ಕಲ್ಪ ಮೀಡಿಯಾ ಹೌಸ್ | ಕಾನೂನು ಕಲ್ಪ – ಪ್ರಶ್ನೋತ್ತರ ಅಂಕಣ |ಹಿಂದೂ ಅವಿಭಜಿತ ಕುಟುಂಬದ ಕರ್ತನಿಗೆ ಅಂದರೆ ಯಜಮಾನನಿಗೆ, ಕೂಡು ಕುಟುಂಬದ ಆಸ್ತಿ ಮಾರಾಟ ಮಾಡಲು ವಿಶಾಲವಾದ ವಿವೇಚನಾ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಕಲಬುರ್ಗಿ ಜಿಲ್ಲೆಯ ಬಬಲಾದ್ ಗ್ರಾಮದಲ್ಲಿ 1995ನೇ ಇಸವಿಯಲ್ಲಿ ಹಿಂದೂ ಅವಿಭಜಿತ ಕುಟುಂಬದ ಯಜಮಾನರೊಬ್ಬರು ತಮ್ಮ ಕುಟುಂಬಕ್ಕೆ ಸೇರಿದ ಜಮೀನನ್ನು ಮಗಳ ಮದುವೆಯ ವೆಚ್ಚ ಭರಿಸಲು ಮಾರಾಟ ಮಾಡಿದ್ದರು. ಈ ಮಾರಾಟವನ್ನು ಪ್ರಶ್ನಿಸಿ, ಯಜಮಾನನ ಐವರು ಮಕ್ಕಳಲ್ಲಿ, ಓರ್ವ ಮಗ ನ್ಯಾಯಾಲಯದ ಮೆಟ್ಟಲೇರಿದ್ದರು. ನನ್ನ ತಂದೆ ಕುಡಿತ ಮೊದಲಾದ ತಮ್ಮ ದುಶ್ಚಟಗಳಿಗೆ ಹಣ ಹೊಂದಿಸಲು, ನಮಗೆ ಅರಿವಿಲ್ಲದಂತೆ ಒಟ್ಟು ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ವಿಚಾರಣಾ ನ್ಯಾಯಾಲಯ ನೀಡಿದ ತೀರ್ಪನ್ನು ಮಾನ್ಯ ಕರ್ನಾಟಕ ಹೈಕೋರ್ಟ್ ವಜಾ ಮಾಡಿ, ಈ ಮಾರಾಟವನ್ನು ರದ್ದು ಮಾಡುವಂತೆ ಆದೇಶ ನೀಡಿತ್ತು. ಕರ್ನಾಟಕ ಹೈಕೋರ್ಟ್ ನೀಡಿದ ಆದೇಶದ ವಿರುದ್ಧ ಮಾನ್ಯ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪನ್ನು ಇತ್ತೀಚಿಗೆ ಪ್ರಕಟಿಸಿದ ಮಾನ್ಯ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ಸಾಕಾರಣಗಳಿಗೆ ಹಾಗು ಅವಿಭಜಿತ ಕುಟುಂಬದ ಹಿತಾಸಕ್ತಿಯನ್ನು ಕಾಯುವ ಸದುದ್ದೇಶಗಳಿಗೆ, ಕುಟುಂಬದ ಆಸ್ತಿ ಮಾರಾಟ ಮಾಡುವ ಅಧಿಕಾರ ಕರ್ತನಿಗಿದೆ ಎಂದು ಅಭಿಪ್ರಾಯಪಟ್ಟಿದೆ. ಆದರೆ ಕರ್ತನಿಗಿರುವ ಅಧಿಕಾರದ ಬಳಕೆ ಸದುದ್ದೇಶಕ್ಕೆ ಆಗಿದೆಯಾ ಎಂಬುದು ಆಯಾ ಪ್ರಕರಣದ ವಾಸ್ತವಾಂಶಗಳ ಮೇಲೆ ನಿರ್ಧಾರವಾಗುತ್ತದೆ.
