ಕಲ್ಪ ಮೀಡಿಯಾ ಹೌಸ್ | ಸಾಗರ |
ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜನಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ಸಿಗಬೇಕು. ಅಧಿಕಾರಿ ನೌಕರ ವರ್ಗ ಪ್ರಜಾಪ್ರಭುತ್ವದ ತಳಹದಿಯಾಗಿರುವ ಪ್ರಜೆಗಳಿಗೆ ಕೈಮುಗಿದು ಕೆಲಸ ಮಾಡಿಕೊಡಬೇಕು. ಅಂತಹ ವಾತಾವರಣ ಸೃಷ್ಟಿ ಮಾಡಬೇಕು ಎನ್ನುವ ಉದ್ದೇಶದಿಂದ ಚುನಾವಣೆ ಸ್ಪರ್ಧೆ ಮಾಡಿದ್ದೇನೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ತೀ.ನ. ಶ್ರೀನಿವಾಸ್ ತಿಳಿಸಿದರು.
ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಾಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಚ್ಚಾರಿತ್ರ್ಯದ ರಾಜಕಾರಣಕ್ಕೆ ಮುನ್ನುಡಿ ಬರೆಯಲು ನಾನು ಸ್ಪರ್ಧೆ ಮಾಡಿದ್ದೇನೆ ಎಂದು ಹೇಳಿದರು.
ಸಾಗರ ಕ್ಷೇತ್ರದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರ 5 ಸಾವಿರ ಕುಟುಂಬವಿದೆ. 63 ವರ್ಷವಾದರೂ ಅವರಿಗೆ ಹಕ್ಕುಪತ್ರ ಸಿಕ್ಕಿಲ್ಲ. ಅರಣ್ಯ ಭೂಮಿ ಸಾಗುವಳಿದಾರರದ್ದು 14 ಸಾವಿರ ಕುಟುಂಬವಿದ್ದು ಅವರ ಎಲ್ಲ ಅರ್ಜಿಯನ್ನು ವಜಾ ಮಾಡಲಾಗಿದೆ. ಸಿಂಗಳೀಕ ಅಭಯಾರಣ್ಯ ಮಾಡಿ ಜನರು ರಸ್ತೆಯಲ್ಲಿ ತಿರುಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ವಿಶ್ವವಿಖ್ಯಾತ ಜೋಗ ಜಲಪಾತವನ್ನು ಸ್ಲಂ ಮಾಡಿದ್ದಾರೆ. ಅದನ್ನು ಸುಂದರಗೊಳಿಸುವುದು ನನ್ನ ಪ್ರಮುಖ ಆದ್ಯತೆಯಾಗಿದೆ ಎಂದರು.
ಮಲೆನಾಡನ್ನು ಸ್ಮಶಾನ ಮಾಡಲು ಹೊರಟಿದ್ದಾರೆ. 38 ಸಾವಿರ ಎಕರೆ ರೈತರ ಹಕ್ಕುಪತ್ರ, ಆರ್.ಟಿಸಿ. ಇರುವ ಜಮೀನು ಅರಣ್ಯ ಎಂದು ಘೋಷಣೆ ಮಾಡಿದ್ದಾರೆ. ರೈತರು ಅವರ ಕುಟುಂಬ ತಮ್ಮ ಹಕ್ಕು ದಕ್ಕಿಸಿಕೊಳ್ಳಲು ನ್ಯಾಯಾಲಯಕ್ಕೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಇದರ ವಿರುದ್ದ ಮಲೆನಾಡಿನ ಶಾಸಕನಾಗಿ ಸದನದಲ್ಲಿ ಗಟ್ಟಿಧ್ವನಿಯಲ್ಲಿ ಮಾತನಾಡುತ್ತೇನೆ. ರಾಜ್ಯಕ್ಕೆ ವಿದ್ಯುತ್ ಕೊಟ್ಟವರು ವಿದ್ಯುತ್ ಸಂಪರ್ಕಕ್ಕೆ ಪರಿತಪಿಸಬೇಕಾಗಿದೆ. ಇನ್ನು ಅನೇಕ ಆಶಯಗಳೊಂದಿಗೆ ಕಣಕ್ಕೆ ಇಳಿಯುತ್ತಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಯ ಶ್ರೀನಿವಾಸ್, ಎಲ್.ವಿ. ಸುಭಾಷ್, ದೇವಪ್ರಸಾದ್, ವಿಶ್ವನಾಥ ಗೌಡ ಅದರಂತೆ, ಕೃಷ್ಣಮೂರ್ತಿ ಹೆಗ್ಗೋಡು, ಪರಶುರಾಮ್, ಗೋಪಾಲಕೃಷ್ಣ ಇನ್ನಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















