ಕಲ್ಪ ಮೀಡಿಯಾ ಹೌಸ್ | ಮಡಿಕೇರಿ |
ಬೃಹತ್ ಭೂ ಪರಿವರ್ತನೆ ಮತ್ತು ಭೂವಿಲೇವಾರಿ ಮಾಫಿಯಾದಿಂದ ಕೊಡವ ಲ್ಯಾಂಡ್ ನ್ನು ರಕ್ಷಿಸಿಕೊಳ್ಳಲು ಸಮಸ್ತ ಕೊಡವರು ಒಗ್ಗೂಡಿ ಹೋರಾಟ ನಡೆಸಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಕರೆ ನೀಡಿದ್ದಾರೆ.
ಸಿದ್ದಾಪುರದ ಬಿಬಿಟಿಸಿ ಸಂಸ್ಥೆಯ ಸುಮಾರು 2400 ಏಕರೆ ಕಾಫಿ ತೋಟ ಸೇರಿದಂತೆ ಕೊಡಗು ಜಿಲ್ಲೆಯಾದ್ಯಂತ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ತಕ್ಷಣ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸಿಎನ್‌ಸಿ ವತಿಯಿಂದ ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ಜನಜಾಗೃತಿ ಕಾರ್ಯಕ್ರಮ ನಡೆಯಿತು.
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಎನ್.ಯು.ನಾಚಪ್ಪ ಅವರು, ಭೂಮಾಫಿಯಾಗಳು ಹಾಗೂ ರಾಜಕೀಯ ಬೆಂಬಲಿತರು ಕೊಡಗಿನ ಕಾವೇರಿ ಜಲಾನಯನ ಪ್ರದೇಶದ ಭೂಮಿಗಳನ್ನು ದೊಡ್ಡ ಮಟ್ಟದಲ್ಲಿ ಖರೀದಿಸುತ್ತಿದ್ದು, ಕಪ್ಪು ಹಣದ ಚಲಾವಣೆಯಾಗುತ್ತಿದೆ. ಬೃಹತ್ ಕಾಫಿ ತೋಟಗಳ ಖರೀದಿಯ ನಂತರ ಅಕ್ಕಪಕ್ಕದ ಸಣ್ಣ ಹಿಡುವಳಿದಾರರ ಭೂಮಿಯನ್ನು ಹಣದ ಆಮಿಷವೊಡ್ಡಿ ಕಬಳಿಸಲಾಗುತ್ತಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ತಿರುಪತಿ ದೇವಸ್ಥಾನ ಸಮಿತಿಯಿಂದ “ಸಾಫ್ಟ್ ಮನಿ” ಹೆಸರಿನ ಬಡ್ಡಿ ರಹಿತ ಸಾಲ ದೊರೆಯುತ್ತಿದ್ದು, ದೊಡ್ಡ ಪ್ರಮಾಣದ ಈ ಹಣವನ್ನು ಗ್ರಾಮ ಗ್ರಾಮಗಳಲ್ಲಿ ಬಂಡವಾಳದ ರೂಪದಲ್ಲಿ ಹೂಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲೂ ಆಂಧ್ರದ ಹಣ ಬಳಕೆಯಾಗುತ್ತಿದ್ದು, ದೊಡ್ಡ ಪ್ರಮಾಣದ ಭೂಪರಿವರ್ತನೆ ಮತ್ತು ಭೂವಿಲೇವಾರಿಯಾಗುತ್ತಿದೆ ಎಂದು ಆರೋಪಿಸಿದರು.
