‘ಕಳಬೇಡ-ಕೊಲಬೇಡ….ಅಂತರಂಗ ಶುದ್ಧಿ-ಬಹಿರಂಗ ಶುದ್ಧಿ…’ ಎಂಬ ಬಸವಣ್ಣರ ಈ ವಚನಕ್ಕೆ ಇಡೀ ಭಾರತದಲ್ಲಿ ಅಂಕಿತರಾದವರು ಡಾ.ಎಪಿಜೆ ಅಬ್ದುಲ್ ಕಲಾಂಜೀ. ಅಂತರ್ರಾಷ್ಟ್ರೀಯ ಮಟ್ಟದ ಕ್ಷಿಪಣಿ ತಜ್ಞ, ಪುಟ್ಟ ಮಕ್ಕಳ ಪಾಲಿಗೆ ಕಲಾಂ ಅಂಕಲ್, ದೇಶಾಭಿವೃದ್ಧಿ ಕನಸು ಕಂಡ ಹರಿಕಾರ, ಮಿಷನ್ 2020ಯ ಜನಕ ತುಟಿಯ ಮೇಲೆ ಸದಾ ಕಿರುನಗೆಯ, ಸದಾ ತಾಯ್ನಾಡಿಗಾಗಿ ಮಂಥನ ನಡೆಸುತ್ತಾ ವಿಧಿ ಕರೆದ ಒಂದೇ ಕರೆಗೆ ಇಲ್ಲಿದೆಲ್ಲವನ್ನೂ ಬಿಟ್ಟು ಅನಂತತೆಯೆಡೆಗೆ ಸರಸರನೆ ನಡೆದ ಕಲಾಂಜೀ ನೆನಪು ಸದಾ ಕಾಡುತ್ತಲೇ ಇರುತ್ತದೆ. ಇಂಗ್ಲೀಷ್‌ನಲ್ಲಿ ಹೇಳುವಂತೆ ‘ಎ ಕಲೋಸಲ್ ಎಂಡ್‌ಸ್ ದ ಜರ್ನಿ’ ಎಂದರೆ ಈ ಯುಗದಲ್ಲಿ ಒಮ್ಮೆ ಮಾತ್ರ ಜನಿಸುವ ಅದ್ಭುತ ವ್ಯಕ್ತಿತ್ವ ಎಂದರ್ಥ. ಅಂತಹಾ ಕಲಾಂ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷ. ಅವರು ಮರುಹುಟ್ಟು ಪಡೆದು ಮತ್ತೆ ಈ ಪೃಥ್ವಿಯಲಿ ಜನಿಸಲಿ…ತನ್ಮೂಲಕ ಸತ್ಪಾತ್ರರ, ಸನ್ಮಾರ್ಗಿಗಳ, ಸದಾಚಾರಿಗಳ, ಸದ್ವಿವೇಕಿಗಳ, ಸುಶೀಲರ ಪರಂಪರೆ ಮತ್ತೆ ಉದಯಿಸಲಿ ಎಂಬುದೇ ಸಮಸ್ತ ಭಾರತೀಯರ ಆಶಯ.
ದೇಶಾಭಿವೃದ್ಧಿಯನ್ನೇ ಕಲ್‌ಮಾ(ಕಲ್‌ಮಾ ಎಂದರೆ ಉರ್ದು ಭಾಷೆಯಲ್ಲಿ ಮಂತ್ರ ಎಂದರ್ಥ) ಎಂದೇ ಪರಿಭಾವಿಸಿದ್ದ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಭೌತಿಕವಾಗಿ ಇಲ್ಲ ಎಂದು ಊಹಿಸಿಕೊಳ್ಳಲು ಎಂದಿಗೂ ಅಗುವುದೇ ಇಲ್ಲ. ಸಜ್ಜನರಿಗೆ ಯಾವುದೇ ಜಾತಿ, ಧರ್ಮ, ಪಂಗಡದ ಸೀಮಾರೇಖೆ ಇರುವುದಿಲ್ಲ ಎಂಬುದಕ್ಕೆ ಅವರು ಉಪಮೆಯಾಗಿದ್ದರು. ಜುಲೈ 27 ಇಡೀ ದೇಶದ ಕಣ್ಣಾಲಿಗಳಲ್ಲಿ ನೀರಾಡಿಸಿ ಭಾರತಮಾತೆಯ ಮಡಿಲನ್ನು ಬರದಾಗಿಸಿ ಹೋದ, ತದನಂತರವೂ ದೇಶದಲ್ಲಿ ಸೂತಕದ ಛಾಯೆ ಅಡರುವಂತೆ ಬಾಳಿ ಬದುಕಿದ ಕಲಾಂ ಮೇಷ್ಟ್ರು ಮತ್ತೆ ನೆನಪಾಗಿದ್ದಾರೆ.
ಸರಳತೆ, ಸಜ್ಜನಿಕೆ, ಹೊಗಳಿಕೆಗೆ ಹಿಗ್ಗದ, ತೆಗಳಿಕೆಯನ್ನೇ ಕಾಣದ ಇಡೀ ಜಗತ್ತಿನ ಎಲ್ಲರ ಮನಗೆದ್ದ ಈ ಭಾರತೀಯ ಸುಪುತ್ರ ಮತ್ತೆ ಬರಲಿ, ತನ್ಮೂಲಕ ಭಾರತ ಮಾತೆಯ ಮುಕುಟದಲ್ಲಿ ಬಾಕಿ ಉಳಿದ ಮತ್ತೊಂದು ರತ್ನ ಶೋಭಿಸಲಿ ಎಂದು ಪ್ರಾರ್ಥಿಸುತ್ತಾ ‘ಕಲಾಂ’ರಿಗಾಗಿ ನನ್ನ ‘ಕಲಮ್’(ಪೆನ್ನು)ನಿಂದ ನಾಲ್ಕು ‘ಕಾಲಂ’ ಬರೆಯಬೇಕೆಂಬ ತುಡಿತ. ಹೀಗಾದರೂ ನನ್ನಲ್ಲಿರುವ ಅಸೀಮ ದುಃಖವನ್ನು ಹತ್ತಿಕ್ಕುವ ಪುಟ್ಟ ಪ್ರಯತ್ನ.
ಭಾರತ ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ರಕ್ಷಣಾ ವ್ಯವಸ್ಥೆಯಲ್ಲಿ ತನ್ನ ಛಾಪನ್ನು ಮೂಡಿಸಿದೆ, ಪಾಕ್‌ನಂತಹಾ ಪಾತಕಿ ರಾಷ್ಟ್ರಗಳ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿದೆ ಎಂದಾದರೆ ಅದಕ್ಕೆ ಮುಖ್ಯ ಕಾರಣ ಡಾ.ಎಪಿಜೆ ಅಬ್ದುಲ್ ಕಲಾಂ. ಇವರು ಕಂಡು ಹಿಡಿದ ಮಿಸೈಲ್‌ಗಳು ಭಾರತೀಯ ರಕ್ಷಣಾ ಇಲಾಖೆಯ ಗಟ್ಟಿತನದ ಪರಿಭಾಷೆಗೆ ಹೊಸ ಭಾಷ್ಯ ಬರೆದವು. ದೂರಗಾಮಿ ಕ್ಷಿಪಣಿಗಳ ತಯಾರಿಕೆಯಲ್ಲಿ ಅದರ ವಿನ್ಯಾಸದಲ್ಲಿ ಕಲಾಂ ಪಾತ್ರ ಬಹು ಮುಖ್ಯ.
ಈ ದೇಶ ಏನಾದರೂ ಅಭಿವೃದ್ಧಿ ಹೊಂದಿದರೆ ಅದು ಯುವಕರಿಂದ ಮಾತ್ರ ಸಾಧ್ಯ. ‘ಯೂತ್‌ಸ್ ಬಿಲ್‌ಡ್ ದ ಲೀಡರ್‌ಸ್ ಅಂಡ್ ದೆನ್ ದ ಲೀಡರ್‌ಸ್ ಬಿಲ್‌ಡ್ ದ ನೇಷನ್’ ಎಂದು ಬಲವಾಗಿ ನಂಬಿದ್ದವರು ಕಲಾಂ ಮೇಷ್ಟ್ರು. ಹಾಗಾಗಿ ಅವರು ಸದಾ ಮಕ್ಕಳು ಮತ್ತು ಯುವಶಕ್ತಿಯೊಂದಿಗೆ ಬೆರೆಯುತ್ತಿದ್ದರು. ಯುವಶಕ್ತಿ ಮೈಕೆಲ್ ಜಾಕ್ಸನ್, ಅಮೀರ್‌ಖಾನ್‌ರನ್ನು ಎಷ್ಟು ಇಷ್ಟಪಡುತ್ತಿದ್ದರೋ ಅದಕ್ಕಿಂತ ಹತ್ತು ಪಟ್ಟು ಕಲಾಂರ ಮೇಲೆ ಗೌರವ ಇರಿಸಿಕೊಂಡಿದ್ದೂ ಪ್ರಾಯಶಃ ಇದೇ ಕಾರಣಕ್ಕಾಗಿ.
