ಸಾಧಿಸುವ ಛಲವೊಂದಿದ್ದರೆ ಇಡೀ ಜಗವನ್ನೇ ಆಳಬಹುದು ಎಂಬಂತೆ ಹುಟ್ಟಿದ ಮೇಲೆ ಏನಾದರೂ ಸಾಧಿಸಿದರೆ ಮಾತ್ರ ನಮ್ಮ ಜೀವನ ಸಾರ್ಥಕ್ಯವನ್ನು ಪಡೆದುಕೊಳ್ಳುತ್ತದೆ ಎಂದು ನಂಬಿದವರು ತೇಜೇಶ್. ಜೆ. ಬಂಗೇರ.ಹೌದು, ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ… ಎಂದು ತಮ್ಮ ಮಾತಿನ ಮೂಲಕ ಭಾರತೀಯರನ್ನು ಬಡಿದೆಬ್ಬಿಸಿದ ಸ್ವಾಮಿ ವಿವೇಕಾನಂದರ ಹುಟ್ಟಿದ ದಿನವಾದ ಜನವರಿ 12ರಂದು ಜನಿಸಿರುವ ತೇಜೇಶ್’ರಿಗೆ ಸಾಧನೆಯ ಹೆಜ್ಜೆಯನ್ನಿಡಲು ಮೊದಲ ಕಾರಣ ಈ ದಿನವೆಂದು ಹೇಳಿದರೂ ತಪ್ಪಾಗಲಾರದು.
ಅದೇ ರೀತಿ ಇವರ ತಂದೆಯವರು ಕೂಡ ಯಕ್ಷಗಾನ, ನಾಟಕ, ಭಜನೆ ಹಾಗೂ ಇನ್ನಿತರ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದವರು. ಇದು ತೇಜೇಶ್ ಮೇಲೆ ಪ್ರಭಾವವನ್ನು ಬೀರಿತು. ಇದರಿಂದಾಗಿ ತನ್ನ ಎಳೆಯ ವಯಸ್ಸಿನಲ್ಲಿಯೇ ಈ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವಂತೆ ಮಾಡಬೇಕೆನ್ನುವ ಹಂಬಲ ಅವರ ಮನದಲ್ಲಿ ಬೇರೂರಿತು.
ವರ್ಷಗಳು ಉರುಳಿದಂತೆ ಇವರ ಶಿಕ್ಷಣದ ಜೀವನ ತೆಂಕನಿಡಿಯೂರಿನ ಅಂಗನವಾಡಿಯಲ್ಲಿ ಪ್ರಾರಂಭಗೊಂಡಿತು. ಆ ಬಳಿಕ ಆದಿವುಡುಪಿ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣದ ಸಂದರ್ಭದಲ್ಲಿ, ತಾನು 2ನೆಯ ತರಗತಿಯಲ್ಲಿ ಇರಬೇಕಾದರೆ ತಾನು ಕೂಡ ತಂದೆಯಂತೆ ಯಕ್ಷಗಾನ ಕಲಾವಿದನಾಗಬೇಕು ಎಂದು ಬನ್ನಂಜೆ ಸಂಜೀವ ಸುವರ್ಣರಿಂದ ಮೊದಲ ಹೆಜ್ಜೆಯನ್ನು ಕಲಿತು ನಂತರ ಸುಮಾರು ನೂರಕ್ಕೂ ಹೆಚ್ಚು ಪಾತ್ರಗಳನ್ನು ಮಾಡುತ್ತಾ ಮಿಂಚಿದ್ದಾರೆ. ಅದೇ ರೀತಿ ಐದನೆಯ ತರಗತಿಯಲ್ಲಿ ಶಾಲೆಯಲ್ಲಿರುವ ನಡೆಯುವ ಭಾಷಣ ಸ್ಪರ್ಧೆಗೆ ಸೇರಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಭಾಗವಹಿಸುವುದರ ಜೊತೆಗೆ ಹಲವಾರು ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಮುಂದೆ ತನ್ನ ಪ್ರೌಢ ಶಿಕ್ಷಣವನ್ನು ಆದಿಉಡುಪಿ ಪ್ರೌಢಶಾಲೆಯಲ್ಲಿ ಮಾಡುತ್ತಿರಬೇಕಾದರೆ 8ನೆಯ ತರಗತಿಯಲ್ಲಿ ಶಾಲಾ ಮಟ್ಟದಲ್ಲಿ ನಿರೂಪಣೆ ಮಾಡುವ ಮೂಲಕ ನಿರೂಪಣಾ ಕ್ಷೇತ್ರಕ್ಕೆ ಹೆಜ್ಜೆ ಇಟ್ಟರು. ಜೊತೆಗೆ 2009ರಲ್ಲಿ ತನ್ನ ಊರಾದ ತೆಂಕನಿಡಿಯೂರಿನ ಹಿಂದೂ ಯುವಸೇನೆಯ ಗಣೇಶೋತ್ಸವದ ಸಂದರ್ಭದಲ್ಲಿ ಮೊದಲ ನಿರೂಪಣೆಯನ್ನು ಮಾಡಿದರು. ಹೀಗೆ ತಮ್ಮನ್ನು ಒಂದೊಂದೇ ಕ್ಷೇತ್ರದಲ್ಲಿ ತೊಡಗಿಸಿಕೊಂಡು 10ನೆಯ ತರಗತಿಗೆ ಬರಬೇಕಾದರೆ ಇವರ ತಂದೆಯ ಆರೋಗ್ಯ ಸ್ವಲ್ಪ ಹದಗೆಡಲಾರಂಭಿಸಿತು. ಆದರೂ ಸಾಧನೆಯ ಹಾದಿಯೊಳು ನೂರೆಂಟು ವಿಘ್ನಗಳೆಂಬಂತೆ, ಇಂತಹ ಸಂದರ್ಭದಲ್ಲೂ ಎಸ್’ಎಸ್’ಎಲ್’ಸಿಯಲ್ಲಿ ಶೇ.80 ಅಂಕವನ್ನು ಪಡೆದರು.
ಸರಕಾರಿ ಪದವಿ ಪೂರ್ವ ಕಾಲೇಜು, ತೆಂಕನಿಡಿಯೂರಿನಲ್ಲಿ ವ್ಯಾಸಂಗ ಮಾಡಬೇಕೆನ್ನುವ ಹಂಬಲದೊಂದಿಗೆ ಪದವಿ ಪೂರ್ವ ಶಿಕ್ಷಣದ ದಾಖಲಾತಿಗೆ ತಮ್ಮ ತಂದೆಯೊಂದಿಗೆ ತೆರಳಿದ್ದರು. ಆದರೆ ಪಿಯುಸಿ ತರಗತಿಗಳು ಆರಂಭವಾಗುವ ಹಿಂದಿನ ದಿನವೇ ತಮ್ಮ ತಂದೆಯನ್ನು ವಿಧಿಯ ಆಟದಿಂದಾಗಿ ಕಳೆದುಕೊಳ್ಳಬೇಕಾಯಿತು. ಆದರೂ ತನ್ನ ಜೀವನದಲ್ಲಿ ಏನೇ ಬಂದರೂ ಇಟ್ಟ ಹೆಜ್ಜೆಯನ್ನು ಹಿಂದಿಡಲಾರೆ ಎಂದು ದೃಢ ಮನಸ್ಸಿನೊಂದಿಗೆ ಮುಂದೆ ಸಾಗುತ್ತಾ ಬೆಳಿಗ್ಗೆ ತನ್ನ ತರಗತಿ ಮುಗಿಸಿ ಮಧ್ಯಾಹ್ನದ ಮೇಲೆ ಕೆಲಸಕ್ಕೆ ತೆರಳಿ ತನ್ನ ತಾಯಿಗೆ ಸ್ವಲ್ಪವೂ ಕೊರತೆಯಾಗದಂತೆ ನೋಡಿಕೊಳ್ಳತೊಡಗಿದರು. ತನ್ನ ತಾಯಿಯ ಸಂಪೂರ್ಣ ಸಹಕಾರ ಪ್ರೀತಿಯಿಂದ ಹಾಗೂ ತಮ್ಮ ಕಠಿಣ ಪರಿಶ್ರಮದೊಂದಿಗೆ ಪಿಯುಸಿಯಲ್ಲಿ 82% ಅಂಕವನ್ನು ಪಡೆದ ಬಳಿಕ ಹಲವಾರು ಕಾರಣಗಳಿಂದಾಗಿ ಒಂದು ವರ್ಷ ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು.