ಪವಿತ್ರ ಕೊಡವ ಲ್ಯಾಂಡ್ ನಲ್ಲಿ ನಿತ್ಯ ಪ್ರವಾಸಿಗರಮೋಜು ಮಸ್ತಿ, ದೌರ್ಜನ್ಯ ನಡೆಯುತ್ತಿದೆ. ಇತ್ತೀಚೆಗೆ ಮೂರ್ನಾಡಿನಲ್ಲಿ ಕರ್ನಲ್ ಮರುವಂಡ ತಿಮ್ಮಯ್ಯ ಎಂಬುವವರ ಕಾರನ್ನು ಅತಿ ವೇಗವಾಗಿ ಬಂದ ಪ್ರವಾಸಿಗರು ಜಖಂಗೊಳಿಸಿದ್ದಾರೆ. ಕೋಟೆಬೆಟ್ಟದ ತಪ್ಪಲಿನಲ್ಲಿ ಮೂಲನಿವಾಸಿಗಳ ಮೇಲೆ ಪ್ರವಾಸಿಗರು ದೌರ್ಜನ್ಯ ನಡೆಸಿದ್ದಾರೆ. ಆದಾಯ ಕ್ರೋಢಿಕರಣಕ್ಕಾಗಿ ಸರ್ಕಾರ ಪ್ರವಾಸೋದ್ಯಮದ ಹೆಸರಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಂತಹ ಪ್ರಕೃತಿಗೆ ವಿರುದ್ಧವಾದ ಪ್ರಕ್ರಿಯೆಗಳಿಗೆ ಅವಕಾಶ ಹಾಗೂ ಅನುಕೂಲ ಕಲ್ಪಿಸುತ್ತಿದೆ. ಇದರ ಪರಿಣಾಮ ಪ್ರವಾಸಿಗರಿಂದಾಗಿ ಮೂಲನಿವಾಸಿಗಳಿಗೆ ರಕ್ಷಣೆ ಮತ್ತು ನೆಮ್ಮದಿ ಇಲ್ಲದಾಗಿದೆ. ಪ್ರವಾಸಿಗರ ದೌರ್ಜನ್ಯಕ್ಕೆ ಸಂಬಂಧಪಟ್ಟ ಇಲಾಖೆಗಳು ಕಡಿವಾಣ ಹಾಕಬೇಕು. ತಪ್ಪಿದಲ್ಲಿ ಸ್ಥಳೀಯರಿಗೆ ಉಳಿಗಾಲವಿಲ್ಲದಂತ್ತಾಗುತ್ತದೆ ಎಂದು ನಾಚಪ್ಪ ಆರೋಪಿಸಿದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮೂಲಕ ರೆಸಾರ್ಟ್ಗಳು, ದೈತ್ಯಾಕಾರದ ವಿಲ್ಲಾಗಳು, ಲೇಔಟ್ ಗಳು, ಮನೆಗಳು ಟೌನ್ ಶಿಪ್ ಗಳು, ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ವಾಣಜ್ಯ ಉದ್ದೇಶದ ಯೋಜನೆಗಳು ತಯಾರಾಗುತ್ತಿದೆ. ಇದು ಪವಿತ್ರ ಕೊಡವ ಲ್ಯಾಂಡ್ ನ ನಾಶಕ್ಕೆ ಕಾರಣವಾಗಬಹುದು.
ಯುನೆಸ್ಕೋದ ವಿಶ್ವ ಪರಂಪರೆಯ ತಾಣದ ಅಡಿಯಲ್ಲಿ ಬರುವ ತಡಿಯಂಡಮೋಲ್ ಗುಡ್ಡಗಳ ಕೆಳಗೆ 300 ಎಕರೆ ಕಾಫಿ ತೋಟಗಳು, ಮಕ್ಕಂದೂರಿನ ಪಶ್ಚಿಮ ಘಟ್ಟಗಳ ವಲಯದಲ್ಲಿ ಸಂಪೂರ್ಣವಾಗಿ ಅಕ್ರಮವಾಗಿ ನಿರ್ಮಿಸಲಾದ “ಮ್ಯಾರಿಯಟ್” ರೆಸಾರ್ಟ್ ಮತ್ತು 2018 ರ ಭೂಕುಸಿತದ ದುರಂತದ ಪ್ರದೇಶದಲ್ಲಿ ಮತ್ತೊಂದು ರೆಸಾರ್ಟ್ ಬರಲಿದೆ. ಪೊರಮಲೆನಾಡಿನ ಮೊಣ್ಣಂಗೇರಿ ಮತ್ತು ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ 3 ಪರ್ವತಗಳಿಗೆ ಹಾನಿ ಮಾಡಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಹೈದರಾಬಾದಿಯೊಬ್ಬರು ವಸತಿ ಕಾಲೋನಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.
ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳಲು ಕಾಫಿ ತೋಟವನ್ನು ಸಂಪೂರ್ಣವಾಗಿ ಖರೀದಿಸಿ ನಿವೇಶನಗಳನ್ನಾಗಿ ಮಾರಾಟ ಮಾಡಿದ ನಂತರ ಭೂಪರಿರ್ತನೆಗೆ ಅರ್ಜಿ ಸಲ್ಲಿಸಲಾಗುತ್ತಿದೆ. ಇಡೀ ಕಾಫಿ ತೋಟದ ಭೂಪರಿವರ್ತನೆಗೆ ಮುಂದಾದರೆ ಕಾನೂನಿನ ಅಡ್ಡಿ ಮಾತ್ರವಲ್ಲ ಹೋರಾಟಗಳು ನಡೆಯುತ್ತವೆ ಎನ್ನುವ ಆತಂಕ ಭೂಮಾಪಿಯಾಗಳಿಗಿದೆ.
