ಶಿವಮೊಗ್ಗ: ಸುಸಂಸ್ಕೃತ ಮನಸ್ಸಿನಿಂದ ಬರೆಯುವ ವರದಿಗಳು ಸಾಮಾಜಿಕ ಘಟನೆಗಳನ್ನು ದಾಖಲಿಸುವಂತಿರಬೇಕು. ಹಾಗಾದಾಗ ಮುಂದಿನ ಪೀಳಿಗೆಗೆ ನಮ್ಮ ಸಾಮಾಜಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪತ್ರಿಕಾ ದಿನಾಚರಣೆ ಕೇವಲ ಪತ್ರಕರ್ತರದೇ ಅಲ್ಲ ಅದನ್ನು ಸಂಸ್ಕೃತಿಯ ಅಂಗವಾಗಿ ಭಾವಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ವಿ. ದಯಾನಂದ ಹೇಳಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಸಮಾರಂಭದಲ್ಲಿ ಅವರ ಮಾತನಾಡಿದರು.
ವಿಶ್ರಾಂತ ಪೋಲಿಸ್ ವರಿಷ್ಠಾಧಿಕಾರಿ ಡಾ.ಡಿ.ವಿ. ಗುರುಪ್ರಸಾದ್ ಅವರ ಗೂಢಚರ್ಯೆಯ ಆ ದಿನಗಳು ಮತ್ತು *ವೀರಪ್ಪನ್ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದ ಅವರು, ಪ್ರಸ್ತುತ ಈ ಪುಸ್ತಕಗಳು ಒಬ್ಬ ಅಧಿಕಾರಿ ತನ್ನ ಕರ್ತವ್ಯದಲ್ಲಿ ಎಚ್ಚರದಿಂದಿದ್ದು ಆಯಾ ಸನ್ನಿವೇಶ ಮತ್ತು ಸಂದರ್ಭಗಳಲ್ಲಿ ಎದುರಾದ ಘಟನೆಗಳನ್ನು ಸಾಹಿತ್ಯ ರೂಪಕ್ಕಿಳಿಸುವುದು ಅಪರೂಪ ಮತ್ತು ಸಾಹಸ. ಅಂತಹ ಕೆಲಸವನ್ನು ಕೃತಿಕಾರರು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಕೆ.ಅಶ್ವಿನಿ ಮಾತನಾಡಿ, ಡಾ.ಗುರುಪ್ರಸಾದ್ ಅವರು ತಮಗೆ ಇಲಾಖಾ ತರಬೇತಿ ಸಂಸ್ಥೆಯಲ್ಲಿ ಗುರುಗಳಾಗಿದ್ದವರು. ಯಾವಾಗಲೂ ವಿದ್ಯಾರ್ಥಗಳು ಎಲ್ಲ ವಿಷಯಗಳ ಬಗ್ಗೆ ಕುತೂಹಲಿಗಳಾಗಿರಬೇಕು. ಪ್ರಶ್ನಿಸಬೇಕು ಎಂಬ ಮನೋಧರ್ಮದ ಬಗ್ಗೆ ನಮಗೆ ತಿಳಿ ಹೇಳುತ್ತಿದ್ದರು. ಯಾರು ಎಂತಹ ಪ್ರಶ್ನೆಯನ್ನೇ ಕೇಳಲಿ ಅದಕ್ಕೆ ಗಲಿಬಿಲಿಗೊಳ್ಳದೇ ತಾಳ್ಮೆಯಿಂದ ಉತ್ತರಿಸುತ್ತಿದ್ದರು. ಪುಸ್ತಕಗಳಲ್ಲಿ ತಮ್ಮ ಅನುಭವವನ್ನು ನೇರವಾಗಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ ಎಂದರು.
ಪತ್ರಿಕೆಗಳು ನಮಗೆ ಕನ್ನಡಿಯಿದ್ದಂತೆ, ಪತ್ರಕರ್ತರಿಂದ ನಮಗೆ ಸಮಾಜದ ಆಗುಹೋಗುಗಳ ಬಗ್ಗೆ ಸುಳಿವು ಸಿಗುತ್ತದೆ. ಅಂತಹ ಜವಾಬ್ದಾರಿ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ದಿನಾಚರಣೆಯ ಶುಭಾಶಯ ಕೋರಿದರು.
