ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬಳ್ಳಾರಿ: ಪ್ರತಿ ವರುಷದಂತೆ ಈ ಬಾರಿಯು ಸಹ ವಿಜಯನಗರ ಗತ ವೈಭವದ ಸೂಚಿಸುವ ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ಹೊಸಪೇಟೆಯಲ್ಲಿ ಡಿ.30ರಂದು ನಡೆಯಲಿದೆ.
ಭಾರತ ಸರ್ಕಾರದ ವಾರ್ತಾ ಮತ್ತು ಪ್ರಚಾರ ಮಂತ್ರಾಲಯದ ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ (ಸಂಗೀತ ಮತ್ತು ನಾಟಕ ವಿಭಾಗ) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾಡಳಿತ ಸಹಯೋಗದಲ್ಲಿ ಹಂಪಿ ಉತ್ಸವ-2020ರ ನಿಮಿತ್ತ ವಿಜಯನಗರ ವೈಭವ ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಹಂಪಿಯ ಆನೆ ಲಾಯದ ಆವರಣದಲ್ಲಿ ಜ.10ರಿಂದ 16ರವರೆಗೆ ಆಯೋಜಿಸಲಾಗಿದೆ.
ಸದರಿ ಕಾರ್ಯಕ್ರಮಕ್ಕೆ ಅಂದಾಜು 100 ಜನ ಕಲಾವಿದರ ಅವಶ್ಯಕತೆ ಇದ್ದು, ಸದರಿ ಕಲಾವಿದರ ಆಯ್ಕೆ ಪ್ರಕ್ರಿಯೆ ಹೊಸಪೇಟೆಯ ಸಂಡೂರು ರಸ್ತೆಯಲ್ಲಿರುವ ನೌಕರರ ಭವನದಲ್ಲಿ ಡಿ.30ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಆಸಕ್ತ ಕಲಾವಿದರು, ಭರತ ನಾಟ್ಯ ಪರಿಣಿತರು, ಬಾಲ ಕಲಾವಿದರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು 02 ಸ್ಟ್ಯಾಂಪ್ ಸೈಜ್ ಭಾವಚಿತ್ರ, ವಿಳಾಸ ಖಚಿತಪಡಿಸುವ ಆಧಾರ್ ಕಾರ್ಡ್ ಅಥವಾ ಓಟರ್ ಐಡಿ ಅಥವಾ ಇತರೆ ದಾಖಲೆಗಳೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ನೀಡಲಾಗುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, ಮೇಲೆ ತಿಳಿಸಿದ ದಾಖಲೆಗಳನ್ನು ಲಗತ್ತಿಸಿ, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಿದೆ.
ಆಯ್ಕೆಯಾದ ಕಲಾವಿದರು 07 ದಿನಗಳ ಪೂರ್ವ ಸಿದ್ಧತಾ ತರಬೇತಿ ಹಾಗೂ 07 ದಿನಗಳ ಪ್ರದರ್ಶನ ಒಟ್ಟು 14 ದಿನಗಳವರೆಗೆ ಯಾವುದೇ ಗೈರು ಹಾಜರಾತಿ ಇಲ್ಲದೇ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ.
ಕಲಾವಿದರ ಆಯ್ಕೆಯು ಆಯ್ಕೆ ಸಮಿತಿಯ ಅಂತಿಮ ತೀರ್ಮಾನಕ್ಕೆ ಒಳಪಟ್ಟಿರುತ್ತದೆ ಎಂದು ಪ್ರಾದೇಶಿಕ ಜನ ಸಂಪರ್ಕ ಕಾರ್ಯಾಲಯ ಸಂಗೀತ ಮತ್ತು ನಾಟಕ ವಿಭಾಗ ದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
(ವರದಿ: ಮರಳೀಧರ ನಾಡಿಗೇರ್, ಹೊಸಪೇಟೆ)
Get in Touch With Us info@kalpa.news Whatsapp: 9481252093






Discussion about this post