ಕಲ್ಪ ಮೀಡಿಯಾ ಹೌಸ್ | ತುಮಕೂರು |
ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಯಾದರೆ ಅದು ದೇಶದ ಪ್ರಗತಿಯ ಸೂಚಕ ಎಂದು ಸೋಸಲೆ ಶ್ರೀ ವ್ಯಾಸರಾಜರ ಮಠದ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಹೇಳಿದರು.
ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ವ್ಯಾಸರಾಜರ ಮಠದಲ್ಲಿ ಚಾತುರ್ಮಾಸ್ಯ ಸಮಿತಿ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಭಾಗವತ ಮಂಗಳ ಮಹೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

ಹಿರಿಯರು ಮತ್ತು ಗುರು ಸ್ಥಾನದಲ್ಲಿರುವವರು ಯುವ ಸಮುದಾಯಕ್ಕೆ ಹೆಚ್ಚಿನ ಜವಾಬ್ದಾರಿ ನೀಡಬೇಕು. ಹಿಂದೆ ಇದ್ದು ಯುವ ಪಡೆಗೆ ಉತ್ತೇಜನ ನೀಡಿ ಧಾರ್ಮಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಬೆಳೆಯುವಂತೆ ಪ್ರೇರಣೆ ನೀಡಬೇಕು. ಆಗ ಮಾತ್ರ ಸನಾತನ ಭಾರತೀಯ ಹಿಂದು ಧರ್ಮ, ಮಧ್ವಮತ, ಶ್ರೀಮದ್ ಆನಂದತೀರ್ಥರ ತತ್ವ, ವಿಚಾರ ಮತ್ತು ಹಾಕಿಕೊಟ್ಟ ಸಂಪ್ರದಾಯಗಳು ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿ ಸಲಹೆ ನೀಡಿದರು.
ತಾಯಂದಿರ ಕೊಡುಗೆ ಅಪಾರ
ಮನೆ, ಮನೆಯಲ್ಲಿ ಧರ್ಮ ಉಳಿಯಬೇಕು ಎಂದರೆ ಅದಕ್ಕೆ ತಾಯಂದಿರು, ಮಾತೆಯರ ಕೊಡುಗೆ ಅಪಾರವಾಗಿದೆ. ಚಾತುರ್ಮಾಸ ಅವಧಿಯಲ್ಲಿ ನೂರಾರು ಮಾತೆಯರು ಸೇವೆ ಸಲ್ಲಿಸಿದ್ದಾರೆ. ಅವರೆಲ್ಲರ ಮನೆಗಳು, ವಂಶಗಳು ಬೆಳಗಲಿ ಎಂದು ಸ್ವಾಮೀಜಿ ಹಾರೈಸಿದರು.
ಇದೇ ಸಂದರ್ಭ ವಿದ್ವಾನ್ ಮರುತಾಚಾರ್ಯ ಅವರನ್ನು ತುಮಕೂರು ವ್ಯಾಸರಾಜರ ಮಠದ ಪೀಠಾಧಿಕಾರಿಯನ್ನಾಗಿ ಶ್ರೀಗಳು ಘೋಷಣೆ ಮಾಡಿ ಅವರಿಗೆ ಗೌರವಾರ್ಪಣೆ ಮಾಡಿದರು. ಮಠದ ದಿವಾನರಾದ ವಿದ್ವಾನ್ ಬ್ರಹ್ಮಣ್ಯಾಚಾರ್, ಬಲಸೇವೆ ಕೃಷ್ಣಾಚಾರ್, ಚಾತುರ್ಮಾಸ ಸಮಿತಿ ಪ್ರಮುಖರಾದ ಜಯಸಿಂಹರಾವ್, ಕೌಶಿಕ್ ಸಿಂಹ, ಎಲ್.ಎಂ. ಕೃಷ್ಣ, ಹರೀಶ್, ಸತ್ಯನಾರಾಯಣ ರಾವ್, ವಸುಧಾ ಇತರರು ಹಾಜರಿದ್ದರು.

ಚಾತುರ್ಮಾಸ್ಯ ಸೀಮೋಲ್ಲಂಘನ ಅಂಗವಾಗಿ ಶ್ರೀ ವಿದ್ಯಾಶ್ರೀಶ ತೀರ್ಥರು ಸಮೀಪದ ದೇವರಾಯನ ದುರ್ಗ ಮತ್ತು ಸೀಬಿ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ನರಸಿಂಹ ದೇವರ ದರ್ಶನ ಪಡೆದರು. ನೂರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.
ಸಮಸ್ತ ಕಾಣಿಗೆ ಸಮರ್ಪಣೆ
ತುಮಕೂರಿನ ಚಾತುರ್ಮಾಸ್ಯ ವ್ರತದ 46 ದಿನಗಳ ಅವಧಿಯಲ್ಲಿ ತಮಗೆ ಭಕ್ತರು ಅರ್ಪಿಸಿದ ಪಾದಪೂಜೆ, ಭಿಕ್ಷೆ ಸೇರಿದಂತೆ ಹಲವು ಹತ್ತು ರೀತಿಯ ಕಾಣಿಕೆಯ ಸಂಗ್ರಹವನ್ನೆಲ್ಲಾ ಸ್ಥಳೀಯ ವ್ಯಾಸರಾಜರ ಮಠದ ಅಭಿವೃದ್ಧಿ ನಿಧಿಗೆ ಸಮರ್ಪಣೆ ಮಾಡಿದ್ದು ವಿಶೇಷವಾಗಿ ಗಮನ ಸೆಳೆಯಿತು. ಭಕ್ತರು ಶ್ರೀಗಳಿಗೆ ನಡೆಸಿದ ನಾಣ್ಯ ಮತ್ತು ಧಾನ್ಯಗಳ ತುಲಾಭಾರದ ನಂತರ `ಕಾಣಿಗೆ ಸಮರ್ಪಣೆ’ ವಿಶೇಷವಾಗಿತ್ತು.
ಸ್ಥಳೀಯ ಭಕ್ತರು ಪ್ರತಿದಿನವೂ ವಿಶೇಷವಾಗಿ ಸಂಸ್ಥಾನ ಪ್ರತಿಮಾ ಶ್ರೀ ಗೋಪಾಲಕೃಷ್ಣ ದೇವರ ಮತ್ತು ಪ್ರಾಣದೇವರ ಸೇವೆಯೊಂದಿಗೆ ಗುರುಭಕ್ತಿಯನ್ನೂ ಸಮರ್ಪಣೆ ಮಾಡಿದ್ದಾರೆ. ಹಾಗಾಗಿ ಇಲ್ಲಿನ ಕಾಣಿಕೆಗಳೆಲ್ಲವೂ ನಮಗೆ ಸೇರುವಂಥದ್ದಲ್ಲ. ಇವು ಇಲ್ಲಿನ ಮಠದ ಸಮಗ್ರ ಪ್ರಗತಿಗೆ ಬಳಕೆಯಾದರೆ ಮಾತ್ರ ನಮ್ಮ ಉಪಾಸ್ಯ ಮೂರ್ತಿ ಶ್ರೀ ಗೋಪಾಲಕೃಷ್ಣ ದೇವರಿಗೆ ಸಂಪ್ರೀತಿಯಾಗುತ್ತದೆ ಎಂದು ಶ್ರೀಗಳು ಭಾವುಕರಾಗಿ ನುಡಿದರು. ನೂರಾರು ಪಂಡಿತರು, ವಿದ್ವಾಂಸರು ಇದಕ್ಕೆ ಸಾಕ್ಷಿಯಾದರು.









Discussion about this post