ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಕೊರೋನಾ ಸೋಂಕು ಹರಡದಂತೆ ಲಾಕ್‌ಡೌನ್ ಜಾರಿಗೆ ತಂದ ಹಿನ್ನೆಲೆಯಲ್ಲಿ ಬಡವರಿಗೆ ಹಾಲು ವಿತರಿಸುವ ಯೋಜನೆಯನ್ನು ಶನಿವಾರದಿಂದ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿದ್ದು, ಹಾಲು ವಿತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ಸದಸ್ಯರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಇಲ್ಲಿನ ಪಪಂ ಕಚೇರಿಯಲ್ಲಿ ನಡೆಯಿತು.
ಏಕಪಕ್ಷೀಯ ನಿರ್ಧಾರಕ್ಕೆ ಸದಸ್ಯರು ಗರಂ
ಪಪಂ ವ್ಯಾಪ್ತಿಯ ಕಟ್ಟಡ ಕಾರ್ಮಿಕರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಉಚಿತವಾಗಿ ಹಾಲು ವಿತರಿಸುವಂತೆ ರಾಜ್ಯ ಸರ್ಕಾರ ಆದೇಶ ಮಾಡಿದೆ. ಇಲ್ಲಿನ ಪಪಂ ಮುಖ್ಯಾಧಿಕಾರಿ ಜಗದೀಶ್ ನಾಯ್ಕ್ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದಾರೆ. ಸರ್ವ ಸದಸ್ಯರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಪಪಂ ಸದಸ್ಯರಾದ ವೀರೇಶ್ ಮೇಸ್ತ್ರಿ, ಪ್ರಭುಮೇಸ್ತ್ರಿ, ಅಫ್ರೀನ್ ಮಹೆಬೂಬ್ ಬಾಷಾ, ಪ್ರೇಮಾ ಟೋಕಪ್ಪ, ಸುಲ್ತಾನಾ ಬೇಗಂ ತರಾಟೆಗೆ ತೆಗೆದುಕೊಂಡರು.
ಸಾಮಾಜಿಕ ಅಂತರಕ್ಕೆ ತಿಲಾಂಜಲಿ
ಉಚಿತವಾಗಿ ಹಾಲು ವಿತರಿಸುವ ಯೋಜನೆ ಪಪಂ ಸದಸ್ಯರ ಗಮನಕ್ಕೆ ಬರುತ್ತಿದ್ದಂತೆ ಎಲ್ಲಾ ವಾರ್ಡ್‌ಗಳ ಸದಸ್ಯರು, ಕೊರೋನಾ ಜಾಗೃತ ದಳದ ಸದಸ್ಯರು ಹಾಗೂ ಸಾರ್ವಜನಿಕರು ಒಮ್ಮೆಲೆ ಪಪಂಗೆ ಮುತ್ತಿಗೆ ಹಾಕಿದರು. ಇದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪಪಂ ಮುಖ್ಯಾಧಿಕಾರಿ ಸಮ್ಮುಖದಲ್ಲಿಯೇ ಸಾಮಾಜಿಕ ಅಂತರಕ್ಕೆ ಧಕ್ಕೆ ಉಂಟಾಯಿತು. ಸರ್ಕಾರದ ಆದೇಶಗಳು ಉಲ್ಲಂಘನೆಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಯಾವುದೇ ಪ್ರತಿಕ್ರಿಯೆಗೆ ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
ಹಾಲು ಸಿಗದೆ ಪರದಾಡಿದ ಜನತೆ
ಅಧಿಕೃತ ವಿತರಕರಲ್ಲಿ ಹಾಲಿನ ಸಂಗ್ರಹಣೆ ಇಲ್ಲದೇ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕೇವಲ ಬಿಪಿಎಲ್ ಕುಟುಂಬಸ್ಥರಿಗೆ ಉಚಿತವಾಗಿ ಹಾಲು ವಿತರಿಸುವ ಯೋಜನೆಯಿಂದ ಪಟ್ಟಣದ ಎಪಿಎಲ್ ಪಡಿತರದಾರರು ಸೇರಿದಂತೆ ಹಲವರು ಹಾಲು ಸಿಗದೇ ಪರದಾಡಿದರು. ಮನೆಯಲ್ಲಿ ಚಿಕ್ಕ ಮಕ್ಕಳಿದ್ದಾರೆ ಇದರಿಂದ ತೊಂದರೆ ಎದುರಾಗಿದೆ. ಸರ್ಕಾರದ ಯೋಜನೆಗಳು ಮುಂದಾಲೋಚನೆಯಿಂದ ಸಮರ್ಪಕವಾಗಿ ಇರಬೇಕು. ಪಪಂ ಅಧಿಕಾರಿಗಳು ನಿರ್ವಹಣೆ ಮಾಡುವಲ್ಲಿ ಎಡವಿದ್ದಾರೆ ಎಂದು ಪಟ್ಟಣದ ನಿವಾಸಿ ರಾಘವೇಂದ್ರ, ಶ್ರೀಕಾಂತ್ ಆರೋಪಿಸಿದರು.