ಅವರು ಬರೆದ ‘ಇಂಡಿಯಾ 2020’ ಪುಸ್ತಕದ ತುಂಬೆಲ್ಲಾ ಅವರು ಯುವಶಕ್ತಿಗೆ ಸಾಕಷ್ಟು ಮಾರ್ಗದರ್ಶನ ನೀಡಿದ್ದಾರೆ. ಆದರೆ ಹೊಸತು ಬಂದಾಕ್ಷಣ ಹಳೆಯದನ್ನು ಮರೆಯುವ ಮಾನವ ಸಹಜವಾಗಿ ಮರೆವಿನಿಂದಾಗಿ ಇಂದಿನ ಯುವಶಕ್ತಿ ಕಲಾಂರ ಈ ಪುಸ್ತಕವನ್ನು ಓದುವ ಪ್ರಯತ್ನವನ್ನೇ ಮಾಡಿಲ್ಲ. ದಟ್ಟ ದರಿದ್ರ ವ್ಯವಸ್ಥೆಯ, ಕೀಳು ಮಟ್ಟದ ರಾಜಕೀಯದ ನಡುವೆ ಇದ್ದರೂ ಅದರ ಲವಲೇಶವನ್ನೂ ಮೈಗೆ ಅಂಟಿಸಿಕೊಳ್ಳದ, ಅದರ ನಡುವೆಯೇ ಐದು ವರ್ಷಗಳ ತಮ್ಮ ರಾಷ್ಟ್ರಪತಿತ್ವದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಕಲಾಂ ಸರ್ವಧರ್ಮೀಯರಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು ಎಂಬುದು ಅವರ ವ್ಯಕ್ತಿತ್ವವನ್ನು ಬಿಂಬಿಸುತ್ತದೆ.
ಸಲಾಂ ಹೊಡೆಯುವ ಸಂಸ್ಕೃತಿಗೆ ಕಲಾಂ ಕಿಡಿಯಾಗುತ್ತಿದ್ದರು. ಒಮ್ಮೆ ಹೀಗೇ ಕಾರ್ಯಕ್ರಮವೊಂದರಲ್ಲಿ ಯಾರೋ ಅಬ್ದುಲ್ ಕಲಾಂರ ಮೇಲಿನ ಗೌರವದಿಂದಲೋ ಅಥವಾ ನಮಗೆ ಅವರ ಮೇಲೆ ಗೌರವವಿದೆ ಎಂದು ಸಭೆಗೆ ತೋರಿಸುವ ಉದ್ದೇಶದಿಂದಲೋ ತುಂಬಿದ ಸಭೆಯಲ್ಲಿ ಕಲಾಂರ ಕಾಲಿಗೆರಗಿ ಆಶೀರ್ವಾದ ಪಡೆಯುವ ಪ್ರಯತ್ನ ಮಾಡಿದ್ದರು. ಇದರಿಂದ ಕೊಂಚ ವಿಚಲಿತರಾದ ಕಲಾಂರವರು ‘ನಿಮ್ಮ ಹೆತ್ತವರ ಕಾಲಿಗೆರಗಿ, ಕಲಿಸಿದ ಗುರುವಿಗೆ ನಮಸ್ಕರಿಸಿ, ಭಾರತಮಾತೆಗೆ ನಮಿಸಿ, ಹಾಗೆಯೇ ಕಾಲಿಗೆರಗಿ ವಿಧೇಯತೆಯನ್ನು ಪ್ರದರ್ಶಿಸುವ ಬದಲು ದೇಶಾಭಿವೃದ್ಧಿಯ ಕಡೆಗೆ ಚಿಂತನೆ ನಡೆಸಿ…ನಾನು ಓರ್ವ ಸಾಮಾನ್ಯ ಮನುಷ್ಯ’ ಎಂದು ಹೇಳಿದ್ದರು.
