ಶ್ರೀನಗರ: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆಯ ಸಿದ್ದತೆ ಹಾಗೂ ಯಾತ್ರೆಯಿಂದ ಕಾಶ್ಮೀರದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಅಲ್ಲಿನ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪ ಮಾಡಿದ್ದು, ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ.
45 ದಿನಗಳ ಕಾಲದ ಅಮರನಾಥ ಯಾತ್ರೆ ಕಳೆದ ವಾರ ಪ್ರಾರಂಭವಾಯಿತು ಮತ್ತು ಕನಿಷ್ಠ 67,000 ಯಾತ್ರಾರ್ಥಿಗಳು ಈಗಾಗಲೇ ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಪ್ರಾಚೀನ ಮತ್ತು ಪವಿತ್ರ ದೇಗುಲಕ್ಕೆ ತೆರಳಿದ್ದಾರೆ.
ಸಾಮಾನ್ಯವಾಗಿ ಅಮರನಾಥ ಯಾತ್ರೆಗೆ ಉಗ್ರರ ಭೀತಿಯಿರುವ ಹಿನ್ನೆಲೆಯಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಸಿಆರ್’ಪಿಎಫ್, ಜಮ್ಮು ಕಾಶ್ಮೀರ ಪೊಲೀಸರು ಪ್ರಾಥಮಿಕ ಭದ್ರತಾ ವ್ಯವಸ್ಥೆಯ ಹೊಣೆ ಹೊತ್ತಿದ್ದು, ಇವರೊಂದಿಗೆ ಭಾರತೀಯ ಸೇನೆ, ಬಿಎಸ್’ಎಫ್ ಯೋಧರನ್ನೂ ಸಹ ಯಾತ್ರೆಯ ಮಾರ್ಗದಲ್ಲಿ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಇದೇ ವೇಳೆ ಮಾತನಾಡಿರುವ ಮುಫ್ತಿ, ಅಮರನಾಥ ಯಾತ್ರೆಯಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಈ ಯಾತ್ರೆ ಹಲವು ವರ್ಷಗಳಿಂದ ನಡೆಯತ್ತಿದೆ. ಆದರೆ, ಈ ಬಾರಿ ಸ್ಥಳೀಯರಿಗೆ ತೊಂದರೆಯಾಗುವ ರೀತಿಯಲ್ಲಿ ಅವರ ವಿರೋಧಿ ನೀತಿ ಅನುಸರಿಸಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು, ಸ್ಥಳೀಯರ ದೈನಂದಿನ ಜೀವನಕ್ಕೆ ತೊಂದರೆಯುಂಟಾಗಿದೆ ಎಂದು ದೂರಿದ್ದಾರೆ.
Discussion about this post