ಆ ಬಳಿಕ ಪಿಪಿಇಸಿ (ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು)ಯಲ್ಲಿ ತಮ್ಮ ಬಿಕಾಂ ಪದವಿಯನ್ನು ತಮ್ಮ ಆತ್ಮೀಯ ಗೆಳೆಯನಾದ ರವಿಕುಮಾರ್ ಜತೆ ಕೆಲಸಕ್ಕೆ ಸೇರಿ ಉತ್ತಮ ಅಂಕಗಳೊಂದಿಗೆ ಪೂರ್ಣಗೊಳಿಸಿದರು. ತಮ್ಮ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಉಡುಪಿಯ ಪ್ರಸಿದ್ಧ ಸುದ್ದಿವಾಹಿನಿಯಾದ ಮುಕ್ತ ವಾಹಿನಿಯಲ್ಲಿ ನಿರೂಪಕರಾಗಿ ಮತ್ತು ಕಾರ್ಯನಿರ್ವಾಹಕರಾಗಿ ಸೇರಿದರು. ದಿನ ಕಳೆದಂತೆ ಇವರಿಗೆ ಕೆಲಸದ ಮೇಲಿದ್ಧ ಶ್ರದ್ಧೆ, ಆಸಕ್ತಿಯನ್ನು ಗಮನಿಸಿ ಇವರನ್ನು ಮುಕ್ತ ಸಂಸ್ಥೆಯು ಕಾರ್ಯಕ್ರಮ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಿದರು. ಸುಮಾರು ಎರಡೂವರೆ ವರ್ಷದ ಮುಕ್ತ ವಾಹಿನಿಯ ಪಯಣದಲ್ಲಿ ಮುಂಜಾನೆ ಮಾತು, ವೀಕ್ಷಕರ ನೋವು ನಲಿವುಗಳ ಕ್ಷಣಗಳನ್ನು ಹಂಚಿಕೊಳ್ಳುವ ನೂರೊಂದು ನೆನಪು ಎದೆಯಾಳದಿಂದ, ಪ್ರತಿಭೆಗಳ ಪಾಲಿನ ಮುಕುಟವಾಗಿರುವ ಅನ್ವೇಷಣ್, ಮುಕ್ತ ವೇದಿಕೆ, ಬಣ್ಣ ಬಣ್ಣದ ಬದುಕು, ಡಿಬೆಟಿಂಗ್ ಟು ನೈಟ್, ಯಕ್ಷ ಕುಸುಮ ಹೀಗೆ ಹತ್ತು ಹಲವು ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾ ಹಲವಾರು ಬಾರಿ ವಾರ್ತಾ ವಾಚಕರಾಗಿಯೂ ಕಾಣಿಸಿಕೊಂಡಿದ್ದಾರೆ. ಇಷ್ಟು ಮಾತ್ರವಲ್ಲದೆ ಸಮಾಜದ ಹಲವಾರು ಸಾಂಸ್ಕೃತಿಕ ವೇದಿಕೆ, ಸಭಾ ಕಾರ್ಯಕ್ರಮ, ಮನರಂಜನಾ ಕಾರ್ಯಕ್ರಮ, ಮೆಹಂದಿ ಕಾರ್ಯಕ್ರಮಗಳಂತಹ ಹಲವಾರು ಕಾರ್ಯಕ್ರಮಗಳಿಗೆ ಕಳೆದ 10-11 ವರ್ಷಗಳಿಂದ ನಿರೂಪಣೆಯನ್ನು ಮಾಡುತ್ತಾ ಹಲವಾರು ಸ್ಪರ್ಧೆಗಳಿಗೆ ತೀರ್ಪುಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಜಾನಪದ ನೃತ್ಯ, ಫಿಲ್ಮಿ ಡ್ಯಾನ್ಸ್, ಡ್ರಾಮಾ ವಿದ್ ಡ್ಯಾನ್ಸ್ ಹೀಗೆ ಹಲವು ಪ್ರಕಾರದ ನೃತ್ಯಗಳನ್ನು ಮಾಡುವುದರ ಜೊತೆಗೆ ಇದುವರೆಗೆ ಸುಮಾರು ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಹಾಸ್ಯ, ಕಥಾ ನಾಯಕ, ಖಳನಾಯಕದಂತಹ ಪಾತ್ರಗಳಲ್ಲಿ ಮಿಂಚಿದ್ದಾರೆ. ಜೊತೆಗೆ ಹಲವಾರು ಭಜನಾ ತಂಡದ ಜೊತೆ ಭಜಕರಾಗಿಯೂ ತೆರಳುವುದರೊಂದಿಗೆ, ಯಾವುದೇ ಒಂದು ಫಲಾಪೇಕ್ಷೆಯನ್ನಿಡದೆ ತನ್ನ ಕೈಯಿಂದ ದುಡ್ಡು ಹೋದರೂ ಚಿಂತೆ ಮಾಡದೆಯೇ ಶ್ರೀದೇವಿ ಭೂದೇವಿ ಶ್ರೀ ವಿಷ್ಣುಮೂರ್ತಿ ಎಂಬ ಹೆಸರಿನ ಕುಣಿತ ಭಜನಾ ಸಂಸ್ಥೆಯನ್ನು ಪ್ರಾರಂಭಿಸಿ ಭಜನಾ ಗುರುಗಳಾಗಿ ಒಳ್ಳೆಯ ತಂಡವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಲವಾರು ಸಾಮಾಜಿಕ ಸೇವಾ ತಂಡದ ಜತೆ ಕೈಜೋಡಿಸುತ್ತಾ, ಟಿವಿ ಚಾನೆಲ್’ಗಳ ಕಾರ್ಯಕ್ರಮದ ಮೂಲಕವೂ ಹಲವಾರು ಆರ್ಥಿಕ ಕಾರ್ಯಕ್ರಮಗಳಿಗೂ ಸ್ಪಂದಿಸುತ್ತಿರುವ ತೇಜೇಶ್ ಅವರು ದಿ.ಜಯ ಹಾಗೂ ಸುಗಂಧಿಯವರ ಏಕೈಕ ಪುತ್ರರಾಗಿದ್ದಾರೆ.
ಇವರಿಗೆ ಪ್ರಾಣಿಗಳೆಂದರೆ ಬಲು ಪ್ರೀತಿ. ತೆರೆದ ಕಿಟಕಿ ಮನೆಯ ಬೆಳಕಿಗೆ, ತೆರೆದ ಪುಸ್ತಕ ಮನದ ಬೆಳಕಿಗೆ ಎಂಬುದನ್ನು ಅರಿತ ಇವರಿಗೆ ಪುಸ್ತಕಗಳನ್ನು ಓದುವ ಹವ್ಯಾಸ ಮಾತ್ರವಲ್ಲದೆ ಸರಿಸುಮಾರು 500ಕ್ಕೂ ಹೆಚ್ಚು ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ. ಇವರಿಗೆ ಬೈಕ್ ಮತ್ತು ಕಾರ್ ಡ್ರೈವಿಂಗ್ ಎಂದರೆ ಬಲು ಇಷ್ಟ. ಕೇವಲ ಕಲಾ ಕ್ಷೇತ್ರದಲ್ಲಿ ಸಾಗುವುದಲ್ಲದೇ ಕ್ರಿಕೆಟ್, ಬಾಲ್ ಬಾಡ್ಮಿಂಟನ್, ಶಟಲ್ ಬ್ಯಾಡ್ಮಿಂಟನ್, ರನ್ನಿಂಗ್ ರೇಸ್’ಗಳಂತಹ ಹಲವಾರು ಕ್ರೀಡಾ ಕ್ಷೇತ್ರಗಳಲ್ಲಿಯೂ ಹಲವಾರು ಪ್ರಶಸ್ತಿಗಳು ಇವರನ್ನು ಅರಸುತ್ತಾ ಬಂದಿವೆ. ಕಲಿಕೆಯಲ್ಲಿ, ಕಲಾಕ್ಷೇತ್ರಗಳಲ್ಲಿ, ಕ್ರೀಡಾ ಕ್ಷೇತ್ರಗಳಲ್ಲಿ ಇವರ ಸಾಧನೆಗಳನ್ನು ಗುರುತಿಸಿ ಸುಮಾರು 150ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಂದ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಕೇವಲ ಉಡುಪಿ ಜಿಲ್ಲೆಯಲ್ಲಿ ಮಾತ್ರವಲ್ಲದೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಹಾಗೂ ಮುಂಬಯಿ ನಗರಿಯಲ್ಲಿ ಕಾರ್ಯಕ್ರಮವನ್ನು ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಪ್ರಸ್ತುತವಾಗಿ Udupi Dream Makers ಎನ್ನುವ Event Management ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ.
