ಕಲ್ಪ ಮೀಡಿಯಾ ಹೌಸ್ | ಮಹಿಷಿ (ತೀರ್ಥಹಳ್ಳಿ) |
ಜೀವನದಲ್ಲಿ ಅಜ್ಞಾನ ದೂರವಾಗಿ ಜ್ಞಾನ ದೊರಕಬೇಕು ಎಂದರೆ ಮಹಾಮಹಿಮರಾದ ಶ್ರೀ ಸತ್ಯಸಂಧರ ಸೇವೆಯನ್ನು ಮಾಡಬೇಕು ಎಂದು ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಹೇಳಿದರು.
ಮಹಿಷಿ ಕ್ಷೇತ್ರದಲ್ಲಿ ಆಯೋಜನೆಗೊಂಎಇರುವ ಶ್ರೀ ಸತ್ಯಸಂಧತೀರ್ಥರ 229 ನೇ ಆರಾಧನಾ ಮಹೋತ್ಸವದ ಶುಭ ಸಂದರ್ಭದಲ್ಲಿ ವಿಶೇಷ ಅನುಗ್ರಹ ಸಂದೇಶ ನೀಡಿ ಮಾತನಾಡಿದರು.
ಸಕಲ ಸಜ್ಜನರಿಗೂ ಇಂದು ಜ್ಞಾನ, ಭಕ್ತಿ, ವೈರಾಗ್ಯ ದೊಂದಿಗೆ ಆರೋಗ್ಯವೂ ಬೇಕಿದೆ. ಲೌಕಿಕ ಆಮಿಷಗಳಿಗೆ ಒಳಗಾಗಿ ಬದುಕನ್ನು ಹಾಳು ಮಾಡಿಕೊಳ್ಳಲು ಹೋಗದೇ ಸತ್ಯದ ಮಾರ್ಗದಲ್ಲಿ ಸಾಗಿ ಲೋಕಕ್ಕೆ ಮಾದರಿಯಾದ ಗುರು ಶ್ರೀ ಸತ್ಯಸಂಧತೀರ್ಥರನ್ನು ನಂಬಿ ಬದುಕಿ ಎಂದು ಕರೆ ನೀಡಿದರು.
ಮಹಿಷಿಯಲ್ಲಿ ವೃಂದಾವನಸ್ಥರಾಗಿರುವ ಶ್ರೀ ಸತ್ಯಸಂಧರು ಮಹಾಜ್ಞಾನಿ ಮತ್ತು ತಪಸ್ವಿಗಳು. ಗಂಗೆಗೆ ಪ್ರತ್ಯಕ್ಷ ಬಾಗಿನ ಅರ್ಪಿಸಿದ ಶ್ರೇಷ್ಠ ಯತಿಗಳು. ಗಯಾದಲ್ಲಿ ವಿಷ್ಣುವಿನ ಪಾದ ದರುಶನಕ್ಕೆ ಶ್ರೀ ಸತ್ಯಸಂಧರು ಹೋದಾಗ ಬೀಗ ಹಾಕಿದ್ದ ಮಹಾದ್ವಾರ ತಂತಾನೆ ತೆರೆದಿತು. ಅಲ್ಲಿ ಸ್ವಾಮಿಯ ಪಾದ ದರುಶನ ಇವರಿಗಾಯಿತು. ಹೀಗೆ ಇವರ ಮಹಿಮೆ ನೂರಾರು ಇವೆ. ಸಂಸಾರ ಬಂಧನ ಕಳೆದು ಎಲ್ಲರೂ ಮೋಕ್ಷ ಮಾರ್ಗದಲಿ ಸಾಗಬೇಕು ಎಂದರೆ ಶ್ರೀ ಸತ್ಯಸಂಧ ಗುರುಗಳು ತೋರಿದ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳಿದರು.
ಆರಾಧನಾ ಸಂದರ್ಭದಲ್ಲಿ ಗುರುಗಳ ವಿಶೇಷ ಗ್ರಂಥಗಳಾದ ವಿಷ್ಣು ಸಹಸ್ರನಾಮ ಭಾಷ್ಯ, ಸಮುದ್ರ ಸೂಕ್ತ ಮತ್ತು ಧರ್ಮಸೂತ್ರದ ವ್ಯಾಖ್ಯಾನ ಗ್ರಂಥಗಳ ವಿಶೇಷ ಅಧ್ಯಯನ, ಪಾರಾಯಣಾದಿಗಳನು ಮಾಡಬೇಕು. ಆ ಮೂಲಕ ಭಗವಂತನನ್ನು ಕಿಂಚಿತ್ತಾದರೂ ತಿಳಿಯುವ ಯತ್ನ ಮಾಡಬೇಕು. ಇದರಿಂದ ಕರ್ಮಗಳು ನಾಶವಾಗುತ್ತವೆ. ಕಷ್ಟ, ನಷ್ಟಗಳು ದೂರವಾಗುತ್ತವೆ ಎಂದು ಶ್ರೀ ಸತ್ಯಾತ್ಮ ತೀರ್ಥರು ನುಡಿದರು.
ತುಂಗಾ ತೀರದ ಮಹಿಷಿಯಲ್ಲಿ ಆರಾಧನಾ ಉತ್ಸವಕ್ಕಾಗಿ ಸಾವಿರಾರು ಭಕುತರು ಸಂಗಮಿಸಿದ್ದಾರೆ. ಅವರೆಲ್ಲರಿಗೂ ಗುರುಗಳ ಪರಮಾನುಗ್ರಹ ದೊರಕಲಿ ಎಂದು ಶ್ರೀ ಸತ್ಯಾತ್ಮ ತೀರ್ಥರು ಆಶಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಣವ ಬಾಳಗಾರು ಶ್ರೀ ನ್ಯಾಯಾಮೃತ ಪರೀಕ್ಷೆ ನೀಡಿದರು.
Discussion about this post