾಕಿದೆ. ಶೀಘ್ರದಲ್ಲಿಯೇ ಪಟ್ಟಣಕ್ಕೆ ಸಮೀಪದಲ್ಲಿ ಶಾಹಿ ಗಾರ್ಮೆಂಟ್‌ಸ್ ಕಾರ್ಖಾನೆ ಆರಂಭವಾಗಲಿದ್ದು, 2 ರಿಂದ 3 ಸಾವಿರ ಮಹಿಳಾ ಉದ್ಯೋಗಿಗಳ ನೇಮಕಾತಿಗೆ ಟೈಲರಿಂಗ್ ತರಬೇತಿ ಅಗತ್ಯವಾಗಿದೆ. ಈ ದಿಸೆಯಲ್ಲಿ ಯೋಜನೆ ವತಿಯಿಂದ ತರಬೇತಿ, ಕೌಶಲ್ಯವನ್ನು ಪಡೆದಲ್ಲಿ ನೇಮಕಾತಿ ಸುಲಭವಾಗಲಿದೆ ಈ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಸಾನ್ನಿದ್ಯ ವಹಿಸಿದ್ದ ದಿಂಡದಹಳ್ಳಿ ಹಿರೇಮಠದ ಪಶುಪತಿ ಶಿವಾನಂದ ಶಿವಾಚಾರ್ಯರು ಆರ್ಶೀವಚನ ನೀಡಿ, ಮದ್ಯಪಾನಕ್ಕೆ ದಾಸರಾಗಿ ವ್ಯಕ್ತಿ ಸಮಾಜದಲ್ಲಿ ನಿಕೃಷ್ಟನಾಗಲಿದ್ದು ಅವಲಂಭಿಸಿದ ತಂದೆ, ತಾಯಿ, ಪತ್ನಿ, ಮಕ್ಕಳ ಸಹಿತ ಸಂಪೂರ್ಣ ಕುಟುಂಬದ ಮರ್ಯಾದೆ ಬೀದಿಪಾಲಾಗಲಿದೆ. ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಮದ್ಯದ ದಾಸರಾಗಿ ಸಮಾಜ ಅಧೋಪತನದತ್ತ ಸಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸಂಪೂರ್ಣ ಮದ್ಯಮುಕ್ತ ಸಮಾಜದಿಂದ ಮಾತ್ರ ಅಭಿವೃದ್ದಿ ಸಾದ್ಯ ಎಂದು ಯೋಜನೆ ಹಮ್ಮಿಕೊಂಡ ಶಿಬಿರ ಸಹಸ್ರಾರು ಕುಟುಂಬದ ನೆಮ್ಮದಿಯ ಬದುಕಿಗೆ ಕಾರಣವಾಗಿ ಹೊಸ ಬರವಸೆಯನ್ನು ಮೂಡಿಸಿದೆ ಯೋಜನೆಯ ಸತ್ಕಾರ್ಯಕ್ಕೆ ಸಮಸ್ತರು ಕೈಜೋಡಿಸಬೇಕಾಗಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು, ಯೋಜನೆಯ ವತಿಯಿಂದ ಈಗಾಗಲೇ 1200 ಕ್ಕೂ ಅಧಿಕ ಶಿಬಿರಗಳನ್ನು ಹಮ್ಮಿಕೊಂಡು ದುಶ್ಚಟದ ದಾಸರಾಗಿದ್ದ ಹಲವರನ್ನು ಮುಕ್ತರಾಗಿಸಿದ ಹಿರಿಮೆ ಹೊಂದಿದೆ. ಶಿಬಿರದ ಮೂಲಕ ನೆಮ್ಮದಿಯ ಬದುಕಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ 45 ಕ್ಕೂ ಅಧಿಕ ಶಿಬಿರಾರ್ಥಿಗಳಿಗೆ ಯೋಜನೆಯ ನಿಯಮದನ್ವಯ ಪತ್ನಿಯ ಜತೆ ನವಜೀವನ ನಡೆಸಲು ಶಾಸ್ತ್ರ ಸಂಪ್ರದಾಯ ರೀತಿಯಲ್ಲಿ ಆರತಿ ಬೆಳಗಿ ಮರುಮದುವೆಯ ವಿಧಿವಿಧಾನವನ್ನು ನಡೆಸಿ ಶ್ರೀಗಳಿಂದ ಆಶೀರ್ವದಿಸಿ ಬೀಳ್ಕೊಡಲಾಯಿತು. ಶ್ರೀಗಳನ್ನು ಹಾಗೂ ಶಾಸಕರನ್ನು ಸನ್ಮಾನಿಸಲಾಯಿತು.
ಮುದ್ದನಹಳ್ಳಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಕೆಂಗಟ್ಟೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪ್ರೇಮಕುಮಾರಗೌಡ, ಜಿ.ಆನಂದ, ಪ್ರಗತಿ ಬಂಧು ಸ್ವಸಹಾಯ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ, ಯೋಜನಾಧಿಕಾರಿ ಲೀಲಾಮೂರ್ತಿ, ತಿಮ್ಮಯ್ಯನಾಯ್ಕ, ವಿದ್ಯಾಧರ, ಸೌಮ್ಯ, ಮೇಲ್ವಿಚಾರಕ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
(ವರದಿ: ರಾಜಾರಾವ್ ಜಾಧವ್, ಶಿಕಾರಿಪುರ)






Discussion about this post