ಕಲ್ಪ ಮೀಡಿಯಾ ಹೌಸ್
ತೀರ್ಥಹಳ್ಳಿ: ಕುವೆಂಪು ಜೈವಿಕ ಧಾಮ ಯೋಜನೆಗೆ ವಿರೋಧ ವ್ಯಕ್ತಪಡಿಸಿರುವ ತಾಲೂಕಿನ ಶೇಡಗಾರು, ತುಂಬ್ರಮನೆ, ಬೆಳ್ಳಂಗಿ ಗ್ರಾಮಗಳ ರೈತರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೆನಾಡಿನ ಜನರ ಬದುಕು ತೂಗುಯ್ಯಾಲೆಯಲ್ಲಿದ್ದು, ಒಂದು ಕಡೆ ಕಸ್ತೂರಿ ರಂಗನ್ ವರದಿ, ಇನ್ನೊಂದು ಕಡೆ ಪಶ್ಚಿಮ ಘಟ್ಟ ಯೋಜನೆ ಹೀಗಾಗಿ ರೈತರ ಬದುಕು ಅತಂತ್ರದಲ್ಲಿದೆ. ಈ ನಡುವೆ ತಾಲೂಕಿನ ಶೇಡಗಾರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುವೆಂಪು ಜೈವಿಕ ಧಾಮ ಯೋಜನೆ ರೈತರ ಬದುಕಿಗೆ ಮಾರಕವಾಗಿದೆ. ಶೇಡಗಾರು, ತುಂಬ್ರಮನೆ, ಬೆಳ್ಳಂಗಿ ವ್ಯಾಪ್ತಿಯಲ್ಲಿ 300 ಕುಟುಂಬಗಳ 2000ಕ್ಕೂ ಹೆಚ್ಚು ಮಂದಿ ಈ ಯೋಜನೆಯಿಂದಾಗಿ ಬದುಕು ಕಳೆದುಕೊಳ್ಳಲಿದ್ದಾರೆ ಆತಂಕ ವ್ಯಕ್ತಪಡಿಸಿದ್ದಾರೆ.
ಬಹುತೇಕ ಸಣ್ಣ ರೈತರು, ಕೂಲಿ ಕಾರ್ಮಿಕರು ಇರುವ ಈ ಗ್ರಾಮಗಳಲ್ಲಿ ಜೈವಿಕ ಧಾಮ ಯೋಜನೆ ಬದುಕು ಕಿತ್ತುಕೊಳ್ಳುವ ಆತಂಕ ಸೃಷ್ಟಿ ಮಾಡಿದೆ. ಈಗಾಗಲೇ ಸರ್ಕಾರ ಸೆಕ್ಷನ್-4 ಜಾರಿ ಮಾಡಿದ್ದು, ಮನೆ-ಆಸ್ತಿ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಅದ್ದರಿಂದ ರೈತರು ದೊಡ್ಡ ಮಟ್ಟದ ಹೋರಾಟಕ್ಕೆ ಸಿದ್ದರಾಗಿದ್ದು, ಮೀಸಲು ಅರಣ್ಯ ವಿರೋಧಿ ಒಕ್ಕೂಟ ಸಮಿತಿ ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಮಿತಿಯ ಅಧ್ಯಕ್ಷ ದಿನೇಶ್ ನಲಿಮಕ್ಕಿ, ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯ ಪಣಿರಾಜ್ ನೇತೃತ್ವದಲ್ಲಿ ಅರಣ್ಯ ಇಲಾಖೆಗೆ ಪರಿಶೀಲನಾ ಅರ್ಜಿ ಸಲ್ಲಿಸಲು ರೈತರು ಸಿದ್ದರಾಗಿದ್ದು, ಅರಣ್ಯ ಇಲಾಖೆ, ಜಿಲ್ಲಾಡಳಿತ, ಶಾಸಕರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಅಗ್ರಹಿಸಿದ್ದಾರೆ.
ಹಿರಿಯ ವಕೀಲ, ಮಾನವ ಹಕ್ಕುಗಳ ಮತ್ತು ರೈತ ಸಮಸ್ಯೆಗಳ ಬಗ್ಗೆ ರಾಜ್ಯ ಮಟ್ಟದ ಹೋರಾಟಗಾರರಾದ ಸುಧೀರ್ ಕುಮಾರ್ ಮುರೊಳ್ಳಿ ಆಗಮಿಸಿ, ರೈತರಿಗೆ ಧೈರ್ಯ ತುಂಬಿ ಕಾನೂನು ಹೋರಾಟಕ್ಕೆ ಸಲಹೆ ನೀಡಿದ್ದಾರೆ.
ಮಲೆನಾಡಿನ ಜ್ವಲಂತ ಸಮಸ್ಯೆ ಮಾನವ ಹಕ್ಕುಗಳ ವಿರುದ್ಧ ಸರ್ಕಾರ ಕಾರ್ಯ ಯೋಜನೆಗಳು ಮತ್ತು ರೈತ ವಿರೋಧಿ ಚಟುವಟಿಕೆಗಳ ವಿರುದ್ಧ ರೈತ ಸಮುದಾಯ ದೊಡ್ಡ ಮಟ್ಟದ ಹೋರಾಟಕ್ಕೆ ಇಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಸದರಿ ಕಾಯಿದೆಯನ್ನು ವಾಪಸ್ ಪಡೆಯದಿದ್ದಲ್ಲಿ ದೊಡ್ಡ ಹೋರಾಟವನ್ನು ಮಾಡಲು ಮುಂದಾಗಿರುವುದಾಗಿ ಅಧಿಕಾರಿಗಳಿಗೆ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post