ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಅಣೆಕಟ್ಟೆಗೆ ಅಪಾರ ಪ್ರಮಾಣದ ಒಳಹರಿವಿದ್ದು, 39,245 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಭದ್ರಾ ಡ್ಯಾಂ ಒಳಹರಿವು 34,430 ಕ್ಯೂಸೆಕ್ ಗೆ ಏರಿಕೆಯಾಗಿದೆ. ಡ್ಯಾಂನ ನೀರಿನ ಮಟ್ಟವನ್ನು 184.9 (ಗರಿಷ್ಠ ಮಟ್ಟ 186) ಅಡಿಗೆ ಕಾಯ್ದುಕೊಳ್ಳಲಾಗಿದ್ದು, 39,245 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಡ್ಯಾಂನಿಂದ ಹೊರಹರಿವಿನ ಪ್ರಮಾಣ ಏರಿಕೆಯಾಗಿರುವುದರಿಂದ, ಭದ್ರಾವತಿ ಮೂಲಕ ಹಾದು ಹೋಗಿರುವ ಭದ್ರಾ ನದಿಯು ಅಪಾಯದ ಮಟ್ಟದಲ್ಲಿ ಹರಿಯಲಾರಂಭಿಸಿದೆ. ಹೊಸ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಹಾಗೆಯೇ ನದಿ ಪಾತ್ರದ ಕವಲುಗುಂದಿ ಏರಿಯಾದಲ್ಲಿ ಆರೇಳು ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಆಡಳಿತ ವಳ್ಳುವರ್ ಸಮುದಾಯ ಭವನದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರ ತೆರೆದು, ನಿವಾಸಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಿದೆ.
ಭದ್ರಾ ಡ್ಯಾಂನಿಂದ ಹೊರ ಬಿಡುವ ನೀರಿನ ಪ್ರಮಾಣ ಹೆಚ್ಚಾದರೆ ಗುಂಡೂರಾವ್ ಶೆಡ್, ಅಂಬೇಡ್ಕರ್ ನಗರ, ಎಕಿನ್ಷಾ ಕಾಲೋನಿ ಮೊದಲಾದೆಡೆ ನೀರು ನುಗ್ಗುವ ಆತಂಕವಿದೆ. ಈಗಾಗಲೇ ನಗರಸಭೆ ಆಡಳಿತ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















