ನವದೆಹಲಿ: ಕೇರಳದ ಪವಿತ್ರ ಯಾತ್ರಾಸ್ಥಳ ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಸಮ್ಮತಿ ಸೂಚಿಸಿ, ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ಈ ಕುರಿತಂತೆ ತೀರ್ಪು ಪ್ರಕಟಿಸಿರುವ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠ, ಭಾರತದಲ್ಲಿ ಮಹಿಳೆಯರಿಗೆ ದೇವತೆಯ ಸ್ಥಾನ ನೀಡಲಾಗಿದೆ. ಹೀಗಿರುವಾಗ, ಮಹಿಳೆಯರ ಕುರಿತಾಗಿ ಗ್ರಹಿಕೆ ಬದಲಾಗಬೇಕು. ಅವರಿಗೆ ತಾರತಮ್ಯ ಮಾಡುವುದು ಸರಿಯಲ್ಲ ಎಂದಿರುವ ನ್ಯಾಯಾಲಯ, ಸ್ತ್ರೀಯರ ಪ್ರವೇಶಕ್ಕೆ ಅಸ್ತು ಎಂದು 800 ವರ್ಷಗಳ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದೆ.
ಮಹಿಳೆಯರನ್ನು ಯಾವಾಗಲು ತಾರತಮ್ಯದಿಂದ ಕಾಣಲಾಗುತ್ತದೆ. ಮಹಿಳೆಯರು ಯಾವಾಗಲೂ ತಮ್ಮ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಸಮಾಜದಲ್ಲಿ ಮಹಿಳೆಯರ ಬಗೆಗಿನ ಗ್ರಹಿಕೆ ಬದಲಾಗಬೇಕು. ಮಹಿಳೆ ಪುರುಷನ ಅಡಿಯಾಳಲ್ಲ. ದೇವರ ಪ್ರಾರ್ಥನೆಗೆ ಯಾವುದೇ ಬೇಧ-ಭಾವವಿಲ್ಲ ಎಂದು ದೀಪಕ್ ಮಿಶ್ರಾ ಹೇಳಿದರು.
ಹಿಂದೂ ಪುರಾಣದ ಪ್ರಕಾರ, ಅಯ್ಯಪ್ಪ ದೇವರು ಮಹಿಷಿ ರಾಕ್ಷಸನನ್ನು ಕೊಂದ ನಂತರ ಶಬರಿಮಲೆಗೆ ಹೋಗಿ ಧ್ಯಾನ ಮಾಡಿದರು ಎಂದು ಹೇಳುತ್ತದೆ. ಇನ್ನೊಂದು ಪುರಾಣದ ಕಥೆಯಲ್ಲಿ, ಪರಶುರಾಮ ಮಹರ್ಷಿ ತನ್ನ ಕೊಡಲಿಯನ್ನು ಎಸೆದು ಶಬರಿಮಲೆಯಲ್ಲಿ ಅಯ್ಯಪ್ಪನ ಮೂರ್ತಿ ಉದ್ಭವಿಸಿತು ಎಂದು ಹೇಳುತ್ತದೆ.
ವಿವಾದ ಉಂಟಾಗಿದ್ದು 10ರಿಂದ 50 ವರ್ಷದೊಳಗಿನ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶ ನಿಷೇಧ ಮಾಡಿರುವುದರಿಂದ. ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿರುವುದರಿಂದ ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಅಶುದ್ಧವಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಆದೇಶ ತಂದಿತ್ತು. ಅದನ್ನು ನೂರಾರು ವರ್ಷಗಳಿಂದ ಪಾಲಿಸಿಕೊಂಡು ಬರಲಾಗುತ್ತಿತ್ತು.
ಮಹಿಳೆಯರಿಗೆ ನಿಷೇಧ ಹೇರುವ ಮೂಲಕ ಅವರ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಅವರನ್ನು ತಾರತಮ್ಯ ಮಾಡಲಾಗುತ್ತಿದೆ ಎಂದು ಸಮಾಜದ ಒಂದು ವರ್ಗದ ಮಹಿಳೆಯರು ಸೇರಿದಂತೆ ಕ್ರಾಂತಿಕಾರಿಗಳು, ಪ್ರಗತಿಪರರು ಟೀಕಿಸಿದ್ದರು.
