ಬೃಹತ್ ರೆಸಾರ್ಟ್ಗಳ ನಿರ್ಮಾಣದಿಂದ ವ್ಯವಹಾರ ಕುಸಿದರೂ ಕಪ್ಪು ಹಣವನ್ನು ಬಿಳಿ ಮಾಡುವುದಕ್ಕಾಗಿ ಇದನ್ನು ಬಳಸುವ ಹುನ್ನಾರವಿದೆ. ಸಿದ್ದಾಪುರದ 2400 ಎಕರೆ ಬಿಬಿಟಿಸಿ ಕಾಫಿ ತೋಟದ ಭೂಪರಿವರ್ತನೆಯಿಂದ 2.80 ಲಕ್ಷ ಮಂದಿ, ತಡಿಯಂಡಮೋಲ್‌ನ ಕೆಳಗೆ 300 ಎಕರೆ ಕಾಫಿ ತೋಟಗಳ ಪರಿವರ್ತನೆಯಿಂದ 30 ಸಾವಿರ ಮತ್ತು ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದ ಭೂಪರಿವರ್ತನೆಯಿಂದ 10 ಸಾವಿರ ಮಂದಿ ನೆಲೆಸುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಕೊಡಗಿನಲ್ಲಿ ಜನಸಂಖ್ಯಾ ಸ್ಫೋಟ ಸಂಭವಿಸಿ ಆದಿಮಸಂಜಾತ ಬುಡಕಟ್ಟು ಜನಾಂಗ ಮೂಲನಿವಾಸಿ ಕೊಡವರ ಅಸ್ತಿತ್ವಕ್ಕೆ ದಕ್ಕೆ ಬರಬಹುದು.
ಸಿದ್ದಾಪುರದ ಬಿಬಿಟಿಸಿ ಕಾಫಿ ತೋಟದ 2400 ಎಕರೆ ಬಿಬಿಟಿಸಿ ಕಾಫಿ ತೋಟವನ್ನು ಪರಿವರ್ತಿಸುವ ಮೂಲಕ ದೈತ್ಯಾಕಾರದ ವಿಲ್ಲಾಗಳು, ಮೆಗಾ ಟೌನ್‌ಶಿಪ್‌ಗಳು ಮತ್ತು ಮನೆ ನಿವೇಶನಗಳನ್ನು ನಿರ್ಮಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.
ಯುನೆಸ್ಕೋದ ವಿಶ್ವ ಪರಂಪರೆಯ ತಾಣದ ಅಡಿಯಲ್ಲಿ ಬರುವ ತಡಿಯಂಡಮೋಲ್‌ನ ಕೆಳಗೆ 300 ಏಕರೆ ಕಾಫಿ ತೋಟಗಳು ಪರಿವರ್ತನೆಯಾಗಿದೆ. ಮಕ್ಕಂದೂರಿನ ಪಶ್ಚಿಮ ಘಟ್ಟಗಳ ವಲಯದಲ್ಲಿ ಅಕ್ರಮವಾಗಿ “ಮ್ಯಾರಿಯಟ್” ರೆಸಾರ್ಟ್ ಅನ್ನು ನಿರ್ಮಿಸಲಾಗಿದೆ. ಅಲ್ಲದೆ ಗಾಳಿಬೀಡಿನ ಹಸಿರು ಬೆಲ್ಟ್ ಪ್ರದೇಶದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಹೈದರಾಬಾದ್ ನವರು ಹೌಸಿಂಗ್ ಕಾಲೋನಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಅರೆಕಾಡ್‌ನಲ್ಲಿ ಡಾಬರ್ ಟೌನ್‌ಶಿಪ್‌ಗಳು ತಲೆ ಎತ್ತುತ್ತಿವೆ ಎಂದು ನಾಚಪ್ಪ ಆರೋಪಿಸಿದರು.
