ತೂದೂರು: ಭಾರತದಲ್ಲಿ ನರೇಂದ್ರ ಮೋದಿ ಅವರು ಮಾಡಿರುವ ಅಭಿವೃದ್ಧಿ ಕಾರ್ಯ ಇಡೀ ವಿಶ್ವಕ್ಕೆ ಗೊತ್ತಿದೆ ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ತೂದೂರಿನಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಸತ್ಯ. ಈ ಜಿಲ್ಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಆಡಳಿತದಲ್ಲಿ ಸಾಧನೆ ಶೂನ್ಯ ಮೂರು ತಿಂಗಳಲ್ಲಿ ನಮ್ಮ ಸಾಧನೆ ಅಪಾರ. ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಸಾಧನೆ ಶೂನ್ಯ ಎಂದು ಟೀಕಿಸಿದರು.
ನಾನು ಸಂಸದನಾದ ಶಿವಮೊಗ್ಗ ಜಿಲ್ಲೆಯಲ್ಲಿ ಕೇವಲ ಮೂರು ತಿಂಗಳಲ್ಲಿ ರೈಲ್ವೆ ಕ್ಷೇತ್ರ ಇರಬಹುದು. ರಾಷ್ಟ್ರೀಯ ಹೆದ್ದಾರಿಗಳು ಇರಬಹುದು. ಯಾವುದೇ ಅಭಿವೃದ್ಧಿ ಇರಬಹುದು. ಇದನ್ನು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಲ್ಲಿ ಶ್ರಮವಹಿಸಿ ಮಾಡಿದ್ದೇನೆ. ತೀರ್ಥಹಳ್ಳಿ ಕ್ಷೇತ್ರದಲ್ಲಿ ಅರಣ್ಯವಾಸಿಗಳಿಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಿರುಕುಳವಾಗುತ್ತಿದ್ದು, ಇದರ ವಿರುದ್ಧ ನಮ್ಮ ಶಾಸಕರಾದ ಆರಗ ಜ್ಞಾನೇಂದ್ರ ಅವರು ಹೋರಾಟಗಳನ್ನು ಮಾಡುತ್ತಾ ರೈತರ ಪರವಾಗಿದ್ದಾರೆ. ಈ ಹಿಂದೆ ಅರಣ್ಯದಲ್ಲಿ ವಾಸಿಸುವವರನ್ನು ತೆರವುಗೊಳಿಸಬೇಕು ಎಂಬ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ನಮ್ಮ ಪಕ್ಷದಿಂದ ಮತ್ತೊಮ್ಮೆ ಮರು ಪರಿಶೀಲಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಕೆವಿಟ್ ಹಾಕಿ ತಡೆ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದರು.
ನಮ್ಮ ಪಕ್ಷ ರೈತರ ಪರವಾಗಿ ಇದೆ ಎಂದು ಇದರಿಂದಲೇ ಗೊತ್ತಾಗುತ್ತಿದೆ. ನರೇಂದ್ರ ಮೋದಿಯವರು ರೈತರ ಪರವಾಗಿದ್ದು, ಮುಂದಿನ 2022ರ ವೇಳೆಗೆ ರೈತರಿಗೆ ಯಾವುದೇ ರೀತಿಯಲ್ಲಿ ಕಷ್ಟಗಳು ಬರದ ಹಾಗೆ ಶಾಶ್ವತವಾಗಿ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ರೈತರಿಗೆ ಪಿಂಚಣಿ ವ್ಯವಸ್ಥೆ, ರೈತರ ಆದಾಯ ದ್ವಿಗುಣಗೊಳಿಸುವುದು, ರೈತರ ಬೆಳೆಗಳು ಹವಾಮಾನದಲ್ಲಿ ಏರುಪೇರಾಗಿ ನಷ್ಟ ಸಂಭವಿಸಿದಾಗ ಪಾಲಿಸಿಗಳು ಸೇರಿದಂತೆ ಮುಂದಿನ ದಿನದಲ್ಲಿ ಶಿವಮೊಗ್ಗ ದೇಶದಲ್ಲಿಯೇ ಮಾದರಿ ಜಿಲ್ಲೆಯಾಗಿ ಹೊರಹೊಮ್ಮಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು.
ಶಾಸಕ ಆರಗ ಜ್ಞಾನೇಂದ್ರ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ದತ್ತಾತ್ರಿ, ಮಾಜಿ ಶಾಸಕ ಬಿ. ಸ್ವಾಮಿರಾವ್, ಮುಖಂಡರಾದ ಅಶೋಕ್ ಮೂರ್ತಿ, ಮದನ್, ಪ್ರಶಾಂತ್ ಕುಕ್ಕೆ ಸೇರಿದಂತೆ ಇನ್ನಿತರರು ಹಾಜರಿದ್ದರು.
Discussion about this post