ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-12 |
ಭಾರತೀಯರಿಗೂ ಹಾಗೂ ಆ ಹೆಸರಿಗೂ ಒಂದು ರೀತಿಯ ಅವಿನಾಭಾವ ಸಂಬಂಧ ಯಾವುದಾದರೂ ಒಂದು ರೀತಿಯಲ್ಲಿ ಇದ್ದೇ ಇರುತ್ತದೆ. ಯಾಕೆಂದರೆ ಆ ಹೆಸರಿನ ಮೌಲ್ಯವೇ ಅಂತಹುದ್ದು… ಅದೇ ಟಾಟಾ… ಅಂದರೆ ಹೆಮ್ಮೆಯ ರತನ್ ಟಾಟಾ.
ಹೌದು… ದೇಶದ ಎಲ್ಲರ ಮನೆಯಲ್ಲೂ ಕೂಡ ಒಂದಾದರು ಟಾಟಾ ಉತ್ಪನ್ನ ಇದ್ದೇ ಇರುತ್ತದೆ. ಕಾರಣ ಈ ಸಂಸ್ಥೆಯ ಸೇವೆಯೇ ಅಂತಹುದ್ದು.
ಮೂಲತಃವಾಗಿ ಟಾಟಾ ಸಂಸ್ಥೆಯನ್ನು ಅಷ್ಟು ಉನ್ನತ ಮಟ್ಟಕ್ಕೆ ಕರೆದೊಯ್ದವರು ರತನ್ ನೇವಲ್ ಟಾಟಾ. ಇವರು ಭಾರತದ ಅತ್ಯಂತ ಗೌರವಾನ್ವಿತ ದೂರದೃಷ್ಟಿಯ ವ್ಯಾಪಾರ ನಾಯಕರಲ್ಲಿ ಓರ್ವರು.
ಪ್ರತಿಷ್ಠಿತ ಟಾಟಾ ಕುಟುಂಬದಲ್ಲಿ ಡಿಸೆಂಬರ್ 28, 1937 ರಂದು ಜನಿಸಿದ ಇವರು ಟಾಟಾ ಸಮೂಹವನ್ನು ಸಂಘಟಿತ ಸಂಸ್ಥೆಯನ್ನಾಗಿ ಮಾಡಲು ಪ್ರಮುಖ ಪಾತ್ರ ವಹಿಸಿದರು. ಇವರ ಮಾರ್ಗದರ್ಶನದಲ್ಲಿ ಟಾಟಾ ಸಂಸ್ಥೆಯ ವಾಹನ, ಉಕ್ಕು, ತಂತ್ರಜ್ಞಾನ ಮತ್ತು ತಂಡ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗಳನ್ನು ಮಾಡಿದೆ. ರತನ್ ಟಾಟಾ ಅವರ ತಂದೆ ನೇವಲ್ ಟಾಟಾ ಭಾರತದ ವಾಯುಯಾನ ಉದ್ಯಮದ ಸಂಸ್ಥಾಪಕ ಜೆಆರ್’ಡಿ ಟಾಟಾ ಅವರ ಕಿರಿಯ ಸಹೋದರ.
ರತನ್ ಟಾಟಾ ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನ ಕ್ಯಾಂಪಿಯನ್ ಶಾಲೆಯಲ್ಲಿ 8ನೇ ತರಗತಿಯವರೆಗೆ ಪೂರ್ಣಗೊಳಿಸಿದರು. ನಂತರ ಅವರು ಮುಂಬೈನ ಕ್ಯಾಥೆಡ್ರಲ್ ಮತ್ತು ಜಾನ್ ಕಾನನ್ ಶಾಲೆ, ಬಪ್ ಕಾಟನ್ ಶಾಲೆ ಮತ್ತು ನ್ಯೂಯಾರ್ಕ್ ನಗರದ ರಿವರ್ಡೇಲ್ ಕಂಟ್ರಿ ಸ್ಕೂಲಿನಲ್ಲಿ ತಮ್ಮ ಅಧ್ಯಯನವನ್ನು ಮುಂದುವರೆಸಿದರು. ತರುವಾಯ, ಅವರು ಯುನೈಟೆಡ್ ಸ್ಟೇಟ್ ಕಾರ್ವೆಲ್ ವಿಶ್ವವಿದ್ಯಾನಿಲಯದಲ್ಲ ತಮ್ಮ ಪದವಿ ಪೂರ್ವ ಅಧ್ಯಯನವನ್ನು ಮುಂದುವರೆಸಿದರು.
ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅವರು 1961ರಲ್ಲಿ ಟಾಟಾ ಗ್ರೂಪ್ ಸೇರಿದರು. 2008ರಲ್ಲಿ ಫೋರ್ಡ್ ಮೋಟಾರ್ ಕಂಪೆನಿಯಿಂದ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು ರತನ್ ಟಾಟಾ ಅವರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾಗಿದೆ.
ಇದರೊಂದಿಗೆ ಟೆಟ್ಲಿ ಟೀ ಮತ್ತು ಕೋರಸ್ ಆಂಗ್ಲೋ ಡಚ್ ಕಂಪೆನಿಯನ್ನು ಟಾಟಾ ಸ್ಟೀಲ್ ಸ್ವಾಧೀನಪಡಿಸಿಕೊಂಡಿದ್ದ ಮತ್ತೊಂದು ಪ್ರಮುಖ ಸಾಧನೆ. ಇದು ಟಾಟಾ ಗ್ರೂಪ್ ಅನ್ನು ಜಾಗತಿಕ ನಕ್ಷೆಯಲ್ಲಿ ಇರಿಸಿತು.
ಮಧ್ಯಮ ವರ್ಗದವರು ಮೂರ್ನಾಲ್ಕು ಜನ ಒಂದೇ ಬೈಕ್’ನಲ್ಲೇ ಹೋಗುತ್ತಿದ್ದನ್ನು ನೋಡಿದ ರತನ್ ಟಾಟಾ ಅವರು ಜನಸಾಮಾನ್ಯರಿಗೂ ಕೈಗೆಟುಕುವ ದರದಲ್ಲಿ ನ್ಯಾನೋ ಮತ್ತು ಇಂಡಿಕಾ ಕಾರುಗಳನ್ನು ನಿರ್ಮಿಸಿದರು. ಇದು ನವೀನ ಮನೋಭಾವ ಮತ್ತು ಸಾಮಾಜಿಕ ಜವಾಬ್ದಾರಿಗೆ ಅವರ ಬದ್ಧತೆಗೆ ಉದಾಹರಣೆಯಾಗಿದೆ.
ಅವರ ವ್ಯಾಪಾರ ಸಾಧನೆಗಳ ಹೊರತಾಗಿ, ರತನ್ ಟಾಟಾ ಅವರು ತಮ್ಮ ಸರಳ ವ್ಯಕ್ತಿತ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಅವರ ಹತ್ತಿರ ಎಷ್ಟೇ ಕೋಟಿ ಕೋಟಿ ಸಂಪತ್ತಿದ್ದರೂ ಸರಳತೆಯಿಂದ ಜೀವಿಸುತ್ತಿದ್ದರು. ಸಾಮಾನ್ಯ ಒಂದು ಅಪಾಟ್ಮೆಂಟ್’ನಲ್ಲಿ ಒಂಟಿಯಾಗಿ ತಮ್ಮ ಎರಡು ಜರ್ಮನ್ ಶೆಫರ್ಡ್ ನಾಯಿಗಳ ಜೊತೆ ಜೀವಿಸುತ್ತಿದ್ದರು. ಅವರ ಜೀವನ ಶೈಲಿ ತುಂಬಾ ಸರಳವಾಗಿತ್ತು. ಅವರು ಯಾವಾಗಲೂ ವೈಯಕ್ತಿಕ ಲಾಭಕ್ಕಿಂತ ಹೆಚ್ಚಾಗಿ ಇತರರ ಕಲ್ಯಾಣವನ್ನು ಬಯಸುತ್ತಿದ್ದರು.