ಸರ್ಕಾರಗಳು ಡಾ.ಸ್ವಾಮಿನಾಥನ್ ಸಮಿತಿಯ ವರದಿಯನ್ನು ಉಲ್ಲಂಘಿಸಿವೆ. ಸ್ವಾಮಿನಾಥನ್ ತಮ್ಮ ವರದಿಯಲ್ಲಿ ಕೃಷಿಭೂಮಿಯನ್ನು ಹಾಗೆಯೇ ಉಳಿಸಿಕೊಳ್ಳಲು ಶಿಫಾರಸ್ಸು ಮಾಡಿದ್ದಾರೆ. ಲಭ್ಯವಿರುವ ಕೃಷಿಭೂಮಿಯ ಪ್ರಮಾಣ ಕಡಿಮೆಯಾದಂತೆ ಗ್ರಾಹಕರಿಗೆ ಲಭ್ಯವಿರುವ ಆಹಾರದ ಗುಣಮಟ್ಟ ಕಡಿಮೆಯಾಗುತ್ತದೆ. ಇದು ಆರ್ಥಿಕತೆಗೆ ಮಾತ್ರವಲ್ಲದೆ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಆರ್ಟಿಕಲ್ 51(ಎ), 51ಎ (ಎಫ್) – ನಮ್ಮ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಮೌಲ್ಯೀಕರಿಸಲು ಮತ್ತು ಸಂರಕ್ಷಿಸಲು, 51ಎ(ಜಿ)-ಕಾಡುಗಳು, ಸರೋವರಗಳು, ನದಿಗಳು ಮತ್ತು ವನ್ಯಜೀವಿಗಳನ್ನು ಒಳಗೊಂಡAತೆ ನೈಸರ್ಗಿಕ ಆರ್ಥಿಕತೆಯನ್ನು ಮೌಲ್ಯೀಕರಿಸಲು, ರಕ್ಷಿಸಲು, ಸುಧಾರಿಸಲು ಮತ್ತು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಲು, 51ಎ(ಎನ್)-ವೈಜ್ಞಾನಿಕ ಮನೋಭಾವ, ಮಾನವತಾವಾದ, ವಿಚಾರಣೆ ಮತ್ತು ಸುಧಾರಣೆಯ ಮನೋಭಾವವನ್ನು ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ. ಕುಟ್ಟ-ಶ್ರೀಮಂಗಲದಲ್ಲಿ ಉದ್ದೇಶಿತ ಪಟ್ಟಣಗಳು ಮತ್ತು ಆರ್ಥಿಕ ಕಾರಿಡಾರ್‌ಗಳಿಗಾಗಿ ಭೂಮಿಯನ್ನು ಜೂಜಾಟದ ರೀತಿಯಲ್ಲಿ ಖರೀದಿಸಲಾಗುತ್ತಿದೆ. ಬೆಂಗಳೂರು, ತಿರುವನಂತಪುರ, ಚೆನ್ನೆöÊ, ಹೈದರಬಾದ್ ಸೇರಿದಂತೆ ದೇಶದ ವಿವಿಧೆಡೆಯ ಭೂಮಾಫಿಯ ಮತ್ತು ರಾಜಕೀಯ ಸಂಯೋಜಿತ ಗುಂಪುಗಳು ಈ ಕಾರ್ಯದಲ್ಲಿ ತೊಡಗಿವೆ. ಶ್ರೀಮಂಗಲ ಮತ್ತು ಕುಟ್ಟ ಭಾಗದಲ್ಲಿ ಗಡಿ ಜಿಲ್ಲೆ ಹಾಗೂ ಗಡಿರಾಜ್ಯದ ಮತ ಬ್ಯಾಂಕ್ ಗಳನ್ನು ಸೆಳೆಯುವ ದೊಡ್ಡ ಷಡ್ಯಂತ್ರವೂ ನಡೆಯುತ್ತಿದೆ ಎಂದು ನಾಚಪ್ಪ ಆರೋಪಿಸಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು “ಕೊಡವ ಲ್ಯಾಂಡ್” ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್‌ಟಿ ಟ್ಯಾಗ್ ನೀಡುವುದು ಅಗತ್ಯವೆಂದು ತಿಳಿಸಿದರು.
