ಕಲ್ಪ ಮೀಡಿಯಾ ಹೌಸ್ | ಸೊರಬ |
ರೈತರ ಹಾಗೂ ಜನರ ಹಿತ ಕಾಯುವ ಬದಲು ಕೇಂದ್ರ ಸರ್ಕಾರದ ಅಜೆಂಡದಲ್ಲಿ ಕಂಪನೀಕರಣ, ಕೈಗಾರಿಕೆ, ಉದ್ದಿಮೆ, ವಾಣಿಜ್ಯವನ್ನು ಅದಾನಿ, ಅಂಬಾನಿಯವರಿಗೆ ಗುತ್ತಿಗೆ ನೀಡುವುದು ಅಥವಾ ಮಾರಾಟ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ಪಟ್ಟಣದ ತಾಲೂಕು ಕಚೇರಿ ಮುಂಭಾಗ ವಿಶ್ವ ಮಾನವ ಶಕ್ತಿ ಶೋಧಕ ಸಮಾಜ ಟ್ರಸ್ಟ್ ವತಿಯಿಂದ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ನೆನಪಿನಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಮ್ಮಿಕೊಂಡ ಒಂದು ದಿನದ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಗದೀಕರಣ ಮಾಡುತ್ತಿದ್ದೇವೆ ಎಂದಿದ್ದಾರೆ. ಜನರ ಆಸ್ತಿಯಾಗಿರುವ ವಿದ್ಯುತ್ ಕ್ಷೇತ್ರವನ್ನು ಖಾಸಗಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರೀಪೇಯ್ಡ್ ಸಿಸ್ಟಂ ಮಾದರಿಯಲ್ಲಿ ವಿದ್ಯುತ್ ಮೀಟರ್‌ಗಳನ್ನು ಅಳವಡಿಸುವ ಯೋಜನೆ ಜಾರಿಯಾದರೆ ರೈತರು ಮತ್ತು ಜನಸಾಮಾನ್ಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತ ವಿರೋಧಿ ಕಾಯ್ದೆಗಳ ವಿರೋಧಿಸಿ ದೆಹಲಿಯಲ್ಲಿ ಸುಮಾರು ಹನ್ನೊಂದು ತಿಂಗಳಿಂದ ಶಾಂತಿಯುತವಾಗಿ ರೈತರು ಮಳೆ, ಗಾಳಿ, ಚಳಿ ಲೆಕ್ಕಿಸದೇ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ರೈತರ ಅಹವಾಲುಗಳನ್ನು ಕೇಳಲು ಸಿದ್ದವಿಲ್ಲ ಎಂದರು.
ಕೇಂದ್ರದಲ್ಲಿ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ದೇಶದ ಕೈಗಾರಿಕೆ, ಉದ್ದಿಮೆಯನ್ನು ಅದಾನಿ ಹಾಗೂ ಅಂಬಾನಿಗೆ ಗುತ್ತಿಗೆ ನೀಡುವುದು ಅಥವಾ ಮಾರಾಟ ಮಾಡುವ ಮೂಲಕ ಕಂಪನೀಕರಣವೇ ಪ್ರಧಾನವಾಗಿದೆ. ಕೊರೋನಾ ಲಾಕ್‌ಡೌನ್ ನಂತಹ ಸಂದರ್ಭದಲ್ಲಿ ವಿವಾದಿತ ಕಾಯ್ದೆಗಳಾದ ಭೂಸುಧಾರಣೆ ಕಾನೂನು, ಎಪಿಎಂಸಿ ಕಾನೂನು, ಎಂಎಸ್‌ಪಿ ಕಾನೂನುಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತಂದಿರುವುದು ವಿಷಾದದ ಸಂಗತಿ. ಕೂಡಲೇ ಈ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ವಿಶ್ವ ಮಾನವ ಶಕ್ತಿ ಶೋಧಕ ಸಮಾಜ ಟ್ರಸ್ಟ್ ಅಧ್ಯಕ್ಷ ಚಂದ್ರಪ್ಪ ಮಾಸ್ತರ್ ನೇತೃತ್ವ ವಹಿಸಿದ್ದರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಗೌಡ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಮುಖರಾದ ಉಮೇಶ್ ಪಾಟೀಲ್, ಮಂಜುನಾಥ ಆರೇಕೊಪ್ಪ, ಮೇಘರಾಜ ಬೆಟ್ಟದಕೂರ್ಲಿ, ಬಿ. ನಾಗರಾಜಗೌಡ ಆಲಹಳ್ಳಿ, ಸುಶೀಲ ಇಂದೂರ್ ಕಾಗೋಡು, ರಾಜಪ್ಪ ಮಾಸ್ತರ್, ಮಾಲತೇಶ ಕೊಡಕಣಿ, ಮಲ್ಲಿಕಾರ್ಜುನ ಸೇರಿದಂತೆ ಇತರರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post