ಕಲ್ಪ ಮೀಡಿಯಾ ಹೌಸ್ | ತುಮಕೂರು |
ತುಮಕೂರು ಜಿಲ್ಲೆಯ ಬಂಡಿಹಳ್ಳಿ ಗೇಟ್, ದೊಣ್ಣೆರೆ ಗೇಟ್ ಮತ್ತು ಬಾಡೇನಹಳ್ಳಿ ಲೆವೆಲ್ ಕ್ರಾಸಿಂಗ್ ಸಂಖ್ಯೆ 60, 61 ಮತ್ತು 64 ಕ್ಕೆ ಬದಲಾಗಿ ನಿರ್ಮಿಸಲಾದ ಮೂರು ರಸ್ತೆ ಕೆಳ ಸೇತುವೆಗಳನ್ನು (RUB) ಇಂದು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ #Minister Somanna ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ಹೊಸ ಕೆಳಸೇತುವೆಗಳ #Railway Underbridge ನಿರ್ಮಾಣದಿಂದ ಜನರು ಇನ್ನು ಮುಂದೆ ರೈಲ್ವೆ ಗೇಟ್‌ಗಳಲ್ಲಿ ಕಾಯಬೇಕಾಗಿರದ ಕಾರಣ, ಅವರ ಅಮೂಲ್ಯ ಸಮಯವನ್ನು ಉಳಿಸುವುದರ ಜೊತೆಗೆ, ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿ ರಸ್ತೆ ಬಳಕೆದಾರರ ಮತ್ತು ರೈಲುಗಳ ಸುರಕ್ಷತೆಯನ್ನು ಸುಧಾರಿಸುತ್ತದೆ ಎಂದು ಹೇಳಿದರು.
ಈ ಪ್ರದೇಶದ 31 ಆರ್‌ಒಬಿಗಳು ಮತ್ತು ಆರ್‌ಯುಬಿ ಯೋಜನೆಗಳಲ್ಲಿ 27 ಯೋಜನೆಗಳ ಕಾಮಗಾರಿಗಳು ಉತ್ತಮವಾಗಿ ಪ್ರಗತಿಯಲ್ಲಿವೆ ಮತ್ತು ಉಳಿದ 4 ಕಾಮಗಾರಿಗಳನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಡಿಸೆಂಬರ್ 2026 ರೊಳಗೆ ಎಲ್ಲವೂ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಾರ್ವಜನಿಕರ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ಎಲ್ಲಾ ರಸ್ತೆ ಕೆಳಸೇತುವೆಗಳಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕರ್ನಾಟಕದಾದ್ಯಂತ ಸುಮಾರು ₹52,000 ಕೋಟಿ ಮೌಲ್ಯದ ರೈಲ್ವೆ ಅಭಿವೃದ್ಧಿ ಕಾರ್ಯಗಳು ಪ್ರಸ್ತುತ ಚಾಲ್ತಿಯಲ್ಲಿವೆ. ಇದಕ್ಕೂ ಮುನ್ನ, ಅವರು ಎಲ್‌ಸಿ ಸಂಖ್ಯೆ 88 ಮತ್ತು 86 ರ ಬದಲಿಗೆ ಬಿದೆರುಗುಡಿ/ಹೊನ್ನವಳ್ಳಿ ಮತ್ತು ಶಾರದಾ ನಗರದಲ್ಲಿನ ರಸ್ತೆ ಮೇಲ್ಸೇತುವೆಗಳನ್ನು ಪರಿಶೀಲಿಸಿ ನಂತರ. ಎಲ್‌ಸಿ ಸಂಖ್ಯೆ 58 (ನಿಟ್ಟೂರು-ಮೈಸೂರು ಗೇಟ್) ಮತ್ತು ಎಲ್‌ಸಿ ಸಂಖ್ಯೆ 59 (ನಂದಿಹಳ್ಳಿ ಗೇಟ್) ನಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿಗಳನ್ನು ಸಹ ಪರಿಶೀಲಿಸಿದರು. ಇದಲ್ಲದೆ, ಗುಬ್ಬಿ ರೈಲು ನಿಲ್ದಾಣದಲ್ಲಿ ಅಂದಾಜು ₹17.48 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಲಘು ರಸ್ತೆ ಮೇಲ್ಸೇತುವೆಗಳನ್ನು ((ROB) ಅವರು ಪರಿಶೀಲಿಸಿದರು.
ಬಂಡಿಹಳ್ಳಿ ಗೇಟ್‌ನಲ್ಲಿ ರಸ್ತೆ ಕೆಳ ಸೇತುವೆ ರೂ. 10.5 ಕೋಟಿ, ಬಾಡೇನಹಳ್ಳಿ ಗೇಟ್ ಮತ್ತು ದೊನ್ನೆರೆ ಗೇಟ್‌ನಲ್ಲಿ ಕ್ರಮವಾಗಿ ರೂ. 6.5 ಕೋಟಿ ಮತ್ತು ರೂ.5.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರೈಲ್ವೆ ಅಭಿವೃದ್ಧಿಯು ಹೊಸ ಹಂತಕ್ಕೆ ತಲುಪಿದ್ದು, ಅನೇಕ ಬಾಕಿ ಕೆಲಸಗಳು ಪೂರ್ಣಗೊಂಡಿವೆ ಎಂದ ಸಚಿವರು ಪ್ರಸ್ತಾವಿತ ತುಮಕೂರು-ಬೆಂಗಳೂರು ಚತುಷ್ಪಥ ರೈಲು ಮಾರ್ಗ ಯೋಜನೆಯು ಸಂಪರ್ಕವನ್ನು ಸುಧಾರಿಸುವ ಮೂಲಕ ತುಮಕೂರಿನ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಪ್ರವೀಣ್ ಕಾತರಕಿ, ಹಿರಿಯ ವಿಭಾಗೀಯ ಅಭಿಯಂತರು/ಸಮನ್ವಯ, ರಾಜೀವ್ ಶರ್ಮಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಕೃಷ್ಣ ಚೈತನ್ಯ ಮತ್ತು ಇತರ ಹಿರಿಯ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















