ಮುಂಬೈ: ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಿರುದ್ಧ ಯಾವುದೇ ಕಾರಣಕ್ಕೂ ನಾವು ಕ್ರಿಕೆಟ್ ಆಡುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.
ಹರಭಜನ್ ಸಿಂಗ್ ಸೇರಿದಂತೆ ಪ್ರಮುಖ ಕ್ರಿಕೆಟ್ ತಾರೆಗಳೂ ಹಾಗೂ ಕ್ರೀಡಾ ಪ್ರೇಮಿಗಳು ಪಾಕ್ ವಿರುದ್ಧ ಕ್ರಿಕೆಟ್ ಆಡಬಾರದು ಎಂದು ಒತ್ತಡ ಹೇರಿದ ಹಿನ್ನೆಲೆಯಲ್ಲೆ ಬಿಸಿಸಿಐ ಈ ನಿರ್ಧಾರಕ್ಕೆ ಬಂದಿದೆ.
ಕೇಂದ್ರ ಸರ್ಕಾರ ಪಾಕಿಸ್ಥಾನದ ವಿರುದ್ಧ ಕ್ರಿಕೆಟ್ ಆಡುವುದು ಬೇಡ ಎಂದು ನಿರ್ಧರಿಸಿದರೆ ಖಂಡಿತಾ ತಾನು ಆ ದೇಶದ ತಂಡದ ವಿರುದ್ಧ ಕ್ರಿಕೆಟ್ ಆಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.
ಬಿಸಿಸಿಐ ಪದಾಧಿಕಾರಿಗಳು ತಮ್ಮ ಆಂತರಿಕ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ನಿರ್ಣಯಕ್ಕೆ ತಾವು ಬದ್ಧರಾಗಿರಲು ಬಿಸಿಸಿಐ ಪದಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಐಸಿಸಿ ವಿಶ್ವಕಪ್ ಕುರಿತೂ ಮಾಹಿತಿ ನೀಡಿರುವ ಬಿಸಿಸಿಐ, ಈಗಾಗಲೇ ವಿಶ್ವಕಪ್ ಸರಣಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇವೆ. ಹೀಗಾಗಿ ಈಗಾಗಲೇ ಸರಣಿಯ ಸಿದ್ಧತಾ ಕಾರ್ಯಗಳು ಶುರುವಾಗಿದ್ದು, ಈ ಹಂತದಲ್ಲಿ ಐಸಿಸಿ ಕೂಡ ಏನೂ ಮಾಡಲು ಸಾಧ್ಯವಿಲ್ಲ. ಅಂತೆಯೇ ಭಾರತ ಸರ್ಕಾರ ನಿರ್ಣಯ ಕೈಗೊಂಡರೆ ಅದರ ಸಂಬಂಧವೂ ಐಸಿಸಿ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
Discussion about this post