ಅಸ್ಸಾಂ: ಹೌದು… ಆ ಎಟಿಎಂ ಮಷೀನ್ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದ ಇಲಿ, ದೇಶದ ಅರ್ಥವ್ಯವಸ್ಥೆಯನ್ನೇ ಬೆಚ್ಚಿ ಬೀಳಿಸಿದ್ದು, ಆ ಇಲಿ ಕಡಿದು ನಾಶ ಮಾಡಿದ್ದು ಬರೋಬ್ಬರಿ 12 ಲಕ್ಷ ರೂಪಾಯಿಗಳನ್ನು ಎಂದರೆ ನೀವು ನಂಬಲೇಬೇಕು.
ಎಟಿಎಂನಲ್ಲಿ ಇಲಿ ನೋಟು ಕಡಿದಿದೆ ಎಂದು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಗಳು ಹರಿದಾಡುತ್ತಿದ್ದು ಇದು ಬೆಂಗಳೂರಿನ ಮತ್ತೀಕೆರೆಯಲ್ಲಿ ನಡೆದ ಘಟನೆ ಎನ್ನಲಾಗಿತ್ತು. ಆದರೆ, ಈ ಘಟನೆ ನಡೆದಿರುವುದು ಅಸ್ಸಾಂನ ಟಿನ್ಸುಕಿಯಾ ಎಂಬ ಜಿಲ್ಲೆಯಲ್ಲಿ.
ಇಲ್ಲಿನ ಲೈಪುಲಿ ಎಂಬಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್‌ನ ಎಟಿಎಂ ಅನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ 2018ರ ಮೇ 20ರಂದು ಬಂದ್ ಮಾಡಲಾಗಿತ್ತು. ಈ ವೇಳೆ ಈ ಘಟನೆ ನಡೆದಿದೆ.
ಎಟಿಎಂನಲ್ಲಿ ತಾಂತ್ರಿಕ ದೋಷವಿದ್ದ ಕಾರಣ ದೂರಿನ ಆಧಾರದಲ್ಲಿ ಜೂನ್ 11ರಂದು ದುರಸ್ತಿ ಮಾಡುವವರ ತಂಡ ಭೇಟಿ ನೀಡಿದಾಗ ಶಾಕ್ ಕಾದಿತ್ತು. ದುರಸ್ತಿಗಾರರು ಒಳಹೊಕ್ಕು ನೋಡಿದರೆ 2000 ಹಾಗೂ 500 ರೂ ಮುಖಬೆಲೆಯ ನೋಟುಗಳು ಚಿಂದಿಚಿಂದಿಯಾಗಿ ಬಿದ್ದಿದ್ದವು.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮವೊಂದು ವಿಶೇಷ ವರದಿ ಪ್ರಕಟಿಸಿದ್ದು, ಬ್ಯಾಂಕ್ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 12,38,000 ರೂ. ಹಣವನ್ನು ಇಲಿ ನಾಶ ಮಾಡಿದೆ ಎಂದು ತಿಳಿಸಿದ್ದಾರೆ.
ಆದರೆ, ಗೌಹಾಟಿ ಮೂಲದ ಗ್ಲೋಬಲ್ ಬ್ಯುಸಿನೆಸ್ ಸೆಲ್ಯೂಷನ್‌ಸ್ ಎಂಬ ಕಂಪೆನಿಯ ವರದಿಯಾಂತೆ ಮೇ 19ರಂದು ಎಟಿಎಂನಲ್ಲಿ 29 ಲಕ್ಷ ತುಂಬಿಸಲಾಗಿತ್ತು ಎಂದಿದೆ. ಇನ್ನು, ಮೇ 20ರಂದು ಎಟಿಎಂ ಕೆಟ್ಟು ಹೋಗಿದ್ದು, ದುರಸ್ತಿ ಮಾಡುವ ತಂಡ ಬಂದಿದ್ದು ಮೇ 11ರಂದು.. ಇಷ್ಟು ದಿನಗಳ ಕಾಲ ಈ ಎಟಿಎಂ ಸ್ಥಗಿತಗೊಂಡಿದ್ದು, ಇಷ್ಟು ದಿನ ದುರಸ್ತಿಗೆ ಯಾರೂ ಬಂದಿಲ್ಲದೇ ಇದ್ದುದು ಯಾಕೆ ಎಂಬ ಪ್ರಶ್ನೆಯಲ್ಲಿ ಅಸ್ಸಾಂನ ಮಾಧ್ಯಮವೊಂದು ಎತ್ತಿದೆ.
ಇನ್ನೊಂದು ಮಾಧ್ಯಮದ ವರದಿಯಂತೆ ಸುಮಾರು 17 ಲಕ್ಷ ರೂ. ಹಣವನ್ನು ಎಟಿಎಂಗೆ ತುಂಬಿಸಲಾಗಿತ್ತು ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಎಟಿಎಂ ಅಷ್ಟು ದಿನ ದುರಸ್ತಿಗೊಳ್ಳದೇ ಇದ್ದುದು ಯಾಕೆ ಎಂಬುದೂ ಸೇರಿದಂತೆ ಎಷ್ಟು ಹಣವಿತ್ತು ಎಂಬ ಅನುಮಾನಗಳಿಗೆ ಕಾರಣವಾಗಿದೆ.
Discussion about this post