ಹುಲಿಯೂರುದುರ್ಗ: ಇಂದಿನ ಮಕ್ಕಳಿಗೆ ಓದಲು ಹೆಚ್ಚು ಸವಲತ್ತು ಕೊಟ್ಟರೂ ಸಾಧಾರಣವಾಗಿ ಅಂಕಗಳಿಸುತ್ತಾರೆ ಎಂದು ಹಲವು ಪೋಷಕರು ಆರೋಪಿಸುತ್ತಾರೆ. ಆದರೆ, ಯಾವುದೇ ರೀತಿಯ ಹಣಕಾಸಿನ ಬೆಂಬಲವಿಲ್ಲದಿದ್ದರೂ, ಕಡ್ಲೆಕಾಯಿ ಮಾರಿಕೊಂಡೇ ಓದಿದ ವಿದ್ಯಾರ್ಥಿಯೊಬ್ಬ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 577 ಅಂಕ ಗಳಿಸಿದ್ದಾನೆ.
ಹೌದು… ಹುಲಿಯೂರುದುರ್ಗದ ಬಸ್ ನಿಲ್ದಾಣದಲ್ಲಿ ಕಡ್ಲೆಕಾಯಿ ಮಾಡುವ ಮಂಜೇಶ ಎಂಬ ವಿದ್ಯಾರ್ಥಿಯೇ ಈ ಸಾಧಕ.
ಕುಣಿಗಲ್ ಪಟ್ಟಣದ ಜ್ಞಾನಭಾರತಿ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿ, ಕಾಲೇಜು ಮುಗಿದ ನಂತರ ಕಡ್ಲೆಕಾಯಿ ಮಾರುತ್ತಲೇ ಪಿಯುಸಿಯಲ್ಲಿ ಈ ಹುಡುಗ ಗಳಿಸಿದ್ದು 600 ಕ್ಕೆ 577 ಅಂಕಗಳು.
ಸಂಜೆ ಕಾಲೇಜು ಮುಗಿಸಿಕೊಂಡು ಕುಟುಂಬ ನಿರ್ವಹಣೆಗಾಗಿ ಹುಲಿಯೂರುದುರ್ಗದ ಬಸ್ ನಿಲ್ದಾಣದಲ್ಲಿ ಕಡ್ಲೆಕಾಯಿ ಮಾರುತ್ತಾನೆ. ಹೀಗೆ ಕಷ್ಟಪಟ್ಟು ಕೆಲಸ ಮಾಡುತ್ತಲೇ ಓದಿದ. ಇಷ್ಟು ಕಷ್ಟದಲ್ಲೇ ಈತ ಗಳಿಸಿದ ಅಂಕಗಳು ಹೀಗಿವೆ: ಕನ್ನಡ 97, ಇಂಗ್ಲೀಷ್ 91, ಭೌತಶಾಸ್ತ್ರ98, ರಸಾಯನಶಾಸ್ತ್ರ 99, ಗಣಿತ 98, ಜೀವಶಾಸ್ತ್ರ 94. ಹೀಗೆ ಅಂಕಗಳನ್ನು ಗಳಿಸುವ ಮೂಲಕ ಈತ ರಾಜ್ಯವೇ ತಿರುಗಿ ನೋಡುವಂತೆ ಸಾಧನೆ ಮಾಡಿದ್ದಾನೆ.
ಈಗ ಮಂಜೇಶನಿಗೆ ಪಶುವೈದ್ಯನಾಗಬೇಕೆಂಬ ಆಸೆಯಿದ್ದು, ಆರ್ಥಿಕವಾಗಿ ಶಕ್ತಿಯಿಲ್ಲದ ಕಾರಣ ಈತನ ಸಾಧನೆಗೆ ಹಿನ್ನಡೆಯಾಗುತ್ತಿದೆ. ಹೀಗಾಗಿ, ಓರ್ವ ಶ್ರಮಿಕ ವಿದ್ಯಾರ್ಥಿಯ ಜೀವನ ಉಜ್ವಲವಾಗಲು ದಾನಿಗಳು ಈತನ ನೆರವಿಗೆ ಮುಂದೆ ಬರಬೇಕಿದೆ.
Discussion about this post