ಸಾಮಾನ್ಯವಾಗಿ, ಇಂತಹ ಪ್ರಕರಣಗಳಲ್ಲಿ ಮಾರಾಟ ಸದುದ್ದೇಶಗಳನ್ನು ಪೂರೈಸಲು ನಡೆಯಿತು ಎಂದು ಸಾಬೀತು ಮಾಡುವ ಹೊಣೆಗಾರಿಕೆ ಆಸ್ತಿ ಕೊಂಡವನದ್ದಾಗಿರುತ್ತದೆ. ಆದರೆ ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 106 ರ ಪ್ರಕಾರ “ಯಾವುದೇ ಸತ್ಯವು ಒಬ್ಬ ವ್ಯಕ್ತಿಯ ವಿಶೇಷ ಜ್ಞಾನದಲ್ಲಿರುವಾಗ, ಆ ಸತ್ಯವನ್ನು ಸಾಬೀತುಪಡಿಸುವ ಹೊರೆ ಆ ವ್ಯಕ್ತಿಯ ಮೇಲಿರುತ್ತದೆ” ಎಂದು ಹೇಳುತ್ತದೆ. ಇದರರ್ಥ ನಿರ್ದಿಷ್ಟ ಮಾಹಿತಿ ಒಬ್ಬ ವ್ಯಕ್ತಿಗೆ ಮಾತ್ರ ತಿಳಿದಿದ್ದರೆ, ನ್ಯಾಯಾಲಯದಲ್ಲಿ ಆ ಮಾಹಿತಿಯನ್ನು ಸಾಬೀತುಪಡಿಸುವ ಜವಾಬ್ದಾರಿ ಆ ವ್ಯಕ್ತಿಯದ್ದಾಗಿರುತ್ತದೆ. ಹಾಗಾಗಿ ಈ ಪ್ರಕರಣದಲ್ಲಿ, Burden of Proof ಅಂದರೆ ಪುರಾವೆಯ ಹೊಣೆ ಆಸ್ತಿಯ ಖರೀದಿದಾರನದಲ್ಲ, ಬದಲಾಗಿ ಆಸ್ತಿ ಮಾರಾಟದ ಉದ್ದೇಶವನ್ನು ಪ್ರಶ್ನಿಸುತ್ತಿರುವ ಆದರೆ ಆ ಅವಿಭಜಿತ ಕುಟುಂಬದ ಭಾಗವೇ ಆಗಿರುವ ಮೇಲ್ಮನವಿದಾರನದ್ದಾಗಿದೆ. ಹಾಗಾಗಿ, ಈ ಪ್ರಕರಣದಲ್ಲಿ Reverse Burden of Proof ಅಂದರೆ ಪುರಾವೆಯ ಹಿಮ್ಮುಖ ಹೊರೆ ಮೇಲ್ಮನವಿದಾರ ಅಂದರೆ ಖರೀದಿಯನ್ನು ಪ್ರಶ್ನಿಸಿರುವ ಅವಿಭಜಿತ ಕುಟುಂಬದ ಕರ್ತನ ಮಗನದ್ದಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
1991ನೇ ಇಸವಿಯಲ್ಲಿ ನಡೆದ ಮಗಳ ಮದುವೆಗೆ ಮಾಡಿದ ಸಾಲ ತೀರಿಸಲು ಆಸ್ತಿ ಮಾರಾಟ ಮಾಡಬೇಕಾಯಿತು ಎಂಬ ವಾದವನ್ನು ಮನ್ನಿಸಿದ ಸುಪ್ರೀಂ ಕೋರ್ಟ್, ಸಾಮಾನ್ಯವಾಗಿ ವಿವಾಹ ವೆಚ್ಚಗಳಿಗೆ ಮಾಡುವ ಸಾಲವನ್ನು ತೀರಿಸಲು ಕುಟುಂಬಗಳಿಗೆ ಸಾಕಷ್ಟು ಸಮಯ ಬೇಕು. ಹಾಗಾಗಿ 1991ನೇ ಇಸವಿಯಲ್ಲಿ ನಡೆದ ಮದುವೆಯ ಸಾಲವನ್ನು ತೀರಿಸಲು 1995ನೇ ಇಸವಿಯಲ್ಲಿ ಆಸ್ತಿ ಮಾರಾಟ ಮಾಡಿರುವುದು, ಅವಿಭಜಿತ ಕುಟುಂಬದ ಹಿತಾಸಕ್ತಿಗಳಿಗೆ ಪೂರಕವಾಗಿದ್ದು, ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳಲು ಕುಟುಂಬದ ಕರ್ತನಿಗೆ ಅಧಿಕಾರವಿದೆ ಎಂದು ಮಾನ್ಯ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಸ್ತಿ ಮಾರಾಟವಾದ ಐದು ವರ್ಷಗಳ ನಂತರ ಮೇಲ್ಮನವಿದಾರ ವಿಚಾರಣಾ ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹೂಡಿರುವುದು ಅನುಮಾನಗಳಿಗೆ ದಾರಿ ಮಾಡಿಕೊಡುವಂತಿದೆ, ಎಂದೂ ಕೂಡ ಮಾನ್ಯ ಸರ್ವೋಚ್ಛ ನ್ಯಾಯಾಲಯ ತಿಳಿಸಿದೆ.
ಆತ್ಮೀಯ ಓದುಗರೇ,
ಕಲ್ಪ ಮೀಡಿಯಾ ಹೌಸ್(ರಿ.) ಅಡಿಯಲ್ಲಿ ಪ್ರಕಟವಾಗುತ್ತಿರುನ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದಲ್ಲಿ ನಮ್ಮ ಓದುಗರಿಗಾಗಿ `ಕಾನೂನು ಕಲ್ಪ’ ಎಂಬ ಹೊಸ ಅಂಕಣವನ್ನು ಆರಂಭಿಸಲಾಗಿದ್ದು, ಪ್ರತಿ ಶುಕ್ರವಾರ ಪ್ರಕಟವಾಗಲಿದೆ. ಶಿವಮೊಗ್ಗ-ಭದ್ರಾವತಿಯ ಖ್ಯಾತ ವಕೀಲರು ಹಾಗೂ ಹಿರಿಯ ಪತ್ರಕರ್ತರೂ ಆಗಿರುವ ಶ್ರೀ ವೀರೇಂದ್ರ ಪಿ.ಎಂ. ಅವರು ಯಾವುದೇ ರೀತಿಯ ಕಾನೂನು ಸಮಸ್ಯೆಗಳು, ಕಾನೂನಿನ ಕುರಿತಾಗಿನ ಮಾರ್ಗದರ್ಶನ ಮಾಡಲಿದ್ದಾರೆ. ಸಾರ್ವಜನಿಕರು ತಮಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದರೆ ನಮಗೆ ಕಳುಹಿಸಬಹುದು. ಆ ಪ್ರಶ್ನೆಗಳಿಗೆ ವಕೀಲರಾದ ಶ್ರೀ ವೀರೇಂದ್ರ ಪಿ.ಎಂ. ಅವರು ಉತ್ತರ ನೀಡಲಿದ್ದಾರೆ. ನಿಮ್ಮ ಪ್ರಶ್ನೆಗಳು ಸ್ಪಷ್ಟ, ಸ್ಪುಟ, ನೇರವಾಗಿರಲಿ.
ನಿಮ್ಮ ಪ್ರಶ್ನೆಗಳನ್ನು ಈ ಕೆಳಗಿನ ವಾಟ್ಸಪ್ ಸಂಖ್ಯೆ 9481252093 (ವಾಟ್ಸಪ್ ಮಾತ್ರ) ಅಥವಾ ಇ-ಮೇಲ್ info@kalpa.news ಗೆ ಕಳುಹಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post