ಇವರ ಸಾಧನೆಯ ಹಾದಿಗೆ ಬೆನ್ನೆಲುಬಾಗಿ ನಿಂತವರು: ಮನೆಯೇ ಮೊದಲ ಪಾಠಶಾಲೆ ಎಂಬಂತೆ ಇವರ ಸಾಧನೆಗೆ ನಿಂತವರು ಇವರ ತಂದೆ ದಿ.ಜಯ ಬಂಗೇರ ಹಾಗೂ ತಾಯಿ ಸುಗಂಧಿಯವರ ಕುಟುಂಬದವರ ಜೊತೆಗೆ ಹಿಂದೂ ಯುವಸೇನೆ ತೆಂಕನಿಡಿಯೂರು, ಶ್ರೀದೇವಿ ಭೂದೇವಿ ವಿಷ್ಣುಮೂರ್ತಿ ದೇವಸ್ಥಾನ ಕೆಳಾರ್ಕಳಬೆಟ್ಟು, ಶ್ರೀ ವೀರ ಮಾರುತಿ ಭಜನಾ ಮಂದಿರ ಗರಡಿಮಜಲು, ಹಂಪನಕಟ್ಟೆ ಫ್ರೆಂಡ್ಸ್ ಹಂಪನಕಟ್ಟೆ, ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ಹಾಗೂ ತನ್ನ ಊರಿನ ಗ್ರಾಮಸ್ಥರು. ಇದೀಗ ಸುಮಾರು ಏಳು ವರ್ಷದಿಂದ ತಂದೆ ತೀರಿ ಹೋದ ಬಳಿಕ ತೇಜೇಶ್ ರವರು ತಮ್ಮ ತಾಯಿಯೊಂದಿಗೆ ವಾಸವಿದ್ದು ತಮ್ಮ ಸಾಧನೆಗಳಿಂದ, ತನಗೆ ಲಭಿಸಿದ ಪ್ರಶಸ್ತಿ ಪುರಸ್ಕಾರಗಳಿಂದ ತಮ್ಮ ತಾಯಿ ಬಹಳ ಖುಷಿಯಲ್ಲಿದ್ದಾರೆ ಎಂದು ಹೇಳುತ್ತಾರೆ Tj.
ಇವರ ಈ ಸಾಧನೆಯ ಪಯಣ ಹೀಗೆ ಮುಂದುವರಿಯಲಿ, ಇವರಿಗೆ ಇನ್ನಷ್ಟು ಪ್ರಶಸ್ತಿ ಪುರಸ್ಕಾರಗಳು ಲಭಿಸಲಿ, ಮುಂದಿನ ಭವಿಷ್ಯವು ಉಜ್ವಲವಾಗಿರಲಿ ಎಂದು ನಾವು ಕೂಡ ಆಶಿಸೋಣ…….
ಲೇಖನ-ಚಿತ್ರ-ವೀಡಿಯೋ: ಕಿರಣ್ ಶೆಟ್ಟಿ, ಅತ್ತೂರು
Discussion about this post