ಮಡ್ಸರ್(ಮಧ್ಯಪ್ರದೇಶ): 8 ವರ್ಷದ ಬಾಲಕಿಯ ಮೇಲೆ ಕ್ರೂರವಾಗಿ ಅತ್ಯಾಚಾರ ನಡೆಸಿ, ಅತ್ಯಂತ ವಿಕೃತವಾಗಿ ಬಾಲಕಿಯನ್ನು ಹತ್ಯೆ ಮಾಡಿದ ಇಬ್ಬರು ಅಪರಾಧಿಗಳಿಗೆ ಸ್ಥಳೀಯ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ, ತೀರ್ಪು ನೀಡಿದೆ.
ಈ ಕುರಿತಂತೆ ಇಂದು ತೀರ್ಪು ನೀಡಿರುವ ನ್ಯಾಯಾಲಯ, ಇಬ್ಬರು ಆರೋಪಿಗಳನ್ನು ಗಲ್ಲಿಗೇರಿಸುವಂತೆ ಆದೇಶಿಸಿದೆ.
ಪ್ರಕರಣ ಸಂಬಂಧ ವಿಶೇಷ ತನಿಖಾ ದಳ ತನಿಖೆ ನಡೆಸಿದ್ದು, ಭಯ್ಯು(20), ಆಸಿಫ್(24) ಎಂಬ ಆರೋಪಿಗಳ ವಿರುದ್ಧ 35 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿತ್ತು. ಅಲ್ಲದೇ ಪ್ರಕರಣದಲ್ಲಿ 100 ದಾಖಲೆಗಳು ಹಾಗೂ 92 ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಅಲ್ಲದೇ, ಇದೊಂದು ಘೋರಾತಿಘೋರ ಕೃತ್ಯ ಎಂದು ನ್ಯಾಯಾಲಯ ಕಠಿಣವಾಗಿ ಹೇಳಿದೆ.
ಪ್ರಕರಣದ ವಿಚಾರಣೆ ವೇಳೆ ಅಪರಾಧಕ್ಕೆ ಬಳಸಿದ ಸುಮಾರು 50 ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಾಲಕಿಯ ಕತ್ತು ಸೀಳಿ, ವಿಕೃತಿ ಮೆರೆದು ಈ ದುರುಳರು ಹತ್ಯೆ ಮಾಡಿದ್ದರು ಎಂದು ವರದಿಯಲ್ಲಿ ದಾಖಲಿಸಲಾಗಿದೆ.
ಅಪರಾಧಿಗಳ ವಿರುದ್ಧ ಐಪಿಸಿ ಸೆಕ್ಷನ್ 376ಡಿ(ಸಾಮೂಹಿಕ ಅತ್ಯಾಚಾರ), 366(ಅಪಹರಣ ಹಾಗೂ ಬಲವಂತ), 363(ಅಪಹರಣ), ಪೊಕ್ಸೋ ಸೇರಿದಂತೆ ಕಠಿಣ ಸೆಕ್ಷನ್‌ಗಳನ್ನು ಇವರು ವಿರುದ್ಧ ದಾಖಲಿಸಲಾಗಿತ್ತು.
Discussion about this post