ಕರಿಬಿಳಿ ಮಿಶ್ರಿತ ಅರ್ಧ ಮುಖವನ್ನು ಮುಚ್ಚುತ್ತಿದ್ದ ಕೇಶರಾಶಿ, ಮುಖದ ಮೇಲೆ ಸದಾ ಮಿನುಗುತ್ತಿದ್ದ ಮಂದಹಾಸ ಕಲಾಂರ ಟ್ರೇಡ್‌ಮಾರ್ಕ್.
ಇಡೀ ಜೀವನವನ್ನು ಬ್ರಹ್ಮಚಾರಿಯಾಗಿಯೇ ಕಳೆದ ಅವರು ಎಂದೂ ಐಹಿಕ ಸುಖ ಭೋಗ ಲಾಲಸೆಗಳ ಕಡೆಗೆ ಮನಸ್ಸು ಮಾಡಲೇ ಇಲ್ಲ. ದೇಶದ ದಾರ್ಶನಿಕರೋರ್ವರು ಹೇಳಿದಂತೆ ಬ್ರಹ್ಮಚಾರಿಗಳು ಈ ದೇಶದಲ್ಲಿ ಸಖತ್ ಪ್ರಸಿದ್ಧರಾಗಿದ್ದಾರಂತೆ. ಅವರು ನೀಡುವ ಉದಾಹರಣೆ ಎಂದರೆ, ಡಾ. ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮುಂಬೈ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ಜಿ.ಎ. ಖೈರ್ನಾರ್, ಚಂದ್ರಶೇಖರ ಆಜಾದ್, ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ, ಆದಿಗುರು ಶ್ರೀ ಶಂಕರಾಚಾರ್ಯರು…ಹೀಗೆ ಅನೇಕ ಸಾಧಕರು ತಂತಮ್ಮ ಕಾಲಾವಧಿಯಲ್ಲಿ ಗುರುತರ ಜವಾಬ್ದಾರಿಯನ್ನು ನಿರ್ವಹಿಸಿ ಇಂದಿಗೂ ಅಜರಾಮರರಾಗಿದ್ದಾರೆ. ಪ್ರಸ್ತುತ ಪ್ರಧಾನಿ ನರೇಂದ್ರಮೋದಿ ಕೂಡಾ ಇದೇ ಹಾದಿಯಲ್ಲಿ ಭಾರತದ ವಿಶ್ವ ಗುರುತ್ವ ಶಕ್ತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ.
ಆದರೆ ಒಂದಂತೂ ಸ್ಪಷ್ಟ, ಕಲಾಂರ ನಿರ್ಗಮನದ ನಂತರ ದೇಶದಲ್ಲಿ ತಾಯ್ನಾಡಿನ ಬಗ್ಗೆ ಚಿಂತಿಸುವ ಯುವ ಪೀಳಿಗೆಯ ಸಂತತಿ ಹೆಚ್ಚಿದೆ. ಮೊದಲು ಐಷಾರಾಮಿ ಬದುಕಿನ ಬಗ್ಗೆ, ಪ್ರೀತಿ ಪ್ರೇಮ ಎಂದು ಕಾಲಹರಣ ಮಾಡುವ ಪ್ರಕ್ರಿಯೆಗಿಂತ ಇತ್ತೀಚಿಗೆ ದೇಶದ ಕುರಿತು ಚಿಂತನೆ ನಡೆಸುವ ಜಾಡ್ಯ, ಗೀಳು ಯುವಶಕ್ತಿಯಲ್ಲಿ ಮೊಳಕೆಯೊಡೆದಿದೆ. ಇದಕ್ಕೆ ಕಾರಣ ಕಲಾಂ ಮೇಷ್ಟ್ರು ಎಂದು ನಿಸ್ಸಂದೇಹವಾಗಿ ಹೇಳಬಹುದು. ಯುವಶಕ್ತಿಯ ಪ್ರೇರಕ ಶಕ್ತಿ, ಚುಂಬಕ ಶಕ್ತಿ ಕಲಾಂ ಎಂದರೆ ಪ್ರಾಯಶಃ ಉತ್ಪ್ರೇಕ್ಷೆಯಾಗಲಾರದು.
