ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಡೈರಿ ಪ್ರಕರಣದಲ್ಲಿ ಇದನ್ನು ಸೃಷ್ಠಿ ಮಾಡಿದವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಚಾಟಿ ಬೀಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಕ್ಕೂ ಮೊದಲನೆಯದಾಗಿ ನಮ್ಮ ತಂದೆಯವರಿಗೆ ಡೈರಿ ಬರೆಯುವ ಅಭ್ಯಾಸವಿಲ್ಲ. ಎರಡನೆಯದ್ದು, ಡೈರಿಯ ಎಲ್ಲ ಪುಟಗಳಲ್ಲಿ ಸಹಿ ಮಾಡಿರುತ್ತಾರೆಯೇ? ಡೈರಿ ಸೃಷ್ಠಿ ಮಾಡಿದವರಿಗೆ ಕನಿಷ್ಠ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಕಟಕಿಯಾಡಿದ್ದಾರೆ.
ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಐಟಿ ದಾಳಿ ಸಂದರ್ಭದಲ್ಲಿ ಸಿಕ್ಕಿತ್ತು ಎನ್ನಲಾದ ಪ್ರಕರಣವಿಡೀ ವರ್ಷದ ಒಂದು ದೊಡ್ಡ ಜೋಕ್’ನ ವಿಷಯವಾಗಿ ಕಾಣುತ್ತದೆ ಎಂದರು.
ಕಾಂಗ್ರೆಸ್’ನವರು ಚುನಾವಣೆ ಸಂದರ್ಭದಲ್ಲಿ ಅನಗತ್ಯವಾಗಿ ವಿವಾದ ಸೃಷ್ಟಿಸಲು ಹುಡುಕುತ್ತಿರುವ ತಂತ್ರವಾಗಿದೆ. ಆದರೆ ಇದು ದೊಡ್ಡ ಜೋಕ್ ಆಗಿ ಕಾಣಿಸುತ್ತಿದೆ. ಬಿಜೆಪಿಯನ್ನು ದೂರಲು, ಜನರ ಮುಂದೆ ಆರೋಪಿಸಲು ಕಾಂಗ್ರೆಸ್ ಗೆ ಬೇರೆ ವಿಷಯವಿಲ್ಲ. ವಾಮ ಮಾರ್ಗದ ಮೂಲಕ ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವಾಗ ಡೈರಿ ವಿಷಯವನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಜನರು ಇದನ್ನೆಲ್ಲ ನಂಬುವಷ್ಟು ಮೂರ್ಖರಲ್ಲ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ರಾಘವೇಂದ್ರ ಆಗ್ರಹಿಸಿದ್ದಾರೆ.
Discussion about this post