ಇಸ್ಲಾಮಾಬಾದ್: ಕಣಿವೆ ರಾಜ್ಯದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ ಕೈವಾಡವಿಲ್ಲ ಎಂದು ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಉಗ್ರರ ದಾಳಿ ನಡೆದು ಐದು ದಿನಗಳ ನಂತರ ಮೌನ ಮುರಿದು ಮಾತನಾಡಿರುವ ಅವರು, ಸೌದಿ ಅರೇಬಿಯದ ರಾಜಕುಮಾರ ನಮ್ಮ ದೇಶಕ್ಕೆ ಬಂದಿದ್ದರು. ಆ ವಿಷಯದಲ್ಲಿ ಸೂಕ್ತ ವ್ಯವಸ್ಥೆಗಳನ್ನು ಮಾಡುವಲ್ಲಿ ನಾವು ನಿರತರಾಗಿದ್ದೆವು. ಹೀಗಾಗಿ ದಾಳಿಯ ಬಗ್ಗೆ ಈವರೆಗೂ ಮಾತನಾಡಿರಲಿಲ್ಲ. ಈಗ ಅವರ ನಿರ್ಗಮನದ ಬಳಿಕ ನಾನು ಮಾತನಾಡುತ್ತಿದ್ದೇನೆ. ಪುಲ್ವಾಮಾದಂತಹ ದಾಳಿಗೆ ನೆರವಾಗುವ ಮೂಲಕ ಸೌದಿ ಪ್ರಿನ್ಸ್ ಭೇಟಿಯನ್ನು ಹಾಳುಗೆಡಹಲು ನಾವು ಬಯಸಿರಲಿಲ್ಲ. ಮಾತ್ರವಲ್ಲ ಇಂತಹ ದಾಳಿಯಿಂದ ನಮಗೆ ಆಗಬೇಕಾದದ್ದು ಏನೂ ಇಲ್ಲ ಎಂದಿದ್ದಾರೆ.
ಒಂದು ವೇಳೆ ಭಾರತ ನಮ್ಮ ದೇಶದ ಮೇಲೆ ದಾಳಿ ಮಾಡಿದರೆ ನಾವೂ ಪ್ರತಿ ದಾಳಿ ನಡೆಸುತ್ತೇವೆ ಎಂದು ಹೇಳಿದ್ದಾರೆಯೇ ವಿನಾ, ಪಾಕ್ ಸರ್ಕಾರದಿಂದ ಈವರೆಗೂ ಯಾವುದೇ ರೀತಿಯ ಅಧಿಕೃತ ಪಶ್ಚಾತ್ತಾಪ ಅಥವಾ ಸಂತಾಪ ಹೇಳಿಕೆ ಬಂದಿಲ್ಲ ಎನ್ನುವುದು ಗಮನಾರ್ಹ.
Discussion about this post