ಕಲಾಂಜೀ ರಾಷ್ಟ್ರಪತಿಯಾಗಿದ್ದಾಗ ಪ್ರಸಿದ್ಧರಾದಷ್ಟು ಅವರು ಮಾಜಿಯಾದ ನಂತರವೇ ಸಮಾಜದೊಂದಿಗೆ ಹೆಚ್ಚಾಗಿ ಬೆರೆತು ಪ್ರಸಿದ್ಧಿ ಪಡೆದರು. ಅವರನ್ನು ಕರೆಯದ ದೇಶವಿಲ್ಲ, ಭಾರತದಲ್ಲಿ ಅವರು ಭೇಟಿ ಕೊಡದ ಸ್ಥಳವಿಲ್ಲ. ಅವರು ಅಸ್ತಂಗತರಾದಾಗ ಅಕ್ಷರಶಃ ಶಾಲಾ ಮಕ್ಕಳು ಕಣ್ಣೀರಿಟ್ಟಿದ್ದು ನನಗೆ ಇಂದಿಗೂ ನೆನಪಿದೆ. ಮೈಸೂರಿನ ಶಾಲೆಯೊಂದರ ಮಕ್ಕಳು ಕೈಯಲ್ಲಿ ಮೊಂಬತ್ತಿ ಹಿಡಿದು ಕಣ್ಣಲ್ಲಿ ನೀರು ತುಂಬಿಕೊಂಡು ಅಳುತ್ತಲೇ ಶ್ರದ್ಧಾಂಜಲಿ ಅರ್ಪಿಸಿದ್ದು ನಿಜಕ್ಕೂ ಹೃದಯಸ್ಪರ್ಶಿ. ಅಂತಹಾ ವರ್ಚಸ್ಸನ್ನು ಪ್ರಾಯಶಃ ದೇಶದ ಬೇರಾವ ರಾಷ್ಟ್ರಪತಿಯೂ ಪಡೆದುಕೊಂಡಿರಲಿಲ್ಲ ಎಂಬುದೂ ನಿರ್ವಿವಾದ.
ಮೈಸೂರಿನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ ನಾನು ವರದಿಗಾಗಿ ತೆರಳಿದ್ದ ಸಂದರ್ಭದಲ್ಲಿ ಪುಟ್ಟ ಬಾಲೆಯೊಬ್ಬಳು ಕಲಾಂರಿಗೆ ಕೇಳಿದ ಪ್ರಶ್ನೆ ಅವರೇ ಹೇಳಿಕೊಂಡಂತೆ ಅವರಿಗೆ ಬಹುವಾಗಿ ಕಾಡಿತ್ತಂತೆ…! ಅಂಕಲ್ ನೀವು ಕ್ಷಿಪಣಿ ತಯಾರಿಕೆಗೆ, ವೈಜ್ಞಾನಿಕ ಅಭಿವೃದ್ಧಿಗೆ ನೀಡಿದಷ್ಟು ಗಮನವನ್ನು ಭ್ರಷ್ಟಾಚಾರ ನಿರ್ಮೂಲನೆಗೆ ಯಾಕೆ ನೀಡುತ್ತಿಲ್ಲ…? ಎಂದು. ಅಕ್ಷರಶಃ ಕಲಾಂ ಮೇಷ್ಟ್ರು ಅಂದು ಕ್ಷಣಕಾಲ ನಿರುತ್ತರರಾಗಿದ್ದರು. ತಕ್ಷಣವೇ ಸಾವರಿಸಿಕೊಂಡು ಈ ಕಲಾಂ ಕ್ಷಿಪಣಿ, ಮಿಸೈಲ್‌ಗಳನ್ನು ತಯಾರಿಸಿ ದೇಶದ ರಕ್ಷಣೆಗೆ ಮುಂದಾಗುತ್ತಿದ್ದಾರೆ. ನೀವೆಲ್ಲಾ ಪುಟ್ಟ ಕಲಾಂಗಳು ಇಂದಿನಿಂದಲೇ ಭ್ರಷ್ಟಾಚಾರ ನಿರ್ಮೂಲನೆಗೆ ಮನಸ್ಸು ಮಾಡಿ ದೇಶ ರಕ್ಷಣೆಗೆ ಮುಂದಾಗಿ ಎಂದರು. ಇಡೀ ಸಭೆ ಕರತಾಡನದಿಂದ ಕಿವಿಗಡಚಿಕ್ಕಿತ್ತು.
