ಕಲ್ಪ ಮೀಡಿಯಾ ಹೌಸ್
ಶಂಕರಘಟ್ಟ: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆ ಕೈಗೊಳ್ಳುವ ಸಂಸ್ಥೆಗಳ ಜಾಗತಿಕ ರ‍್ಯಾಂಕಿಂಗ್ ಅನ್ನು ನಿರ್ಧರಿಸುವ ಪ್ರತಿಷ್ಠಿತ ಸೈಮ್ಯಾಗೋ ಪಟ್ಟಿಯು ಇತ್ತೀಚೆಗೆ ಬಿಡುಗಡೆಯಾಗಿದ್ದು, ಕುವೆಂಪು ವಿಶ್ವವಿದ್ಯಾಲಯವು ಭಾರತದ ವಿಶ್ವವಿದ್ಯಾಲಯಗಳ ಪೈಕಿ 56ನೆಯ ಸ್ಥಾನ ಪಡೆದ ಸಾಧನೆ ಮಾಡಿದೆ.
ಕಳೆದ ವರ್ಷ 66ನೆಯ ಸ್ಥಾನದಲ್ಲಿದ್ದ ವಿಶ್ವವಿದ್ಯಾಲಯ, 2021ರ ಸಾಲಿನಲ್ಲಿ ಸಂಶೋಧನಾ ಮಾನದಂಡದಲ್ಲಿ 41ನೆಯ ಸ್ಥಾನ, ನಾವೀನ್ಯತೆಯಲ್ಲಿ 38ನೆಯ ಸ್ಥಾನ ಮತ್ತು ಸಾಮಾಜಿಕ ಪ್ರಭಾವ ಮಾನದಂಡದಲ್ಲಿ 26ನೆಯ ಸ್ಥಾನ ಪಡೆದಿದ್ದು, ಸಮಗ್ರವಾಗಿ 56ನೆಯ ಸ್ಥಾನ ಪಡೆದಿದೆ.
ಜಗತ್ತಿನಾದ್ಯಂತ ವಿಜ್ಞಾನ ಸಂಶೋಧನಾ ಪ್ರಕಟಣೆಗಳ ಶ್ರೇಷ್ಠತೆಯನ್ನು ಅಳೆಯುವ ಸ್ಕೋಪಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಸಮೀಕ್ಷೆ ಕೈಗೊಳ್ಳುವ ಸೈಮ್ಯಾಗೋ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸರ್ಕಾರಿ, ಖಾಸಗಿ, ಆರೋಗ್ಯ, ಉನ್ನತ ಶಿಕ್ಷಣ ಮತ್ತು ಸರ್ಕಾರೇತರ ಕ್ಷೇತ್ರಗಳ ವಿಭಾಗಗಳಲ್ಲಿ 7533 ಸಂಸ್ಥೆಗಳನ್ನು ಒಳಗೊಂಡ 2021ನೆಯ ಸಾಲಿನ ಸಮಗ್ರ ರ್ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸಂಶೋಧನಾ ಚಟುವಟಿಕೆ, ನಾವೀನ್ಯತೆ ಹಾಗೂ ಅವುಗಳ ಸಾಮಾಜಿಕ ಪ್ರಭಾವವನ್ನು ರ‍್ಯಾಂಕಿಂಗ್ ಮಾನದಂಡಗಳಾಗಿ ಪರಿಗಣಿಸುತ್ತಿದ್ದು, ಜಾಗತಿಕವಾಗಿ ಅತ್ಯಂತ ವಿಶ್ವಾಸಾರ್ಹತೆಯನ್ನು ಹೊಂದಿದೆ.
ಜಾಗತಿಕ ವಿಶ್ವವಿದ್ಯಾಲಯಗಳ ಸಮಗ್ರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿವಿ 569ನೆಯ ಸ್ಥಾನ ಗಳಿಸಿದ್ದು, ಏಷ್ಯಾ ವಲಯದಲ್ಲಿ 1437 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 303ನೇ ಸ್ಥಾನಗಳಿಸಿದೆ ಮತ್ತು ಭಾರತದ ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ 56ನೆಯ ಸ್ಥಾನ ಗಿಟ್ಟಿಸಿದೆ. ಭಾರತೀಯ ಶೈಕ್ಷಣಿಕ ಸಂಸ್ಥೆಗಳ ಪಟ್ಟಿಯಲ್ಲಿ ಕರ್ನಾಟಕ ಮೂಲದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಮೊದಲನೇ ಸ್ಥಾನದಲ್ಲಿದ್ದರೆ, ಮಣಿಪಾಲ ವಿಶ್ವವಿದ್ಯಾಲಯ 15ನೆಯ ಸ್ಥಾನದಲ್ಲಿದೆ. ಜೈನ್ ವಿಶ್ವವಿದ್ಯಾಲಯ 48ನೆಯ ಸ್ಥಾನದಲ್ಲಿದ್ದರೆ, ಯೆನೋಪಾಯ ವಿವಿ 49ನೇ ಸ್ಥಾನದಲ್ಲಿದೆ.
ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಪೈಕಿ ಕುವೆಂಪು ವಿಶ್ವವಿದ್ಯಾಲಯ 56ನೆಯ ರ‍್ಯಾಂಕಿಂಗ್’ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ (60), ಮೈಸೂರು ವಿಶ್ವವಿದ್ಯಾಲಯ (80), ಕರ್ನಾಟಕ ವಿಶ್ವವಿದ್ಯಾಲಯ (110) ಮತ್ತು ಮಂಗಳೂರು ವಿಶ್ವವಿದ್ಯಾಲಯ (112)ಗಳು ಸ್ಥಾನ ಪಡೆದುಕೊಂಡಿವೆ.
ಈ ಕುರಿತಂತೆ ಮಾತನಾಡಿದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ, ಸಾಂಪ್ರದಾಯಿಕ ಶೈಕ್ಷಣಿಕ ಕೋರ್ಸ್‌ಗಳನ್ನು ನಡೆಸುವ ಜೊತೆ ಜೊತೆಯಲ್ಲಿಯೇ ಸಂಶೋಧನೆಯಲ್ಲೂ ಗಮನಾರ್ಹ ಸಾಧನೆ ತೋರುತ್ತಿರುವ ಕುವೆಂಪು ವಿವಿ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳೊಂದಿಗೆ ಸ್ಪರ್ಧಿಸಿ ಈ ರ‍್ಯಾಂಕಿಂಗ್ ಪಡೆದಿರುವುದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟವನ್ನು ತೋರಿಸುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಕುಲಸಚಿವ ಪ್ರೊ.ಎಸ್.ಎಸ್. ಪಾಟೀಲ್ ಪ್ರತಿಕ್ರಿಯಿಸಿ, 2010ರಲ್ಲಿ 792ನೇ ರ‍್ಯಾಂಕ್‌ನಲ್ಲಿದ್ದ ವಿವಿಯು, 2020ರಲ್ಲಿ 774ನೇ ರ‍್ಯಾಂಕ್‌ಗೆ ಪಡೆದಿತ್ತು. ಪ್ರಸ್ತುತ ಜಾಗತಿಕ ವಿಶ್ವವಿದ್ಯಾಲಯಗಳ ಪೈಕಿ 569ನೆಯ ಸ್ಥಾನ ಪಡೆದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದಿದ್ದಾರೆ.
ರ‍್ಯಾಂಕಿಂಗ್ ಮಾನದಂಡಗಳ ವಿವರ
1.ಸಂಶೋಧನಾ ಚಟುವಟಿಕೆ – ಸಂಶೋಧನಾ ಲೇಖನಗಳ ಪ್ರಕಟಣೆ, ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಹಭಾಗಿತ್ವ, ಸಂಶೋಧನಾ ಮುಂದಾಳತ್ವ, ವಿವಿಧ ಸಂಶೋಧನಾ ಯೋಜನೆಗಳನ್ನು ಕೈಗೊಳ್ಳುವಿಕೆ.
2. ಆವಿಷ್ಕಾರಗಳು ಉನ್ನತ ಸಂಶೋಧನಾಧಾರಿತ ಜ್ಞಾನ ಸೃಷ್ಟಿ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಪೇಟೆಂಟ್ ಹೊಂದಿರುವಿಕೆ.
3. ಸಾಮಾಜಿಕ ಪ್ರಭಾವ – ಸಂಶೋಧನಾ ಜ್ಞಾನ ಮತ್ತು ಚಟುವಟಿಕೆಗಳ ಸಾಮಾಜಿಕ ಬಳಕೆ, ಪ್ರಭಾವ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post