ಹಿರಿಯ ನ್ಯಾಯವಾದಿ ಮತ್ತು ಡಿವಿಎಸ್ ಸಂಸ್ಥೆಯ ಅಧ್ಯಕ್ಷ ಬಸಪ್ಪಗೌಡರು ಮಾತನಾಡಿ, ಪತ್ರಕರ್ತರು ಕೇವಲ ರಂಜನೆಗೆ ಸುದ್ದಿ ಬರೆಯುವ ಹವ್ಯಾಸ ಬೇಡ. ಅದರ ಕಾನೂನಾತ್ಮಕ ಸಮಸ್ಯೆಗಳ ಬಗ್ಗೆಯೂ ಮುಂಚಿತ ಆಲೋಚಿಸಬೇಕು ಎಂದು ತಿಳಿ ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಟೆಲೆಕ್ಸ್ ರವಿಕುಮಾರ್ ಮಾತನಾಡಿ, ಡಾ. ಗುರುಪ್ರಸಾದ್ ಅವರು ವಾರ್ತಾ ಇಲಾಖೆಯ ವರಿಷ್ಠಾಧಿಕಾರಿಗಳಾಗಿದ್ದಾಗ ಜಿಲ್ಲಾಮಟ್ಟದ ಪತ್ರಿಕೆಗಳ ಹಿತರಕ್ಷಣೆಗೆ ಹಲವಾರು ಸುಧಾರಣೆಗಳನ್ನು ಶಿಫಾರಸ್ಸು ಮಾಡಿ ಸಣ್ಣಪತ್ರಿಕಾರಂಗಕ್ಕೆ ಚೇತರಿಕೆ ತಂದರು ಎಂದು ಗುರುಪಸಾದ್ ಅವರ ಕೊಡುಗೆಯನ್ನು ಶ್ಲಾಘಿಸಿದರು.
ವಿಮರ್ಶಕ ಡಾ.ರಾಜೇಂದ್ರ ಚನ್ನಿ ಅವರು ಪತ್ರಿಕಾ ದಿನಾಚರಣೆಯ ಬಗ್ಗೆ ಪ್ರಸ್ತಾಪಿಸಿ ಪುಸ್ತಕಗಳ ಪರಿಚಯ ಮಾಡಿದರು. ಪತ್ರಕರ್ತರಿಗೆ ಇಂದು ಎದುರಿಗಿರುವ ಆದರ್ಶಗಳೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಸಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಅವರೀರ್ವರು ಪತ್ರಿಕೆಗಳ ಸಾಮರ್ಥ್ಯದ ಬಗ್ಗೆ ಇರಿಸಿಕೊಂಡಿದ್ದ ನಂಬಿಕೆ, ವಿಶ್ವಾಸಗಳನ್ನು ಇಂದಿನ ಪತ್ರಕರ್ತರು ಮರೆಯಬಾರದು ಎಂದರು.
ಈಗ ಪತ್ರಿಕಾರಂಗ ಸಾಗುತ್ತಿರುವ ಚರ್ಯೆಗಳು ನಿಜಕ್ಕೂ ಸವಾಲಾಗಿ ಪರಿಣಮಿಸಿದೆ. ಕಾಸಿಗಾಗಿ ಸುದ್ದಿ ಮತ್ತು ಬರೆದದ್ದೇ ಸತ್ಯ , ಅದನ್ನೇ ನಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಆದರೆ ಇಂತಹ ಸಂರ್ಭದಲ್ಲೂ ನಿಷ್ಠಾವಂತ ಪತ್ರಕರ್ತರಿದ್ದಾರೆ ಎಂಬುದನ್ನು ನೇಹಾ ದೀಕ್ಷಿತ್ ಮುಂತಾದ ಪತ್ರಕರ್ತರು ತೋರಿಸಿಕೊಟ್ಟಿದ್ದಾರೆ ಎಂದರು.
ಡಾ.ಡಿ.ವಿ. ಗುರುಪ್ರಸಾದ್ ಅವರು ತಾವು ಪುಸ್ತಕ ರಚಿಸಿದ ಹಿನ್ನೆಲೆಯ ಬಗ್ಗೆ ಸ್ವಾರಸ್ಯವಾಗಿ ವಿವರಿಸಿದರು.
ನಾಗರತ್ನ ಸಂಗಡಿಗರಿಂದ ಮೊದಲಿಗೆ ನಾಡಗೀತೆ ಗಾಯನವಿತ್ತು. ಕಾರ್ಯದರ್ಶಿ ವೈದ್ಯ ಅವರು ಎಲ್ಲರಿಗೂ ಸ್ವಾಗತ ಬಯಸಿ, ದೀಪಕ್ ಸಾಗರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗದ ಉರ್ದು ಪತ್ರಿಕೆ ಸಂಪಾದಕ ಮುದಸ್ಸಿರ್ ಮತ್ತು ಹಿರಿಯ ಪತ್ರಿಕಾ ವಿತರಕ ಮಾಲತೇಶ್ ಅವರನ್ನು ಸನ್ಮಾನಿಸಲಾಯಿತು.
(ವರದಿ: ಡಾ.ಸುಧೀಂದ್ರ)
Discussion about this post