ಭಾರತ ಸರ್ಕಾರ ಅವರಿಗೆ ಭಾರತರತ್ನದಂತಹ ಅತ್ಯುಚ್ಛ ಪ್ರಶಸ್ತಿ ನೀಡಿ ಗೌರವಿಸಿದೆ. ಆದರೆ ಅವರ ದಿವ್ಯಾತ್ಮಕ್ಕೆ ನಿಜವಾದ ಶಾಂತಿ, ಗೌರವ ಲಭಿಸಬೇಕಾದರೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ನಮ್ಮ ಯುವಶಕ್ತಿ ಮುನ್ನಡೆಯಬೇಕಿದೆ. ಸಿಎಜಿ ವರದಿ ಇತ್ತೀಚಿಗೆ ಹೇಳಿದಂತೆ ಯುದ್ಧ ನಡೆದರೆ ಹತ್ತು ದಿನಗಳಿಗಾಗುವಷ್ಟು ಶಸ್ತ್ರಾಸ್ತ್ರಗಳು ಮಾತ್ರ ನಮ್ಮಲ್ಲಿವೆ ಎಂಬಂತೆ ನಮ್ಮಲ್ಲಿ ಕಲಾಂ ಕನಸು ನನಸಾಗಬೇಕಾದರೆ ನಮ್ಮ ರಕ್ಷಣೆಗೆ ನಾವೇ ದೇಸೀ ಉತ್ಪಾದನೆಗೆ ತೊಡಗಬೇಕು. ಏಕೆಂದರೆ ಇತಿಹಾಸದಲ್ಲಿ ಹೇಳಿದಂತೆ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲೆಂದು ತಮ್ಮ ಅರಮನೆಯ ನೆಲ ಮಾಳಿಗೆಯಲ್ಲಿ ಶಸ್ತ್ರಾಸ್ತ್ರಗಳನ್ನು ದೇಸೀ ಮಾದರಿಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದಳಂತೆ. ನಾವೂ ಕೂಡಾ ಇದೇ ಮಾದರಿಯನ್ನು ಅನುಸರಿಸಬೇಕು. ಕಲಾಂಜೀ ಕನಸನ್ನು ನನಸುಗೊಳಿಸುವ ಮೂಲಕ ಅವರಿಗೆ ನಿಜವಾದ ಗೌರವ ಸಲ್ಲಿಸಬೇಕು. ಇಲ್ಲದಿದ್ದರೆ ಪ್ರತೀ ವರ್ಷ ಅಕ್ಟೋಬರ್ 2ರಂದು ಗಾಂಧೀಜಿ ಫೋಟೋ ಇಟ್ಟು ಗಾಂಧಿ ಜಯಂತಿಯ ಸಭಾ ಕಾರ್ಯಕ್ರಮ ನಡೆಸಿದಂತಾಗುತ್ತದೆ.
ಕೊನೆಯದಾಗಿ, ಕಲಾಂ ಮೇಷ್ಟ್ರೇ ನಿಮಗೊಂದು ಸಲಾಂ. ನಿಮ್ಮ ಬಗ್ಗೆ ಬರೆಯುವಷ್ಟು ಶಕ್ತಿ ನನ್ನ ಕಲಮ್‌ಗಿಲ್ಲ. ಎಷ್ಟೇ ಕಾಲಂ ಬರೆದರೂ ಪುಟ ಸಾಲದು. ನಿಮ್ಮ ಅಭಿವೃದ್ಧಿಯ ಕಲ್‌ಮಾ ನಮಗೆ ವೇದವಾಗಲಿ, ನಿಮ್ಮ ಬೋಧೆ ಉಪನಿಷತ್ ವಾಕ್ಯಗಳಾಗಲಿ. ಭಾರತಮಾತೆಯ ಮುಖದಲ್ಲಿ ನಿಮ್ಮಲ್ಲಿನ ಕಿರುನಗೆ ಸದಾ ಮಾಸದೇ ಮಿನುಗುತ್ತಿರಲಿ ಎಂದು ಪ್ರಾರ್ಥಿಸುತ್ತಾ ನಿಮ್ಮ ದಿವ್ಯಾತ್ಮಕ್ಕೆ ಭಗವಂತ ಚಿರಶಾಂತಿ ನೀಡಲೆಂದು ಕಾಯಾ ವಾಚಾ ಮನಸಾ ಹಾರೈಸುತ್ತೇನೆ. ನಮಸ್ಕಾರ…
-ಕೆ.ಎನ್. ಶಿವಪ್ರಸಾದ್ ಕೆಳದಿ
Discussion about this post