ಉಡುಪಿ: ಅಷ್ಟಮಠಗಳಲ್ಲಿ ಒಂದಾದ ಶಿರೂರು ಪೀಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಪಾರ್ಥಿವ ಶರೀರದ ಮೆರವಣಿಗೆ ಹಾಗೂ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದುಬಂದಿದೆ.
ಉಡುಪಿ ಮಠದಿಂದ ಶಿರೂರು ಮೂಲ ಮಠದತ್ತ ಶ್ರೀಗಳ ಶರೀರವನ್ನು ಕೊಂಡೊಯ್ಯುತ್ತಿದ್ದು, ದಾರಿಯುದ್ದಕ್ಕೂ ಜನಸಾಗರವೇ ಸೇರಿದೆ. ಉಡುಪಿಯ ಕೃಷ್ಣ ಮಠದಲ್ಲಿ ಪೂಜೆ ಬಳಿಕ ಪಾರ್ಥಿವ ಶರೀರ ರವಾನೆ. ಹಿರಿಯಡ್ಕದಲ್ಲಿರುವ ಮೂಲ ಮಠದ ಸ್ವರ್ಣಾ ನದಿ ತಟದಲ್ಲಿ ಅಂತಿಮ ಕ್ರಿಯೆ ನೆರವೇರಲಿದೆ.
ಅನುಮಾನಾಸ್ಪದ ಸಾವು ಪ್ರಕರಣ ದಾಖಲು: ತನಿಖೆ ಆರಂಭ
ಇನ್ನು, ಏಕಾಏಕಿ ಅಸ್ವಸ್ಥರಾಗಿ ಇಹಲೋಕ ತ್ಯಜಿಸಿದ ಶ್ರೀಗಳದ್ದು ಅನುಮಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ.
ಶ್ರೀಗಳ ಸಹೋದರ ಲಾತವ್ಯ ಆಚಾರ್ಯ ಅವರು ಹಿರಿಯಡ್ಕ ಪೊಲೀಸ್ ಠಾಣೆಗೆ ಗುರುವಾರ ದೂರು ನೀಡಿದ್ದು, ಶ್ರೀಗಳು ವಿಷ ಸೇವನೆಯಿಂದ ಮೃತಪಟ್ಟಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮಕೈಗೊಳ್ಳುವಂತೆ ಅವರು ಕೋರಿದ್ದಾರೆ.
ಅನುಮಾನಾಸ್ಪದ ಸಾವು ದೂರಿನ ಹಿನ್ನೆಲೆಯಲ್ಲಿ ಶೀರೂರು ಮೂಲ ಮಠದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತನಿಖೆ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಶೀರೂರು ಮಠ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು, ಪೊಲೀಸರು ಶಿರೂರು ಮೂಲ ಮಠದಲ್ಲಿ ಪರಿಶೀಲನೆ, ತನಿಖೆ ನಡೆಸುತ್ತಿದ್ದಾರೆ.
ಶ್ರೀಗಳ ದೇಹದಲ್ಲಿ ವಿಷಕಾರಿ ಅಂಶ ಪತ್ತೆ
ಇನ್ನು, ಶ್ರೀಗಳ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ವಿಷಕಾರಿ ಅಂಶ ದೊರೆತಿರುವ ಮಾಹಿತಿ ಬಹಿರಂಗಗೊಂಡಿದೆ.
ಮಣಿಪಾಲ ಆಸ್ಪತ್ರೆ ಪ್ರಕಟಣೆ ಬಿಡುಗಡೆ ಮಾಡಿದ್ದು, ವಿಷದ ಪ್ರಮಾಣ ಎಷ್ಟರ ಮಟ್ಟಿಗೆ ಇದ್ದಿತು ಎಂಬ ಸ್ಪಷ್ಟ ಮಾಹಿತಿ ಹೊರಬಿದ್ದಿಲ್ಲ.
ಈ ಕುರಿತಂತೆ ಆಸ್ಪತ್ರೆಯ ವೈದ್ಯ ಅವಿನಾಶ್ ಮಾತನಾಡಿದ್ದು, ಶ್ರೀಗಳನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರ ಆರೋಗ್ಯ ತುಂಬಾ ಹದಗೆಟ್ಟಿತ್ತು. ತತಕ್ಷಣ ಸೂಕ್ತ ಚಿಕಿತ್ಸೆ ನೀಡಲಾಯಿತು. ಆದರೆ ಬಹು ಅಂಗಾಗ ವೈಫಲ್ಯದಿಂದ ಅವರು ಮೃತಪಟ್ಟಿದ್ದು, ನಮ್ಮ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿದ ನಂತರ ಹೊಟ್ಟೆಯಲ್ಲಿ ವಿಷಕಾರಕ ಅಂಶ ಇರುವುದು ಪತ್ತೆಯಾಗಿದೆ. ಹೊಟ್ಟೆಯೊಳಗೆ ತೀವ್ರ ರಕ್ತಸ್ರಾವವಾಗಿತ್ತು ಎಂದಿದ್ದಾರೆ.
ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ
ಶ್ರೀಗಳ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಶ್ರೀಗಳ ಅಕಾಲಿಕ ನಿಧನ ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ನಷ್ಟವನ್ನುಂಟು ಮಾಡಿದೆ. ಅವರ ಸಾವಿನ ಬಗ್ಗೆ ಕೇಳಿಬರುತ್ತಿರುವ ಅನುಮಾನಗಳಿಗೆ ಅವಶ್ಯವೆಂದರೆ ತನಿಖೆ ಅನಿವಾರ್ಯ ಎಂದಿದ್ದಾರೆ.
Discussion about this post