ಮಂಡ್ಯ: ರಾಜ್ಯದಲ್ಲೇ ಬಾರೀ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಇಂದು ಸಾವಿರಾರು ಅಭಿಮಾನಿಗಳೊಂದಿಗೆ ಮೈಸೂರಿನ ಚಾಮುಂಡೇಶ್ವರಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಸುಮಲತಾ ಅವರು ನೇರವಾಗಿ ಮಂಡ್ಯ ತಾಲೂಕು ಇಂಡುವಾಳಿಗೆ ಆಗಮಿಸಿ ಕಾಂಗ್ರೆಸ್ ಮುಖಂಡ ಸಚ್ಚಿದಾನಂದ ಅವರ ನಿವಾಸಕ್ಕೆ ತೆರಳಿದರು.
ನಟ ಯಶ್ ಅವರೂ ಸಚ್ಚಿದಾನಂದ ನಿವಾಸಕ್ಕೆ ಆಗಮಿಸಿದರು. ನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಸುಮಲತಾ ಅವರೊಂದಿಗೆ ಪುತ್ರ ಅಭಿಷೇಕ್, ನಟ ಯಶ್, ರಾಕಲೈನ್ ವೆಂಕಟೇಶ್, ದೊಡ್ಡಣ್ಣ, ಅಂಬರೀಶ್ ಸೋದರನ ಪುತ್ರ ಮಧುಸೂದನ್ ಸೇರಿದಂತೆ ಹಲವರು ಇದ್ದರು.
ಭಾರೀ ಮಹತ್ವದ ವಿಚಾರವೆಂದರೆ ಎಲ್ಲಾ ಸಮುದಾಯದ ಮುಖಂಡರನ್ನು ಜೊತೆಯಾಗಿಸಿಕೊಂಡು ಹಾಗೂ ಅಸಂಖ್ಯಾತ ಅಂಬರೀಶ್ ಅಭಿಮಾನಿಗಳ ಹರ್ಷೋದ್ಘಾರದ ನಡುವೆ ಸುಮಲತಾ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.
ಸುಮಲತಾ ಅವರ ನಮಪತ್ರಕ್ಕೆ ಅಹಿಂದ ನಾಯಕರು ಅನುಮೋದನೆ ನೀಡಿದ್ದು ವಿಶೇಷವಾಗಿತ್ತು. ದಲಿತ, ಕುರುಬ, ಗಂಗಾಮತಸ್ಥ ಮತ್ತು ಮುಸ್ಲಿಂ ಸಮುದಾಯದ ಪ್ರತಿನಿಧಿತ್ವದಲ್ಲಿ ಅಹಿಂದ ಕಾಂಬಿನೇಷನ್’ಗೆ ಮೊರೆ ಹೋಗುವ ಮೂಲಕ ಸುಮಲತಾ ಅವರು ಈ ಮೂಲಕ ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
Discussion about this post