ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರವಾದ ಹಾಗೂ ಉಗ್ರಗಾಮಿಗಳ ಉಪಟಳ ಕೊನೆಯ ಹಂತದಲ್ಲಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಈ ಕುರಿತಂತೆ ಇಂದು ಮಾತನಾಡಿರುವ ಅವರು, ನಮ್ಮ ಸರ್ಕಾರ ಅಸ್ಥಿತ್ವಕ್ಕೆ ಬಂದಂದಿನಿಂದ ಇದುವರೆಗೂ ಸುಮಾರು 600 ಉಗ್ರರನ್ನು ಬಲಿ ಹಾಕಲಾಗಿದೆ. ಇಂತಹ ಒಂದು ಕಠಿಣ ನಿರ್ಧಾರದ ಪರಿಣಾಮ ಕಣಿವೆ ರಾಜ್ಯದಲ್ಲಿ ಉಗ್ರರ ಹಾವಳಿಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗುತ್ತಿದ್ದೇವೆ ಎಂದಿದ್ದಾರೆ.
ಸರ್ಕಾರದ ದಿಟ್ಟ ನಿರ್ಧಾರದ ಪರಿಣಾಮ 600 ಉಗ್ರರನ್ನು ಬೇಟೆಯಾಡಲಾಗಿದ್ದು, ಯುಪಿಎ-1 ಹಾಗೂ 2 ಅವಧಿಗೆ ಹೋಲಿಕೆ ಮಾಡಿದರೆ ನಮ್ಮ ಸರ್ಕಾರದ ಅವಧಿಯ ಈ ಬೇಟೆ ಸಂಖ್ಯೆ ಅತ್ಯಧಿಕವಾಗಿದೆ. ಹೀಗಾಗಿ, ಕಣಿವೆ ರಾಜ್ಯದಲ್ಲಿ ಭಯೋತ್ಪಾದನೆ ಅಂತಿಮ ಹಂತದಲ್ಲಿದೆ. ಇದರ ಬೆನ್ನಲ್ಲೇ, ಗೃಹ ಸಚಿವರ ರಾಜನಾಥ ಸಿಂಗ್ ಮುಂದಿನ ವಾರದಲ್ಲಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆಯೂ ಸಹ ಉಗ್ರರು ಹಾಗೂ ಪ್ರತ್ಯೇಕತಾವಾದಿ ಹೋರಾಟಗಾರರ ಗಲಭೆ ವಿರುದ್ಧ ಕೇಂದ್ರ ಸರ್ಕಾರ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದವರು ತಿಳಿಸಿದ್ದಾರೆ.
Discussion about this post