ಮುಂಬೈನ ತಾಜ್ ಹೋಟೆಲ್ ಭಯೋತ್ಪಾದಕರ ದಾಳಿಗೆ ತುತ್ತಾದಾಗ ಹೊಟೇಲಿನ ನೌಕರರಿಗೆ ಅವರೇ ಕುತ್ತಾಗಿ ನೌಕರರ ಸಂಬಳವನ್ನು ಕೊಟ್ಟಿದ್ದರು. ಅಲ್ಲದೇ, ಅಲ್ಲಿಯೇ ಅಕ್ಕಪಕ್ಕ ತಿಂಡಿ ತಿನಿಸುಗಳನ್ನು ಮತ್ತು ಇತ್ಯಾದಿಗಳನ್ನು ಮಾರುತ್ತಿದ್ದವರಿಗೂ ಕೂಡ ಧನ ಸಹಾಯ ಮಾಡಿದ್ದರು. ಇದರಿಂದ ಅವರು ಎಷ್ಟು ಕರುಣಾಶಾಲಿ ಮನುಷ್ಯ ಎಂದು ತಿಳಿಯುತ್ತದೆ. ಹೀಗೆ ಅವರು ಪ್ರಪಂಚದಾದ್ಯಂತ ಜನರ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದ್ದಾರೆ.
ಭಾರತೀಯ ಉದ್ಯಮ ಮತ್ತು ಸಮಾಜಕ್ಕೆ ರತನ್ ಟಾಟಾ ಅವರ ಕೊಡುಗೆಗಳನ್ನು ವ್ಯಾಪಕ ಗುರುತಿಸಲಾಗಿದೆ. ಇವರ ಇಂತಹ ಸಾಧನೆಗಳನ್ನು ಗುರುತಿಸಿ ಹಲವಾರು ಪುರಸ್ಕಾರಗಳು ಇವರನ್ನು ಅಲಂಕರಿಸಿವೆ. ಕೆಲವು ಪ್ರತಿಷ್ಠಿತ ಪಶಸ್ತಿಗಳು 2000ರಲ್ಲಿ ಪದ್ಮಭೂಷಣ, 2008ರಲ್ಲಿ ಪದ್ಮವಿಭೂಷಣ, ಸೇರಿ ಭಾರತದ ಅತ್ಯುನ್ನತ ನಾರಿಕ ಗೌರವಗಳು ಸಂದಿವೆ. 2012ರಲ್ಲಿ ಟಾಟಾ ಗ್ರೂಪ್ ಅಧ್ಯಕ್ಷ ಪದವಿಯಿಂದ ನಿವೃತ್ತರಾದ ನಂತರ ರತನ್ ಟಾಟಾ ಅವರು ಯುವ ಉದ್ಯಮಿಗಳಿಗೆ ಮಾರ್ಗದರ್ಶನ ಮಾಡುವುದು ಮುಂತಾದ ಲೋಕೋಪಕಾರಿ ಕೆಲಸಗಳನ್ನು ಮಾಡುತ್ತಿದ್ದರು.
ರತನ್ ಟಾಟಾ ಕೇವಲ ಉದ್ಯಮಿಯಾಗಿರಲಿಲ್ಲ, ಅವರು ನೈತಿಕ ನಾಯಕತ್ವ ಮತ್ತು ಸಾಮಾಜಿಕ ಜವಾಬ್ದಾರಿಗೆ ಮಾದರಿಯಾಗಿದ್ದರು. ಅವರ ದೃಷ್ಟಿ, ಸಮಗ್ರತೆ ಮತ್ತು ನಮ್ರತೆಯಿಂದ ಕೂಡಿದ ವ್ಯಕ್ತಿತ್ವ ಎಲ್ಲರಿಗೂ ಕೂಡ ಉದಾಹರಣೆಯಾಗಿದೆ. ಪ್ರಾಮಾಣಿಕತೆ ಮತ್ತು ಸಹಾನುಭೂತಿಯ ಮೌಲ್ಯಗಳಿಗೆ ನಿಷ್ಠರಾಗಿ ಟಾಟಾ ಗ್ರೂಪ್ ಅವರ ನಾಯಕತ್ವ ಮತ್ತು ಸಾಮಾಜಿಕ ಕಾರಣಗಳಿಗಾಗಿ ಅವರ ಬದ್ಧತೆ ಎಂದೆದಿಗೂ ಮರೆಯಲಾಗದಂತದ್ದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post