ಮಧ್ಯ ಪ್ರವೇಶಿಸಿದ ಪಿಎಸ್‌ಐ
ಹಾಲಿನ ವಿತರಣೆಗೆ ಸಂಬಂಧಿಸಿದಂತೆ ಜನರು ಗುಂಪುಗೂಡತೊಡಗಿದರು. ಸಾರ್ವಜನಿಕರು ಪಪಂ ಮುಖ್ಯಾಧಿಕಾರಿಯೊಂದಿಗೆ ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿದ್ದ ಕೆಲವೇ ಪೊಲೀಸ್ ಸಿಬ್ಬಂದಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನತೆಯಲ್ಲಿ ವಿನಂತಿಸಿದರೂ, ಸಮಸ್ಯೆ ಗಂಭೀರವಾಗ ತೊಡಗಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಟಿ.ಬಿ. ಪ್ರಶಾಂತ್ ಕುಮಾರ್, ನೆರೆದಿದ್ದ ಜನರನ್ನು ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು. ಲಾಕ್‌ಡೌನ್ ಮತ್ತು ಸೆಕ್ಷನ್ 144 ಜಾರಿಯಲ್ಲಿರುವಾಗ ಜನ ಗುಂಪು ಸೇರುವುದು ಕಾನೂನು ಉಲ್ಲಂಘನೆಯಾಗುತ್ತದೆ. ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದರಿಂದ ನೆರೆದಿದ್ದ ಸಾರ್ವಜನಿಕರು ನಿಧಾನವಾಗಿ ಮನೆಯತ್ತ ತೆರಳಿದ ದೃಶ್ಯವೂ ಕಂಡುಬಂತು.
ಮಹಿಳಾ ಸದಸ್ಯೆಗೆ ಏಕವಚನದಲ್ಲಿ ಸಂಬೋಧನೆ
ಹಾಲು ವಿತರಣೆಗೆ ಸಂಬಂಧಿಸಿದಂತೆ ಸದಸ್ಯರ ಗಮನಕ್ಕೆ ತಾರದೇ ಏಕ ಪಕ್ಷಿಯಾವಾಗಿ ಅಧಿಕಾರಿಗಳು ತಗೆದುಕೊಂಡಿರುವ ಕ್ರಮ ಸರಿ ಇಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದಾಗ ಪಪಂ ಹಿರಿಯ ಸದಸ್ಯ ಎಂ.ಡಿ. ಉಮೇಶ್ ಮಧ್ಯ ಪ್ರವೇಶಿಸಿ ಏಕವಚನದಲ್ಲಿ ಸಂಬೋಧಿಸಿದರು. ಮಹಿಳಾ ಸದಸ್ಯರನ್ನು ನಿಕೃಷ್ಟವಾಗಿ ಕಂಡ ಸದಸ್ಯರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಸಮನ್ವಯ ಸಮಿತಿಯ ಗಮನಕ್ಕೆ ತರಲಾಗುವುದು ಎಂದು ಪಪಂ ಸದಸ್ಯೆ ಸುಲ್ತಾನಬೇಗಂ ಸಿರಾಜುದ್ಧೀನ್ ತಿಳಿಸಿದರು.
ಹಾಲು ವಿತರಣೆಯಲ್ಲೂ ರಾಜಕೀಯ
ಸಾರ್ವಜನಿಕರಿಗೆ ಹಾಲು ದೊರೆಯದೇ ಸಮಸ್ಯೆಯಾಗಿದೆ. ಅಧಿಕಾರಿಗಳು ಹಾಲು ವಿತರಣೆಯಲ್ಲಿ ಎಡವಿದ್ದಾರೆ. ಸರ್ಕಾರದ ಸೌಲತ್ತನ್ನು ಪಕ್ಷಾತೀತವಾಗಿ ಪ್ರತಿಯೊಬ್ಬ ಬಡವರಿಗೂ ತಲುಪಿಸುವ ಜವಾಬ್ದಾರಿ ಅಧಿಕಾರಿಗಳಿಗೆ ಇರುತ್ತದೆ. ಸ್ಥಳೀಯ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಕೆಲ ಸದಸ್ಯರ ಮಾತುಗಳನ್ನು ಕೇಳಿ ತಮಗೆ ಬೇಕಾದ ವಾರ್ಡ್‌ಗಳಿಗೆ ಮಾತ್ರ ಹಾಲನ್ನು ಹಂಚಿಕೆ ಮಾಡಿದ್ದು, ಇನ್ನುಳಿದ ವಾರ್ಡ್‌ಗಳಲ್ಲಿ ಮಧ್ಯಾಹ್ನ 12 ಕಳೆದರು ಜನತೆ ಹಾಲು ದೊರೆಯದೇ ಸಮಸ್ಯೆ ಎದುರಿಸುವಂತಾಗಿರುವುದು ಖಂಡನೀಯ.
(ವರದಿ: ಚಂದ್ರಪ್ಪ ತವನಂದಿ)
Get in Touch With Us info@kalpa.news Whatsapp: 9481252093
Discussion about this post