ನಮ್ಮ ಅನುವಂಶಿಕ ಭೂಮಿಯನ್ನು ಉಳಿಸಿಕೊಳ್ಳಲು, ಮಾತೃಭೂಮಿ, ಶಾಶ್ವತವಾದ ದೀರ್ಘಕಾಲಿಕ ಜಲಸಂಪನ್ಮೂಲಗಳು, ನಯನ ಮನೋಹರ ಪರಿಸರ, ಭೂಗೋಳವನ್ನು ನೈಸರ್ಗಿಕವಾಗಿ ವಿಹಂಗಮ ಪರ್ವತಗಳು, ಬೆಟ್ಟಗಳು, ನಿತ್ಯಹರಿದ್ವರ್ಣದ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಜೈವಿಕ ವೈವಿಧ್ಯತೆ, ಕೊಡವ ಬುಡಕಟ್ಟು ಜನಾಂಗದ ಶ್ರೀಮಂತ ಜಾನಪದ ಪರಂಪರೆ ಮತ್ತು ಭೂಮಿಯೊಂದಿಗೆ ಬೆಸೆದುಕೊಂಡಿರುವ ಕೊಡವರ ಯೋಧರ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ. ಈ ಮಣ್ಣಿನಲ್ಲಿ ನಮ್ಮ ಐತಿಹಾಸಿಕ ನಿರಂತರತೆಗಾಗಿ ಸ್ವಯಂ-ಆಡಳಿತವನ್ನು ಸಂವಿಧಾನದ ವಿಧಿ 244, 371 ಆರ್/ಡಬ್ಲ್ಯೂ 6 ಮತ್ತು 8ನೇ ಶೆಡ್ಯೂಲ್ ಮತ್ತು ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳು ವಿಶ್ವ ರಾಷ್ಟ್ರ ಸಂಸ್ಥೆ ಹೊರಡಿಸಿರುವ ಆದಿಮಸಂಜಾತ ಜನಾಂಗದ ಹಕ್ಕುಗಳ ಅಂತರಾಷ್ಟ್ರೀಯ ಕಾನೂನಿನಂತೆ ಜಾರಿಯಾಗುವ ಅಗತ್ಯವಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಅಗತ್ಯವಾಗಿದ್ದು, ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.
ಮಾನವ ಸರಪಳಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಚೇಂದಿರ ಶೈಲ, ಬಟ್ಟಿಯಂಡ ಕೃಪ ಸೋಮಯ್ಯ, ಅನನ್ಯ ಸೋಮಯ್ಯ, ಅನಿಂದ್ಯ ಸೋಮಯ್ಯ, ಕರ್ನಲ್ ಬಿ.ಎಂ.ಪಾರ್ವತಿ, ಬಲ್ಲಡಿಚಂಡ ಬೇಬಿ ಮೇದಪ್ಪ, ಮುದ್ದಿಯಡ ಲೀಲಾವತಿ, ಡಾ.ಕಾಳಿಮಾಡ ಶಿವಪ್ಪ, ಕೊಲ್ಲಿರ ಗಯಾ, ಕಂಬಿರಂಡ ಬೋಪಣ್ಣ, ಕಾಡ್ಯಮಾಡ ಗೌತಮ್, ಬಾಚರಣಿಯಂಡ ಚಿಪ್ಪಣ್ಣ ಜಮ್ಮಡ ಮೋಹನ್, ಮದ್ರಿರ ಕರುಂಬಯ್ಯ, ಬುಟ್ಟಿಯಂಡ ಹರೀಶ್, ಕೋದೇಂಗಡ ನರೇನ್, ಸುಳ್ಳಿಮಾಡ ಪ್ರಭು, ಜಮ್ಮಡ ಜಯ, ಕಾಂಡೇರ ಸುರೇಶ್, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಜಪ್ಪು, ಆಪ್ಪೆಂಗಡ ಮಾಲೆ, ಕಿರಿಯಮಾಡ ಶರೀನ್, ಅರೆಯಡ ಗಿರೀಶ್, ಚಂಬಂಡ ಜನತ್, ಪಾರುವಂಗಡ ನವೀನ್, ಮಚ್ಚಮಾಡ ಬೋಸ್, ಮಚ್ಚಮಾಡ ಸುರೇಶ್, ಪಟ್ರಪಂಡ ಕುಟ್ಟಪ್ಪ, ಬೆಪ್ಪಡಿಯಂಡ ದಿನು, ಕೊಣಿಯಂಡ ಸಂಜು, ಪೊನ್ನಲ್‌ತಂಡ ಕಿರಣ್, ಮೂಕೊಂಡ ದಿಲೀಪ್, ಮಲ್ಲಂಡ ತಮ್ಮಿ, ಮುದ್ದಿಯಡ ಮೇದಪ್ಪ ಅವರುಗಳು ಬೃಹತ್ ಭೂಪರಿವರ್ತನೆ, ಭೂವಿಲೇವಾರಿ, ಕೊಡವ ಲ್ಯಾಂಡ್ ಮತ್ತು ಎಸ್‌ಟಿ ಟ್ಯಾಗ್ ಪರ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಜು.1 ರಂದು ಕಕ್ಕಬ್ಬೆ ಹಾಗೂ ಜು.6 ರಂದು ಚೆಟ್ಟಳ್ಳಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ ಎಂದು ನಾಚಪ್ಪ ಇದೇ ಸಂದರ್ಭ ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post